ADVERTISEMENT

ಹಂಪಿ: ವಿಜಯ ವಿಠ್ಠಲ ದೇವಸ್ಥಾನದ ಬಳಿ ಸಂಚಾರಿ ಅಕ್ಕ ಕ್ಯಾಂಟೀನ್‌ಗೆ ಚಾಲನೆ

ಪ್ರವಾಸಿಗರ ಹಲವು ವರ್ಷಗಳ ಬೇಡಿಕೆ ಸಾಕಾರ: ರಾಜ್ಯದಲ್ಲೇ ಪ್ರಥಮ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 14:32 IST
Last Updated 31 ಡಿಸೆಂಬರ್ 2025, 14:32 IST
   

ಹೊಸಪೇಟೆ (ವಿಜಯನಗರ): ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಬಳಿ ‘ಸಂಚಾರಿ ಅಕ್ಕ ಕ್ಯಾಂಟೀನ್’ಗೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ ಬುಧವಾರ ಚಾಲನೆ ನೀಡಿದರು.

‘ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಚಾರಿ ಅಕ್ಕ ಕ್ಯಾಂಟೀನ್ ಅನ್ನು ಇಲ್ಲಿ ಇರಿಸಲಾಗಿದೆ. ಪ್ರವಾಸಿಗರಿಗೆ ಇದು ಬಹಳಷ್ಟು ರೀತಿಯಲ್ಲಿ ಸೇವೆ ನೀಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

‘ಹಂಪಿಯ ಜಗನ್ ಜ್ಯೋತಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಮತ್ತು ಶ್ರೀವೈಷ್ಣವಿ ಮಹಿಳಾ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ರುಚಿ ಶುಚಿಯಾದ ಊಟ, ಇಡ್ಲಿ, ವಡೆ, ಚಿತ್ರಾನ್ನ, ಖಾರಾ ಬಾತ್, ಪುಳಿಯೋಗರೆ ಹಾಗೂ ಟೀ, ಕಾಫಿ ಇಲ್ಲಿ ಸಿಗಲಿದೆ. ಸಂಚಾರಿ ಕ್ಯಾಂಟೀನ್‌ನಲ್ಲಿ ತೊಡಗಿರುವ ಗ್ರಾಮೀಣ ಭಾಗದ ಸ್ವಸಹಾಯ ಗುಂಪಿನ ಮಹಿಳೆಯರ ಕುಟುಂಬಗಳಿಗೆ ಆರ್ಥಿಕ ಶಕ್ತಿ ದೊರಕುವ ವಿಶ್ವಾಸ ಇದೆ’ ಎಂದರು.

ADVERTISEMENT

ಇದೇ ವೇಳೆ ಉಪಕಾರ್ಯದರ್ಶಿಗಳು ಊಟಕ್ಕೆ ಬಳಸುವ ಎಲ್ಲಾ ಪರಿಕರಗಳು ಹಾಗೂ ಸಾಮಾಗ್ರಿಗಳನ್ನು ಪರಿಶೀಲಿಸಿದರು ಹಾಗೂ ಸ್ವಚ್ಛತೆ ಕಾಪಾಡುವಂತೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾ ಅಧಿಕಾರಿ ಉಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಲಂ ಬಾಷಾ, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ನಾಗರಾಜ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ಪ್ರಸನ್ನ, ಜಿಲ್ಲಾ ವ್ಯವಸ್ಥಾಪಕಿ ಕಲಾವತಿ ಇತರರು ಇದ್ದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮತ್ತು ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರಗಳ (ಹವಾಮ) ಅನುಮತಿ ಪಡೆದು ಈ ಕ್ಯಾಂಟೀನ್‌ ಆರಂಭವಾಗಿದೆ.

ಎರಡೂ ಕಡೆಗೆ ಸಂಚಾರ

‘ಸಂಚಾರಿ ಅಕ್ಕ ಕ್ಯಾಂಟೀನ್’ ವಿಜಯ ವಿಠ್ಠಲ ದೇವಸ್ಥಾನದ ದಕ್ಷಿಣ ಗೋಪುರ ಬಳಿ ಬ್ಯಾಟರಿ ವಾಹನಕ್ಕೆ ಸರದಿ ನಿಲ್ಲುವ ಸ್ಥಳದ ಬಳಿ ಇರಲಿದೆ. ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿ ಇರುವ ವೇಳೆ ಈ ಕ್ಯಾಂಟೀನ್‌ ವಿರೂಪಾಕ್ಷ ದೇವಸ್ಥಾನದ ಬಳಿಯ ಜನತಾ ಪ್ಲಾಟ್ ಬಳಿ ನಿಲ್ಲಲಿದೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.