ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಮಹಿಳಾ ಚೈತನ್ಯ ದಿನ’
ಹೊಸಪೇಟೆ (ವಿಜಯನಗರ): ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಹೆರುವ ಯಂತ್ರ ಮಾಡಲು ಆದೇಶ ಬರತೊಡಗಿದೆ. ಹೀಗೆ ಆದೇಶ ಮಾಡಲು ಇವರ‍್ಯಾರು ಎಂದು ಪ್ರಶ್ನಿಸುವ ಮೂಲಕ ಮಹಿಳಾ ಹಕ್ಕುಗಳು ಹೋರಾಟಗಾರ್ತಿ ಡಾ.ಎಚ್.ಜಿ.ಜಯಲಕ್ಷ್ಮಿ ಅವರು ಸಂಘ ಪರಿವಾರಕ್ಕೆ ನೇರ ಸವಾಲು ಹಾಕಿದರು.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ‘ಮಹಿಳಾ ಚೈತನ್ಯ ದಿನ’ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಳೆದ 10, 11 ವರ್ಷಗಳಿಂದ ನಮ್ಮ ನಡುವೆ ಒಡಕು ತರುವ ಪ್ರಯತ್ನ ನಡೆದಿದೆ. ರಾಜಕೀಯಕ್ಕೆ ಧರ್ಮ, ಜಾತಿಯ ಅಗತ್ಯ ಇಲ್ಲ. ಹೀಗಿದ್ದರೂ ಅದನ್ನು ಒತ್ತಾಯಪೂರ್ವಕವಾಗಿ ತರಲಾಗುತ್ತಿದೆ. ಇದರಿಂದ ಯಹೂದಿಗಳ ಘೋರ ಮಾರಣಹೋಮ ಆದಂತಹ ಪರಿಸ್ಥಿತಿಯೇ ಮತ್ತೆ ಮರುಕಳಿಸುವ ಅಪಾಯ ಇದೆ ಎಂದು ಎಚ್ಚರಿಸಿದರು.
‘ವಾರಕ್ಕೆ 70 ಗಂಟೆ ದುಡಿಯಬೇಕು ಎಂದು ಒಬ್ಬ ಹೇಳಿದರೆ, 90 ಗಂಟೆಗ ದುಡಿಯಿರಿ, ಮನೆಯಲ್ಲಿ ಹೆಂಡತಿ ಮುಖವನ್ನು ನೋಡುತ್ತ ಎಷ್ಟು ಹೊತ್ತು ಕುಳಿತುಕೊಳ್ಳುತ್ತೀರಿ ಎಂದು ಮೊತ್ತೊಬ್ಬ ಕೇಳುತ್ತಾನೆ. ಇವರೆಲ್ಲ ದುಡಿಸಿಕೊಂಡು ತಮ್ಮ ಮಹಲು ಗಟ್ಟಿ ಮಾಡಿಕೊಳ್ಳುವವರು. ಮನೆ, ಮಕ್ಕಳೊಂದಿಗೆ ಬೆರೆತು ಕಾಲ ಕಳೆಯುವ ಅಗತ್ಯ ನಿಮಗೆ ಗೊತ್ತಿದೆಯೇ? ನೀವು ಬಡವರನ್ನು ಶೋಷಿಸಿಯೇ ಶ್ರೀಮಂತರಾಗಿದ್ದೀರಿ. ಬಡವರು, ಶ್ರಮಿಕರ ಸಮಾಧಿಯ ಮೇಲೆ ನೀವು ನಿಮ್ಮ ಸೌಧ ಕಟ್ಟುತ್ತಿದ್ದೀರಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
‘ಅನ್ಯಾಯದ ವಿರುದ್ಧ, ಕೋಮು ರಾಜಕೀಯದ ವಿರುದ್ಧ ಧ್ವನಿ ಎತ್ತಿದರೆ ಅದನ್ನು ಹತ್ತಿಕ್ಕಲಾಗುತ್ತಿದೆ. ದೇಶದ್ರೋಹದ ಹಣೆಪಟ್ಟಿ ಕಟ್ಟಲಾಗುತ್ತಿದೆ. ಸಮುದಾಯಗಳ ನಡುವೆ ಒಡಕು ತರಲಾಗುತ್ತಿದೆ. ಇದೆಲ್ಲದರ ವಿರುದ್ಧ ಒಕ್ಕೊರಲಿನಿಂದ ಧ್ವನಿ ಎತ್ತಬೇಕಾಗಿದೆ’ ಎಂದು ಜಯಲಕ್ಷ್ಮಿ ಹೇಳಿದರು.
ತಾರತಮ್ಯದ ವಿಕಸಿತ ಭಾರತ: ಭಾರತೀಯ ಮುಸ್ಲಿಂ ಮಹಿಳಾ ಆಂದೋಲನವನ್ನು ಕಟ್ಟಿ ಮುನ್ನಡೆಸುತ್ತಿರುವ ಗುಜರಾತ್‌ನ ಝಕಿಯಾ ಸೋಮನ್ ಅವರು ದಿಕ್ಸೂಚಿ ಭಾಷಣ ಮಾಡಿ, ‘ನಾವು ವಿಕಸಿತ ಭಾರತ ನಿರ್ಮಿಸುತ್ತಿದ್ದೇವೆ, ಈಗಾಗಲೇ ವಿಕಸಿತರಾಗುವ ಹಂತದಲ್ಲಿದ್ದೇವೆ ಎಂದು ಹೇಳಲಾಗುತ್ತಿದೆ. ಆದರೆ ಇದು ತಾರತಮ್ಯದಿಂದ ಕೂಡಿದ ಬೆಳವಣಿಗೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ದೇಶದ ಶೇ 50ರಷ್ಟು ಸಂಪತ್ತು ಕೇವಲ ಶೇ 10ರಷ್ಟು ಮಂದಿಯ ಬಳಿ ಇದೆ. ಇದನ್ನು ವಿಕಸಿತ ಭಾರತ ಎಂದು ಒಪ್ಪಿಕೊಳ್ಳಬಹುದೇ’ ಎಂದು ಪ್ರಶ್ನಿಸಿದರು.
‘ದೇಶದಲ್ಲಿ ಈಗಲೂ ಪುರುಷ ಪ್ರಧಾನ ವ್ಯವಸ್ಥೆಯೇ ಇದೆ. ಇದರಿಂದಾಗಿ ಮಹಿಳೆಯರಿಗೆ ಸಮಾನ ಹಕ್ಕು ಸಿಗುತ್ತಿಲ್ಲ. ಮುಸ್ಲಿಂ ಸಮುದಾಯದಲ್ಲಿನ ತ್ರಿವಳಿ ತಲಾಖ್ ತೊಡೆದು ಹಾಕುವ ಪ್ರಯತ್ನ ಆರಂಭವಾಗಿದೆ. ಆದರೆ, ಬಹುಪತ್ನಿತ್ವ ಈಗಲೂ ಜಾರಿಯಲ್ಲಿದೆ. ಮುಸ್ಲಿಂ ವಿವಾಹ ಕಾಯ್ದೆ ಸಂಸತ್‌ನಲ್ಲಿ ಇನ್ನೂ ಮಂಡನೆಯಾಗಿಲ್ಲ. ಹೀಗಾಗಿ ಮಹಿಳೆಯರಿಗೆ ಸಮಾನ ಅವಕಾಶ, ಹಕ್ಕುಗಳಿಗಾಗಿ ನಡೆಯುವ ಹೋರಾಟಕ್ಕೆ ಬೆಂಬಲ ನೀಡುವ ಅಗತ್ಯ ಇದೆ’ ಎಂದರು.
ಇದಕ್ಕೆ ಮೊದಲು ನಗರದ ಬಳ್ಳಾರಿ ರಸ್ತೆಯ ಪಟೇಲ್ ಹೈಸ್ಕೂಲ್ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ನೂರಾರು ಮಂದಿ ಪಾಲ್ಗೊಂಡ ಹಕ್ಕೊತ್ತಾಯ ಜಾಥಾ ನಡೆಯಿತು.
ಮೈಸೂರಿನ ಸುಮನಾ ಎಂ.ಎನ್.ಅಧ್ಯಕ್ಷತೆ ವಹಿಸಿದ್ದರು. ಡಾ.ಎಚ್.ಎಸ್.ಅನುಪಮಾ, ನಸ್ರೀನ್ ಮಿಠಾಯಿ, ಟಿ.ಎಂ.ಉಷಾರಾಣಿ, ವಾಣಿ ಪೆರಿಯೋಡಿ, ನಾಗವೇಣಿ ಸೋಸಲೆ, ವೆರೋನಿಕಾ ಕರ್ನೇಲಿಯೊ, ಜಿ.ಕೆ.ಪ್ರೇಮ, ಮಲ್ಲಮ್ಮ ಯಾಳವಾರ, ಸಲೀಮಾ ಜಾನ್, ಜ್ಯೋತಿ ಹಿಟ್ನಾಳ, ಆಶಲತಾ ಬೇಕಲ್ ಇತರರು ಇದ್ದರು.
ಮುಂದಿನ ಸಮ್ಮೇಳನ ಹಾಸನದಲ್ಲಿ: ಒಕ್ಕೂಟವು 2013ರಿಂದ ಈಚೆಗೆ ಪ್ರತಿ ವರ್ಷ ಸಮಾವೇಶಗಳನ್ನು ನಡೆಸುತ್ತ ಬಂದಿದ್ದು, ಮೊದಲ ಸಮ್ಮೇಳನ ಮಂಗಳೂರಿನಲ್ಲಿ ನಡೆದಿತ್ತು. ಬಳಿಕ ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಕಲಬುರ್ಗಿ, ತುಮಕೂರು, ಉಡುಪಿಗಳಲ್ಲಿ ಸಮಾವೇಶಗಳು ನಡೆದಿದ್ದು, ಈ ಬಾರಿ ಹೊಸಪೇಟೆಯಲ್ಲಿ ನಡೆದಿದೆ ಹಾಗೂ ಮುಂದಿನ ವರ್ಷ ಹಾಸನದಲ್ಲಿ ನಡೆಸಲು ನಿರ್ಧಾರವಾಗಿದೆ.
ಪ್ರತಿಯೊಂದು ಸ್ಥಳದಲ್ಲಿ ನಡೆಯುವ ಸಮಾವೇಶಕ್ಕೆ ಒಂದೊಂದು ಘೋಷವಾಕ್ಯ ಇಡಲಾಗುತ್ತಿದೆ. ’ಸಹಬಾಳ್ವೆ, ಸಮಾನ ಗೌರವ: ಕೂಡಿ ಕಟ್ಟುವ ನ್ಯಾಯದ ಜಗವ’ ಎಂಬುದು ಈ ಬಾರಿ ಘೋಷವಾಕ್ಯವಾಗಿತ್ತು. ಅದೇ ಚಿಂತನೆಯಲ್ಲಿ ಇಲ್ಲಿ ಶುಕ್ರವಾರ ಮೂರು ಗೋಷ್ಠಿಗಳು ನಡೆದಿದ್ದವು ಹಾಗೂ ಕಪ್ಪು ಉಡುಪಿನಲ್ಲಿ ಮಹಿಳೆಯರು ಎಂಬ ಪರಿಕಲ್ಪನೆಯ ಮೌನ ಜಾಗೃತಿ ಕಾರ್ಯಕ್ರಮ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.