ADVERTISEMENT

ತನಿಖಾ ಆಯೋಗ ಸಿದ್ದರಾಮಯ್ಯ ಹೆಸರು ಉಲ್ಲೇಖಿಸಿದರೆ ಆಮೇಲೆ ನೋಡಿಕೊಳ್ಳೋಣ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 13:32 IST
Last Updated 7 ಆಗಸ್ಟ್ 2024, 13:32 IST
   

ಹೊಸಪೇಟೆ (ವಿಜಯನಗರ): ‘ಮುಡಾ ವಿಚಾರವಾಗಿ ಪಾದಯಾತ್ರೆ ನಡೆಸುತ್ತಿರುವುದು ಶುದ್ಧ ರಾಜಕೀಯ, ಇಲ್ಲಿ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ತನಿಖಾ ಆಯೋಗ ಸಿದ್ದರಾಮಯ್ಯ ಅವರ ಹೆಸರನ್ನು ಉಲ್ಲೇಖಿಸಿದರೆ ಆಮೇಲೆ ನೋಡೋಣ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಬುಧವಾರ ಇಲ್ಲಿ ನೂತನ ಪರೇಡ್‌ ಮೈದಾನ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಉದ್ಘಾಟನೆ ಹಾಗೂ ಪೊಲೀಸ್ ಕ್ವಾರ್ಟರ್ಸ್‌ಗೆ ಭೂಮಿಪೂಜೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಡಾ ಹಗರಣದ ತನಿಖೆ ನಡೆಸುವುದಕ್ಕಾಗಿ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ನೇತೃತ್ವದ ತನಿಖಾ ಆಯೋಗ ರಚಿಸಲಾಗಿದೆ. ದೇಸಾಯಿ ಅವರೇನು ಮುಖ್ಯಮಂತ್ರಿಯ ದೊಡ್ಡಪ್ಪನ ಮಗನಾ, ಆಯೋಗ ನೀಡುವ ವರದಿಯಲ್ಲಿ ಸಿದ್ದರಾಮಯ್ಯ ಹೆಸರು ಉಲ್ಲೇಖವಾದರೆ ಆಮೇಲೆ ನೋಡಿಕೊಳ್ಳೋಣ’ ಎಂದರು.

‘ತಮ್ಮ  ಜಮೀನು ಕೊಟ್ಟಿದ್ದಕ್ಕೆ ಬದಲಿ ಜಮೀನು ಕೇಳಿದ್ದಾರೆ. ಹೀಗೆ ನಿವೇಶನ ನೀಡಬೇಕೆಂದು ಕೇಳಿದ್ದರಲ್ಲಿ ಸಿದ್ದರಾಮಯ್ಯ ಅವರ ರುಜು ಇದೆಯಾ, ಸರ್ಕಾರದಿಂದ ಆದೇಶ ಹೋಗಿದೆಯಾ? ಏನೂ ಇಲ್ಲದಿದ್ದರೂ ಇದೀಗ ರಾಜಕೀಯ ಕಾರಣಕ್ಕಾಗಿ ಪಾದಯಾತ್ರೆ ಮಾಡಲಾಗುತ್ತಿದೆ. ನಾವು ಸಹ ಹಿಂದೆ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆವು, ರಾಜ್ಯದ ಸಂಪತ್ತು ಲೂಟಿಯಾಗುತ್ತಿದೆ, ಅದನ್ನು ತಪ್ಪಿಸಿ ಎಂದು ಹೇಳುವುದಕ್ಕಾಗಿ ಪಾದಯಾತ್ರೆ ನಡೆಸಿದ್ದೆವು. ಈಗ ವಿರೋಧ ಪಕ್ಷದವರು ಮಾಡುತ್ತಿರುವ  ಪಾದಯಾತ್ರೆಯಿಂದ ಜನಸಾಮಾನ್ಯರಿಗೆ ಒಂದಿಷ್ಟೂ ಲಾಭ ಇಲ್ಲ, ಆರೋಪಗಳಲ್ಲಿ ಹುರುಳೂ ಇಲ್ಲ’ ಎಂದು ಪರಮೇಶ್ವರ ಹೇಳಿದರು.

ADVERTISEMENT

ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವುದಿಲ್ಲ ಎಂದು ನಾವು ಭಾವಿಸಿದ್ದೇವೆ. ಒಂದು ವೇಳೆ ಕೊಟ್ಟರೆ ನಾವು ಕಾನೂನು ಹೋರಾಟ ನಡೆಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.