
ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸೋಮವಾರ ಸಡಗರ, ಸಂಭ್ರಮದಿಂದ ಜರುಗಿತು.
ಬೆಳಗಿನ ಜಾವದಿಂದಲೇ ಸ್ವಾಮಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ ಕ್ರಿಯಾ ಮೂರ್ತಿಗಳ ನೇತೃತ್ವದಲ್ಲಿ ಅರ್ಚಕರು ಅಭಿಷೇಕ ಹಾಗೂ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಂತೆ ಭಕ್ತರು ಸರತಿ ಸಾಲಿನಲ್ಲಿ ಸ್ವಾಮಿಯ ದರ್ಶನ ಪಡೆದರು.
ಸಂಜೆಯಾಗುತ್ತಿದ್ದಂತೆ ಹಿರೇಮಠದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಹಣತೆಗಳಲ್ಲಿ ಸ್ವಾಮಿಯ ಕ್ರಿಯಾಮೂರ್ತಿ ಶಿವಪ್ರಕಾಶಸ್ವಾಮಿ ಕೊಟ್ಟೂರು ದೇವರು, ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾನ್ಹವಿ ಹಾಗೂ ಗಣ್ಯರು ದೀಪ ಹಚ್ಚುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಭಕ್ತರು ದೀಪಗಳನ್ನು ಹಚ್ಚಿ ಹರಕೆ ರೂಪದಲ್ಲಿ ಕೊಬ್ಬರಿ ಸುಟ್ಟು ಭಕ್ತಿ ಸಮರ್ಪಿಸಿದರು.
ಕಟ್ಟಿಮನೆ ದೈವಸ್ಧರು, ತಹಶೀಲ್ದಾರ್ ಜಿ.ಕೆ.ಅಮರೇಶ್, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ದುರುಗಪ್ಪ, ಪಿಎಸ್ಐ ಗೀತಾಂಜಲಿ ಶಿಂಧೆ, ದೇವಸ್ಧಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ, ಧರ್ಮಕರ್ತ ಎಂ.ಕೆ.ಶೇಖರಯ್ಯ, ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ.ದಾರುಕೇಶ್, ಅನಿಲ್ ಹೊಸಮನಿ, ಅಡಕಿ ಮಂಜುನಾಥ್, ದೇವಸ್ಧಾನದ ಸಿಬ್ಬಂದಿ ಪಾಲ್ಗೊಂಡಿದ್ದರು.
ಕಾರ್ತಿಕೋತ್ಸವದ ನಂತರ ಕೊಟ್ಟೂರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ರಥ ಎಳೆಯಲಾಯಿತು. ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತುತ್ತಿ ಹಾಗೂ ದವನ ತೂರಿ ಭಕ್ತಿ ಸಮರ್ಪಿಸಿದರು.
ತೊಟ್ಟಿಲು ಮಠದ ಮುಖಾಂತರ ಸಾಗಿದ ರಥೋತ್ಸವ ಗಚ್ಚಿನ ಮಠ ತಲುಪಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಬೆಳಗಿನ ಜಾವ ಹಿರೇಮಠಕ್ಕೆ ಬಂದು ತಲುಪಿತು. ಮಹಾ ಮಂಗಳಾರತಿಯೊಂದಿಗೆ ಕಾರ್ತಿಕೋತ್ಸವ ಸಂಪನ್ನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.