ADVERTISEMENT

ಬಿಜೆಪಿ- ಕಾಂಗ್ರೆಸ್ ಜೆಂಡಾ ಬೇರೆ ಅಜೆಂಡಾ ಒಂದೇ: ರವಿ ಕೃಷ್ಣಾರೆಡ್ಡಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಮೇ 2023, 13:51 IST
Last Updated 5 ಮೇ 2023, 13:51 IST
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಎಲ್.ಅನಿಲ್ ಕುಮಾರ್ ಪರ ರವಿ ಕೃಷ್ಣಾರೆಡ್ಡಿ ಮತಯಾಚಿಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಎಲ್.ಅನಿಲ್ ಕುಮಾರ್ ಪರ ರವಿ ಕೃಷ್ಣಾರೆಡ್ಡಿ ಮತಯಾಚಿಸಿದರು.   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ‘ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಜೆಂಡಾ ಬೇರೆಯಾಗಿರಬಹುದು, ಆದರೆ, ಜನರ ತೆರಿಗೆ ಹಣ ಸುಲಿಗೆ ಮಾಡುವಲ್ಲಿ ಈ ಮೂರು ಪಕ್ಷಗಳ ಅಜೆಂಡಾ ಒಂದೇ ಆಗಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ವಾಗ್ದಾಳಿ ನಡೆಸಿದರು.

ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಶುಕ್ರವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಎಲ್.ಅನಿಲ್ ಕುಮಾರ್ ಪರ ಮತಯಾಚಿಸಿ ಮಾತನಾಡಿದರು.

‘ರಾಜ್ಯದಲ್ಲಿ ಮೂರು ಪ್ರಮುಖ ಪಕ್ಷಗಳು ಪರಮಭ್ರಷ್ಟ ರಾಜಕೀಯ ಪಕ್ಷಗಳಾಗಿವೆ. ಅಕ್ರಮ ಎಸಗಿ ಜೈಲು ಸೇರಿದ್ದ ಡಿ.ಕೆ.ಶಿವಕುಮಾರ್, ಲೋಕಾಯುಕ್ತ ದುರ್ಬಲಗೊಳಿಸಿ ಭ್ರಷ್ಟಾಚಾರ ಪ್ರೋತ್ಸಾಹಿಸಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಮಗಳು ವಿದ್ಯಾರ್ಥಿನಿಯಾಗಿರುವಾಗಲೇ 200 ಕೋಟಿ ಆಸ್ತಿಯ ಒಡತಿ. ಬರೀ ಮೂರು ಸಿನಿಮಾದಲ್ಲಿ ನಟಿಸಿರುವ ಕುಮಾರಸ್ವಾಮಿ ಮಗ ನಿಖಿಲ್ 75 ಕೋಟಿ ಆಸ್ತಿ ಗಳಿಸಿದ್ದಾರೆ. ರಾಜಕಾರಣಿಗಳ ಮಕ್ಕಳಿಗೆ ಇಷ್ಟೆಲ್ಲ ಸಂಪಾದನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ADVERTISEMENT

ಅಮೂಲ್ಯ ಮತವನ್ನು ಅಯೋಗ್ಯರಿಗೆ, ಸಮಾಜದ್ರೋಹಿಗಳಿಗೆ, ಭ್ರಷ್ಟರಿಗೆ ನೀಡುವ ಬದಲು ದೇಶ, ರಾಜ್ಯವನ್ನು ಲಂಚಮುಕ್ತಗೊಳಿಸುವ ಧ್ಯೇಯ ಹೊಂದಿರುವ ಕೆ.ಆರ್.ಎಸ್. ಪಕ್ಷಕ್ಕೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಬಡತನ ನಿರ್ಮೂಲನೆ, ಉತ್ತಮ ಶಾಲೆ, ಆಸ್ಪತ್ರೆ ಕಟ್ಟುವುದು ನಮ್ಮ ಆದ್ಯತೆಯಾಗಿದೆ. ಈ ಚುನಾವಣೆಯಲ್ಲಿ ದುರಹಂಕಾರಿ ಶಾಸಕನನ್ನು ಸೋಲಿಸಿ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ಎಲ್.ಅನಿಲ್ ಕುಮಾರ್, ಪಕ್ಷದ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.