
ಹೊಸಪೇಟೆಯ ಎಂ.ಜೆ.ನಗರದಲ್ಲಿ ಬುಧವಾರ ಶಾಸಕ ಎಚ್.ಆರ್.ಗವಿಯಪ್ಪ ಅವರು 10 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು
–ಪ್ರಜಾವಾಣಿ ಚಿತ್ರ
ತಲಾ ₹2.45 ಕೋಟಿ ವೆಚ್ಚದ ಟ್ಯಾಂಕ್‌ಗಳು | ಇನ್ನೂ 2 ಟ್ಯಾಂಕ್‌ಗಳಿಗೆ ಶೀಘ್ರ ಗುದ್ದಲಿಪೂಜೆ | ವರ್ಷದೊಳಗೆ ಸಿದ್ಧ, ಬಳಿಕ ಶೇ 20ರಷ್ಟು ನೀರಿನ ಸಮಸ್ಯೆ ಶಮನ
ಹೊಸಪೇಟೆ (ವಿಜಯನಗರ): ನಗರಕ್ಕೆ ಇನ್ನು ಒಂದು ತಿಂಗಳೊಳಗೆ 1 ಕೋಟಿ ಲೀಟರ್‌ನಷ್ಟು ನೀರನ್ನು ಶುದ್ಧೀಕರಿಸಿ ಪಂಪ್ ಮಾಡುವ ವ್ಯವಸ್ಥೆ ಜಾರಿಗೆ ಬರಲಿದ್ದು, ಆಗ ಪ್ರತಿದಿನ ಅರ್ಧ ಗಂಟೆಯಷ್ಟು ಹೊತ್ತು ನೀರು ಪೂರೈಸುವುದು ಸಾಧ್ಯವಾಗಲಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಅಮೃತ್ ನಗರೋತ್ಥಾನ ಯೋಜನಯಡಿಯಲ್ಲಿ ನಗರದ ಎಂ.ಜೆ.ನಗರ ಮತ್ತು ಎಂ.ಪಿ.ಪ್ರಕಾಶ್ ನಗರಗಳಲ್ಲಿ ತಲಾ 10 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಈ ಮಾಹಿತಿ ನೀಡಿದರು.
‘ನಗರಾಭಿವೃದ್ಧಿ ಇಲಾಖೆಯಿಂದ ₹2 ಕೋಟಿ ಅನುದಾನ ಬಂದ ತಕ್ಷಣ ಈಗಾಗಲೇ ನಿರ್ಮಾಣವಾಗಿರುವ ನೀರು ಸಂಗ್ರಹಾಗಾರದಿಂದ ಪೈಪ್‌ಲೈನ್ ಅಳವಡಿಕೆ ನಡೆದು ಟ್ಯಾಂಕ್‌ಗಳಿಗೆ ನೀರು ಹರಿಸಲು ಸಿದ್ಧತೆ ನಡೆದಿದೆ. 15 ದಿನದೊಳಗೆ ಅನುದಾನ ಬಿಡುಗಡೆ ಮಾಡುವ ಭರವಸೆ ಸಿಕ್ಕಿದೆ. ಸದ್ಯ ಪ್ರತಿದಿನ ಮೂರು ಪಾಳಿಯಲ್ಲಿ ತಲಾ 8 ಲಕ್ಷ ಲೀಟರ್ ನೀರಿನ ಪಂಪಿಂಗ್ ಆಗುತ್ತಿದ್ದು, ಮುಂದೆ 28 ಲಕ್ಷ ಲೀಟರ್ ನೀರಿನ ಪಂಪಿಂಗ್ ಆಗಲಿದೆ. ಆಗ ದಿನಕ್ಕೆ 1 ಕೋಟಿ ಲೀಟರ್‌ಗೂ ಅಧಿಕ ನೀರು ನಗರ, ಸುತ್ತಮುತ್ತಲಿನ ಟ್ಯಾಂಕ್‌ಗಳಿಗೆ ಪೂರೈಕೆಯಾಗಲಿದೆ’ ಎಂದು ಶಾಸಕರು ಹೇಳಿದರು.
₹390 ಕೋಟಿಯ ಯೋಜನೆ: ಕೆಎಂಇಆರ್‌ಸಿಯ ₹390 ಕೋಟಿ ಅನುದಾನದಲ್ಲಿ ನಗರಕ್ಕೆ ಪ್ರತ್ಯೇಕ 70 ಎಂಎಲ್‌ಡಿ ನೀರು ಶುದ್ಧೀಕರಣ ಘಟಕ ಹಾಗೂ ನೀರು ಪೂರೈಕೆ ಯೋಜನೆಯ ಟೆಂಡರ್ ಆಗಿದೆ ಎಂಬ ಮಾಹಿತಿ ಇದೆ. ಅದರ ಬಗ್ಗೆ ಸಚಿವ ಬೈರತಿ ಸುರೇಶ್ ಸಹಿತ ಹಲವು ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ನಗರಸಭೆಯ ಎಲ್ಲ ಸದಸ್ಯರ ವಿಶ್ವಾಸ ಪಡೆದುಕೊಂಡು ಈ ಯೋಜನೆ ಕೈಗೆತ್ತಿಕೊಳ್ಳುವುದು ನಿಶ್ಚಿತ. ಜೋಳದರಾಶಿ ಗುಡ್ಡ, ಜಂಬುನಾಥ ಗುಡ್ಡ, ಕಾರಿಗನೂರುಗಳಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಿ ನೀರು ಹರಿಸಲಾಗುವುದು. ಅದು ಜಾರಿಗೆ ಬಂದರೆ ನಗರದ ಜನಸಂಖ್ಯೆ ಎಂಟು ಲಕ್ಷಕ್ಕೆ ಹೆಚ್ಚಿದರೂ ನೀರಿನ ಸಮಸ್ಯೆ ಅಗುವುದಿಲ್ಲ. ಸದ್ಯ ಪ್ರತಿದಿನ 38 ಎಂಎಲ್‌ಡಿ ನೀರು ಶುದ್ಧೀಕರಣ ವ್ಯವಸ್ಥೆ ಇದೆ ಎಂದು ಶಾಸಕರು ಹೇಳಿದರು.
ನಗರದಲ್ಲಿ ರಸ್ತೆ ಕಾಮಗಾರಿ ಸಹಿತ ಇತರ ಹಲವು ಕಾಮಗಾರಿಗಳನ್ನು 38 ಗುತ್ತಿಗೆದಾರರಿಗೆ ವಹಿಸಲಾಗಿದೆ. ಹಾಗಾಗಿ ವಿಳಂಬವಿಲ್ಲದೆ ಕೆಲವೇ ತಿಂಗಳಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.
ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ಶರವಣ, ಪೌರಾಯುಕ್ತ ಎ.ಶಿವಕುಮಾರ್. ನಗರಸಭೆ ಸದಸ್ಯರಾದ ರಮೇಶ್ ಗುಪ್ತ, ಎಚ್.ಕೆ.ಮಂಜುನಾಥ್ ಇತರರು ಇದ್ದರು.
ಹಂಪಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವುದರ ಜತೆಗೆ ಮುಖ್ಯ ವೇದಿಕೆಯಲ್ಲಿ ಅವರಿಗೆ ಕಾರ್ಯಕ್ರಮ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದುಎಚ್.ಆರ್.ಗವಿಯಪ್ಪ ಶಾಸಕ
ಹಂಪಿ ಉತ್ಸವ ಸಮಯದಲ್ಲೇ ಜಿಲ್ಲಾಸ್ಪತ್ರೆಗೆ ಚಾಲನೆ
ಹಂಪಿ ಉತ್ಸವ ಫೆ.13ರಿಂದ ಆರಂಭವಾಗಲಿದ್ದು ಅದೇ ಸಮಯದಲ್ಲಿ 250 ಹಾಸಿಗೆಗಳ ನೂತನ ಜಿಲ್ಲಾ ಆಸ್ಪತ್ರೆಯನ್ನು ಉದ್ಘಾಟಿಸುವ ಉದ್ದೇಶ ಇದೆ. ಆರಂಭದಲ್ಲಿ ಏಳು ವಿಭಾಗಗಳು ಕೆಲಸ ಮಾಡಲಿದ್ದು ಹಂತಹಂತವಾಗಿ ವಿಭಾಗಗಳು ಮೂಲಸೌಲಭ್ಯಗಳನ್ನು ಹೆಚ್ಚಿಸಲಾಗುವುದು. ಈಗಾಗಲೇ ಈ ನಿಟ್ಟಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ. ಇದು ಮೊದಲನೇ ಹಂತವಾಗಿದ್ದು ಎರಡನೇ ಹಂತದಲ್ಲಿ ಆಸ್ಪತ್ರೆಯನ್ನು 400 ಹಾಸಿಗೆಗೆ ಹೆಚ್ಚಿಸಿ ದೊಡ್ಡ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಇದಕ್ಕೆಲ್ಲ ಎರಡರಿಂದ ಮೂರು ವರ್ಷ ಬೇಕಾಗಬಹುದು ಎಂದು ಶಾಸಕ ಗವಿಯಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.