
ಕೂಡ್ಲಿಗಿ: ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣ ಮಾಡಿರುವ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿ ಕಟ್ಟಡ ಹಾಳು ಬಿದ್ದು, ಕುಡುಕರ ಅಡ್ಡೆಯಾಗಿ, ಕುರಿ ದೊಡ್ಡಿಯಾಗಿ ಮಾರ್ಪಟ್ಟಿದೆ.
2017-18ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ₹18 ಲಕ್ಷ ವೆಚ್ಚದಲ್ಲಿ ಕೆಐಆರ್‌ಡಿಎಲ್‌ನಿಂದ ನಿರ್ಮಾಣ ಮಾಡಲಾಗಿದೆ. ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಕೂಡ್ಲಿಗಿ–ಬಡೇಲಡಕು ರಸ್ತೆಯಲ್ಲಿನ ಎಡಭಾಗದಲ್ಲಿನ ಗುಡ್ಡದಲ್ಲಿ ಕಟ್ಟಲಾಗಿರುವ ಈ ಕಟ್ಟಡ ಪಟ್ಟಣದಿಂದ ಎರಡೂವರೆ ಕಿ.ಮೀ. ದೂರದಲ್ಲಿದ್ದು, ಜನ ವಸತಿ ಪ್ರದೇಶಕ್ಕೆ ಸಂಪರ್ಕವೇ ಇಲ್ಲದಂತಿದೆ.
ಕಟ್ಟಡಕ್ಕೆ ಅಳವಡಿಸಿದ್ದ ಎಲ್ಲ ಬಾಗಿಲುಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಕೆಲವು ಬಾಗಿಲು ಚೌಕಟ್ಟುಗಳನ್ನೇ ಕೀಳುವ ಪ್ರಯತ್ನವೂ ನಡೆದಿದೆ. ಫ್ಯಾನ್, ವಿದ್ಯುತ್ ಸಲಕರಣೆಗಳನ್ನು ಸಹ ಬಿಟ್ಟಿಲ್ಲ. ಕುರಿಗಾಹಿಗಳು ಇಲ್ಲಿ ಕುರಿ ಕೂಡಿಕೊಂಡಿದ್ದರಿಂದ ಕಟ್ಟಡದ ತುಂಬ ಕುರಿ ಹಿಕ್ಕೆ ತುಂಬಿಕೊಂಡಿದೆ.
ಕೆಲವರು ಇಟ್ಟಿಗೆಗಳನ್ನು ಇಟ್ಟು ಒಲೆ ಹೂಡಿ, ಅಡುಗೆ ಮಾಡಿಕೊಂಡು ಉಂಡು ಕುಡಿದು ಹೋಗಿದ್ದು, ಉರುವಲು ಸೇರಿದಂತೆ ಊಟದ ಪ್ಲೇಟ್‌ಗಳು, ಖಾಲಿ ಬಾಟಲಿಗಳು ಕಟ್ಟಡದ ಒಳಗೆ ಹಾಗೂ ಹೊರಗೆ ಎಲ್ಲೆಂದರಲ್ಲಿ ಬಿದ್ದಿವೆ.
ತಾಲ್ಲೂಕಿನಲ್ಲಿ ಕೆರೆಗಳಿದ್ದು, ಎರಡು ಮೀನುಗಾರಿಕೆ ಸಹಕಾರ ಸಂಘಗಳು ಹಾಗೂ 1,200ಕ್ಕೂ ಹೆಚ್ಚು ಮೀನುಗಾರರು ಇದ್ದಾರೆ. ಈ ವರ್ಷ ಉತ್ತಮ ಮಳೆಯಿಂದ ಎಲ್ಲ ಕೆರೆಗಳು ತುಂಬಿಕೊಂಡಿದ್ದು, ಸಮೃದ್ಧವಾಗಿ ಮೀನುಗಾರಿಕೆ ನಡೆಯುತ್ತಿದೆ. ಇಂತಹ ಮೀನುಗಾರಿಕೆಯನ್ನು ಉಳಿಸಿ ಬೆಳೆಸಬೇಕಾದ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪಟ್ಟಣದ ಬಾಡಿಗೆ ಕಟ್ಟಡವೊಂದರಲ್ಲಿ ನಡೆಯುತ್ತಿದೆ. ಜನಸಂಪರ್ಕವಿಲ್ಲದ ಕಡೆ ಕಚೇರಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಅಲ್ಲಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲ. ಅದ್ದರಿಂದ ಪಟ್ಟಣದಲ್ಲಿ ಅಥವಾ ಸಮೀಪದಲ್ಲಿ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಮೀನುಗಾರರ ಅಗ್ರಹವಾಗಿದೆ.
–––
ಕಟ್ಟಡ ಜನವಸತಿ ಪ್ರದೇಶದಿಂದ ದೂರ ಇರುವುದು ನಿಜ ಮೀನುಗಾರರು ಬಂದು ಹೋಗಲು ಸಮಸ್ಯೆ ಇದೆ. ಪಟ್ಟಣದಲ್ಲಿಯೇ ನಿವೇಶನ ನೀಡಿ ಕಟ್ಟಡ ನಿರ್ಮಾಣ ಮಾಡುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ ಮಲ್ಲೇಶ ಬಿ.
–ಉಪ ನಿರ್ದೇಶಕರು ಮೀನುಗಾರಿಕೆ ಇಲಾಖೆ
–––
ಕಟ್ಟಡ ನಿರ್ಮಿಸುವಾಗ ಗೊತ್ತಾಗಲಿಲ್ಲವೇ?
‘ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡ ಪಟ್ಟಣದಿಂದ ದೂರ ಇದೆ ಎಂದು ಈಗ ಹೇಳುತ್ತಿರುವುದು ಸರಿಯೇ? ಕಟ್ಟಡ ನಿರ್ಮಿಸುವುದಕ್ಕೆ ಮೊದಲೇ ಇದು ಗೊತ್ತಿರಬೇಕಲ್ಲವೇ’ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.