
ಹೊಸಪೇಟೆ (ವಿಜಯನಗರ): ‘ವಿಜಯನಗರ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆದವರು ಮುಸ್ಲಿಮರು ಎಂಬ ವಾದ ಸರಿಯಲ್ಲ, ರಾಮರಾಯ ಸೋತ ತಕ್ಷಣ ರಾಜರ ಮೇಲಿನ ದ್ವೇಷದಿಂದ ಇಲ್ಲಿನ ಹಿಂದೂಗಳೇ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆದರು’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಶನಿವಾರ ಲೇಖಕ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ..’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ರಾಮರಾಯ ಯುದ್ಧದಲ್ಲಿ ಸೋತದ್ದು ಹಂಪಿಯಿಂದ ಬಹಳ ದೂರದ ರಕ್ಕಸತಂಗಡಿಯಲ್ಲಿ. ವಿಜಯಶಾಲಿ ಮುಸ್ಲಿಂ ಸೈನಿಕರು ಅಲ್ಲಿಂದ ಹಂಪಿಯತ್ತ ಬರಲು ಬಹಳಷ್ಟು ಸಮಯವೇ ಬೇಕಿತ್ತು. ಆದರೆ, ರಾಮರಾಯ ಸೋತ ತಕ್ಷಣ ವಿಜಯನಗರ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆಯುವ ಕೆಲಸ ಆರಂಭವಾಗಿತ್ತು. ಇದನ್ನು ಇಲ್ಲಿ ಯಾರು ಮಾಡಿದ್ದು ಎಂದು ಊಹಿಸುವುದು ಕಷ್ಟವಲ್ಲ ’ ಎಂದರು.
‘ವಿಜಯನಗರದ ಇತಿಹಾಸ ಗಮನಿಸಿದರೆ ಇಲ್ಲಿ ರಚನೆಯಾದ ಸಾಹಿತ್ಯಗಳಲ್ಲಿ ರಾಜರನ್ನು ಹೊಗಳುವ, ಅವರ ಸಾಧನೆ ತಿಳಿಸುವ ಅಂಶ ಕಾಣಿಸುವುದಿಲ್ಲ, ಬದಲಿಗೆ ಇಲ್ಲಿನ ಜಾನಪದ ಸಾಹಿತ್ಯಗಳಲ್ಲಿ ಕುಮಾರರಾಮ, ಪಾಳೆಗಾರರು, ಜನಸಾಮಾನ್ಯರನ್ನು ಹೊಗಳುವ ಪರಿಪಾಠ ಕಾಣಿಸುತ್ತದೆ. ರಾಜರಿಂದ ಜನರಿಗೆ ನೆಮ್ಮದಿ ಇರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಇದರ ಫಲವಾಗಿಯೇ ರಾಜ್ಯ ಪತನವಾದಾಗ ಕೊಳ್ಳೆ ಹೊಡೆದು ಸೇಡು ತೀರಿಸಿಕೊಳ್ಳುವ ಕೆಲಸ ಇಲ್ಲಿ ನಡೆದಂತೆ ಕಾಣಿಸುತ್ತದೆ’ ಎಂದು ವಿವರಿಸಿದರು.
‘ದೇಶದಲ್ಲಿ ಕಳೆದ 11 ವರ್ಷಗಳಿಂದ ಸೌಹಾರ್ದಮಯ ವಾತಾವರಣ ಕೆಡಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಮುಸ್ಲಿಮರನ್ನು ವಿನಾ ಕಾರಣ ದ್ವೇಷಿಸಲಾಗುತ್ತಿದೆ’ ಎಂದು ದೂರಿದರು.
ಕನ್ನಡ ಉಳಿಸುವ ಕೆಲಸವಾಗಲಿ: ‘ಕಾಸರಗೋಡಿನಂತಹ ಗಡಿನಾಡು ಪ್ರದೇಶಗಳಲ್ಲಿ, ಹೊರ ರಾಜ್ಯಗಳಲ್ಲಿ ಕನ್ನಡ ಉಳಿಸುವ ಕೆಲಸವನ್ನು ಸರ್ಕಾರ ತುರ್ತಾಗಿ ನಡೆಸಬೇಕು‘ ಎಂದೂ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.