ADVERTISEMENT

ಕಿತ್ತೂರು ರಾಣಿ ಚನ್ನಮ್ಮ ಜಯಂತಿ: ಉತ್ತಮ ಆಡಳಿತಕ್ಕೆ ಚನ್ನಮ್ಮ ಮಾದರಿ – ಶಿವಾನಂದ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 10:46 IST
Last Updated 23 ಅಕ್ಟೋಬರ್ 2021, 10:46 IST
ಕಾರ್ಯಕ್ರಮದಲ್ಲಿ ಮಕ್ಕಳು ಚನ್ನಮ್ಮ ಜೀವನ ಕುರಿತ ರೂಪಕ ಪ್ರಸ್ತುತಪಡಿಸಿದರು
ಕಾರ್ಯಕ್ರಮದಲ್ಲಿ ಮಕ್ಕಳು ಚನ್ನಮ್ಮ ಜೀವನ ಕುರಿತ ರೂಪಕ ಪ್ರಸ್ತುತಪಡಿಸಿದರು   

ಹೊಸಪೇಟೆ(ವಿಜಯನಗರ): ‘ಉತ್ತಮ ಆಡಳಿತಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರಾಗಿದ್ದರು. ಜೊತೆಗೆ ಪ್ರಜಾಪಾಲನೆಯಲ್ಲಿ ಇತರೆ ಮಹಾರಾಣಿಯರಿಗೆ ಅವರು ರೋಲ್‌ ಮಾಡೆಲ್ ಆಗಿದ್ದರು’ ಎಂದು ಚಿಂತಕ ಎಸ್‌. ಶಿವಾನಂದ ಹೇಳಿದರು.

ಜಿಲ್ಲಾಡಳಿತದಿಂದ ಶನಿವಾರ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ 243ನೇ ಜಯಂತಿ ಉತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದರು.

‘ಬ್ರಿಟಿಷರನ್ನು ಎದುರಿಸಿದ ಮೊಟ್ಟಮೊದಲ ಮಹಿಳಾ ಹೋರಾಟಗಾರ್ತಿ ಚನ್ನಮ್ಮ. ರಾಣಿ ಚನ್ನಮ್ಮ ವಚನ ಶಾಸ್ತ್ರ ಸೇರಿದಂತೆ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ಆಳವಾಗಿ ಓದಿ ತಿಳಿದುಕೊಂಡಿದ್ದರು. ಮಾತೃಭಾಷೆ ಜೊತೆಗೆ ಇತರೆ ಭಾಷೆಗಳಲ್ಲೂ ಪರಿಣತಿ ಹೊಂದಿದ್ದರು. ಆದರೆ ಈ ವಿಷಯಗಳು ಕನ್ನಡಿಗರಿಗೆ ತಿಳಿಯದೆ ಇರುವುದು ಬೇಸರದ ಸಂಗತಿ’ ಎಂದರು.

ADVERTISEMENT

‘1857ರಲ್ಲಿ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ಬಗ್ಗೆ ಇಡೀ ದೇಶವೇ ಕೊಂಡಾಡುತ್ತದೆ. ಆದರೆ, 1823ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಚನ್ನಮ್ಮರ ಇತಿಹಾಸ ದೇಶದಾದ್ಯಂತ ಸಾರಬೇಕು. ಕೇವಲ ಬ್ರಿಟಿಷರ ವಿರುದ್ಧವಲ್ಲ. ತನ್ನ ಸುತ್ತ ಇದ್ದವರ ಪಿತೂರಿಯ ವಿರುದ್ಧವೂ ಚನ್ನಮ್ಮ ಹೋರಾಡಿದ್ದರು. ವರ್ತಮಾನದಲ್ಲಿ ಸತ್ತು ಭವಿಷ್ಯದಲ್ಲಿ ಬದುಕಿದವರು ಚನ್ನಮ್ಮ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಅನಿರುದ್ಧ್ ಪಿ.ಶ್ರವಣ್ ಮಾತನಾಡಿ, ‘ಚನ್ನಮ್ಮ ಅವರ ಹೋರಾಟದ ಬಗ್ಗೆ ಹೊರರಾಜ್ಯದಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಜಯಂತಿ ಆಚರಣೆಗಳ ಮೂಲಕ ಅವರ ಹೋರಾಟವನ್ನು ಸ್ಫೂರ್ತಿ ಕತೆಯಾಗಿ ಎಲ್ಲರಿಗೂ ತಿಳಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಣಿ ಚನ್ನಮ್ಮ ಜೀವನ ಚರಿತ್ರೆಯ ರೂಪಕವನ್ನು ಪ್ರಸ್ತುತಪಡಿಸಿದರು. ಉಪವಿಭಾಗಧಿಕಾರಿ ಸಿದ್ದರಾಮೇಶ್ವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ತಹಶೀಲ್ದಾರ್ ಎಚ್.ವಿಶ್ವನಾಥ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುನಂದಾ, ಕಾಂಗ್ರೆಸ್‌ ಮುಖಂಡ ಮೊಹಮ್ಮದ್ ಇಮಾಮ್‌ ನಿಯಾಜಿ, ಲಿಂಗಾಯತ ಸಮಾಜದ ಅಧ್ಯಕ್ಷ ಶರಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿಶಂಕರ್, ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ಕಿಚಡಿ ಕೊಟ್ರೇಶ್, ಮಧುರಚನ್ನ ಶಾಸ್ತ್ರಿ, ಅರುಣಾ ಶಿವಾನಂದ್, ಡಿ.ಶಶಿಕಲಾ ಇದ್ದರು.

ಸರಳ ಆಚರಣೆ: ನಗರ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಕಚೇರಿಯಲ್ಲಿ ಸರಳವಾಗಿ ಚನ್ನಮ್ಮ ಜಯಂತಿ ಆಚರಿಸಲಾಯಿತು. ಎಸಿ ಕಚೇರಿಯಲ್ಲಿ ಗ್ರೇಡ್–2 ತಹಶೀಲ್ದಾರ್ ಪ್ರತಿಭಾ ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರೆ, ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಗ್ರೇಡ್-2 ತಹಶೀಲ್ದಾರ್ ಮೇಘನಾ ಅವರು ಮಾಲಾ ಹಾಕಿ ಗೌರವ ಅರ್ಪಿಸಿದರು.

ಶಿರಸ್ತೇದಾರರಾದ ರಮೇಶ್, ಶ್ರೀಧರ್, ಸಿಬ್ಬಂದಿ ನವೀನ್ ಕುಮಾರ್, ಚನ್ನಮ್ಮ, ಪ್ರಸನ್ನ, ಸಲೀಂ, ರತಿ, ಮರ್ಲಿನ್, ಗೌರಮ್ಮ, ಶಾರದಮ್ಮ ಇದ್ದರು.

***

ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರಿಗಿಂತ ಪೂರ್ವದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಆರಂಭಿಸಿದ್ದರು.

–ಅನಿರುದ್ಧ್‌ ಪಿ. ಶ್ರವಣ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.