ಹರಪನಹಳ್ಳಿ: ಪ್ರತಿ ಮನೆಗೆ ನೀರು ಒದಗಿಸುವ ಘೋಷಣೆಯಿಂದ ಆರಂಭವಾದ ಜಲಜೀವನ್ ಮಿಷನ್ ಯೋಜನೆಯಡಿ ವಿವಿಧೆಡೆ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣಕ್ಕೆ ಅನುಮತಿ ನೀಡಲು ಪುರಾತತ್ವ ಇಲಾಖೆ ಮತ್ತು ಅರಣ್ಯ ಇಲಾಖೆಗಳು ಹಿಂದೇಟು ಹಾಕುತ್ತಿರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ.
ತಾಲ್ಲೂಕಿನ ನಿಚ್ಚವ್ವನಹಳ್ಳಿ, ಚಿಗಟೇರಿ ಒಳಗೊಂಡು 107 ಹಳ್ಳಿಗಳಿಗೆ ತುಂಗಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರು ಒದಗಿಸುವ ಅಂದಾಜು ₹279 ಕೋಟಿ ವೆಚ್ಚದ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ 330 ಕಿ.ಮೀ ಪೈಕಿ 295 ಕಿ.ಮೀ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ನದಿಯಿಂದ ನೀರೆತ್ತಲು ಕಡತಿ ಬಳಿ ಜಾಕ್ವೆಲ್ ನಿರ್ಮಾಣವಾಗುತ್ತಿದ್ದು, ಆ ನೀರನ್ನು ವಟ್ಲಹಳ್ಳಿಯ ಘಟಕದಲ್ಲಿ ನೀರು ಶುದ್ಧೀಕರಿಸುವ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ.
ಅಲ್ಲಿಂದ ಜಿತ್ತಿನಕಟ್ಟೆ ಮಾಸ್ಟರ್ ಟ್ಯಾಂಕ್ ಮೂಲಕ ವಲಯ ನೀರು ಸಂಗ್ರಹ ಟ್ಯಾಂಕ್‌ಗಳಿಗೆ ಬಂದು ಸೇರುತ್ತದೆ. 7 ಟ್ಯಾಂಕ್‍ಗಳ ನೀರು ಗುರುತ್ವಾಕರ್ಷಣೆ ಬಲದಿಂದ ಆಯಾ ವ್ಯಾಪ್ತಿಯ 107 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದೆ.
ಅಂದುಕೊಂಡ ಸಮಯಕ್ಕೆ ಅನುಮತಿ ದೊರೆತಿದ್ದರೆ ಈ ಮಳೆಗಾಲಕ್ಕೆ ಶುದ್ಧ ಕುಡಿಯುವ ನೀರು ದೊರೆತು 107 ಹಳ್ಳಿಯ ಜನರು ಕುಡಿಯುವ ನೀರಿಗಾಗಿ ಪರದಾಡುವುದು ತಪ್ಪುತ್ತಿತ್ತು.
ಈ ಯೋಜನೆಯಿಂದ ಅಡವಿಹಳ್ಳಿ, ಬೆಣ್ಣಿಹಳ್ಳಿ, ಚಟ್ನಿಹಳ್ಳಿ, ಹೊಸಕೋಟೆ, ಚಿಗಟೇರಿ, ಮತ್ತಿಹಳ್ಳಿ, ಕಡಬಗೆರೆ, ನಿಚ್ಚವ್ವನಹಳ್ಳಿ, ಮೈದೂರು, ಪುಣಬಗಟ್ಟ, ಸಾಸ್ವಿಹಳ್ಳಿ, ಉಚ್ಚಂಗಿದುರ್ಗ, ತೌಡೂರು, ನಂದಿಬೇವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 107 ಹಳ್ಳಿಯ ಮನೆ ಮನೆಗೆ ತುಂಗಭದ್ರಾ ನದಿಯಿಂದ ಶುದ್ಧೀಕರಿಸಿದ ಕುಡಿಯುವ ನೀರು ತಲುಪಲಿದೆ.
ಈಗಾಗಲೇ ತೆಲಿಗಿ, ಹಾರಕನಾಳ ಇತರೆ 85 ಹಳ್ಳಿ, ಕಣವಿ ಮತ್ತು ಇತರೆ 21 ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಅದರಂತೆ 107 ಹಳ್ಳಿಗಳ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.
ಒಂದೂವರೆ ವರ್ಷದಿಂದ ಅನುಮತಿಗಾಗಿ ನಿರೀಕ್ಷೆ
ಟ್ಯಾಂಕ್‌ಗಳನ್ನು ನಿರ್ಮಿಸಲು ಆರು ಕಡೆಯ ಜಾಗವು ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ. ಇತಿಹಾಸ ಪ್ರಸಿದ್ಧ ಉಚ್ಚಂಗಿದುರ್ಗ ಗುಡ್ಡದಲ್ಲಿ ಒಂದು ಟ್ಯಾಂಕ್ ನಿರ್ಮಿಸಬೇಕಾಗಿದ್ದು ಅರಣ್ಯ ಮತ್ತು ಪುರಾತತ್ವ ಇಲಾಖೆ ಅನುಮತಿ ಅಗತ್ಯವಿದೆ. ಇಲ್ಲಿ ಟ್ಯಾಂಕ್ ನಿರ್ಮಿಸಲು ಒಪ್ಪಿಗೆಗಾಗಿ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಎರಡು ಇಲಾಖೆಗಳಿಗೆ ಪತ್ರ ಬರೆದು ಅನುಮತಿ ಕೇಳಿದ್ದಾರೆ ಆದರೆ ಒಂದೂವರೆ ವರ್ಷವಾದರೂ ಅನುಮತಿ ಸಿಗದಿರುವ ಕುರಿತಂತೆ ಎಇಇ ಕಿರಣ್ ನಾಯ್ಕ ಅವರು ಪ್ರಗತಿ ಪರಿಶೀಲನೆ ಸಭೆಯಲ್ಲೇ ಹೇಳಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು.
ಗುಡ್ಡದ ಮೇಲೆ ಟ್ಯಾಂಕ್ ನಿರ್ಮಿಸಿದರೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗಕ್ಕೆ ಬಂದು ಹೋಗುವ ಲಕ್ಷಾಂತರ ಭಕ್ತರು ಸಮೀಪದ ಹಲವು ಹಳ್ಳಿಗಳಿಗೆ ಅನುಕೂಲ ಆಗುತ್ತದೆ ಹಾಗಾಗಿ ಪುರಾತತ್ವ ಮತ್ತು ಅರಣ್ಯ ಇಲಾಖೆ ವಿಳಂಬ ಮಾಡದೇ ಅನುಮತಿ ನೀಡಬೇಕು.ಹಂಚಿನಮನೆ ಕೆಂಚಪ್ಪ, ಪುಣಬಗಟ್ಟಿ
ಚಿಗಟೇರಿ ಹೋಬಳಿಯ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ ಬೇಸಿಗೆ ಸಮಯದಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಇದೆ ಬಹು ಗ್ರಾಮ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕುಸಣ್ಣಲಿಂಗನಗೌಡ, ವಕೀಲರು, ಹರಪನಹಳ್ಳಿ
ಹಗರಿ ಹಳ್ಳದ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಜಲ ಜೀವನ್ ಮಿಷನ್ ನಡಿ 107 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಶೀಘ್ರ ಪೂರ್ಣಗೊಳಿಸಲು ಅರಣ್ಯ ಮತ್ತು ಪುರಾತತ್ವ ಇಲಾಖೆ ಅನುಮತಿ ನೀಡಬೇಕುಪಿ. ಚೆನ್ನಮ್ಮ, ಮತ್ತಿಹಳ್ಳಿ
6 ಕಡೆಗೆ ನೀರು ಸಂಗ್ರಹಾಗಾರ ಟ್ಯಾಂಕ್ ನಿರ್ಮಿಸಲು ಅರಣ್ಯ ಇಲಾಖೆ ಜೊತೆ ಪತ್ರ ವ್ಯವಹಾರ ನಡೆಸಿದ್ದು ಅನುಮತಿ ದೊರೆಯುವ ನಿರೀಕ್ಷೆಯಿದೆ. ಉಚ್ವಂಗಿದುರ್ಗದ್ದು ಇನ್ನೂ ಅಂತಿಮವಾಗಿಲ್ಲದೀಪಾ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.