ADVERTISEMENT

ಹಗರಿಬೊಮ್ಮನಹಳ್ಳಿ: ಹಾಲಸಿದ್ಧೇಶ್ವರ ಸ್ವಾಮಿಗಳ ವಿಜೃಂಭಣೆಯ ಮುಳ್ಳು ಗದ್ದುಗೆ ಉತ್ಸವ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 8:16 IST
Last Updated 4 ಡಿಸೆಂಬರ್ 2022, 8:16 IST
ಹಾಲಸ್ವಾಮಿ ಮಠದಲ್ಲಿ ಮುಳ್ಳುಗದ್ದುಗೆ ಉತ್ಸವದ ಮೆರವಣಿಗೆ ನಡೆಯಿತು.
ಹಾಲಸ್ವಾಮಿ ಮಠದಲ್ಲಿ ಮುಳ್ಳುಗದ್ದುಗೆ ಉತ್ಸವದ ಮೆರವಣಿಗೆ ನಡೆಯಿತು.   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಪಟ್ಟಣದ ಹಳೇ ಊರಿನ ಹಾಲಸ್ವಾಮಿ ಮಠದಲ್ಲಿ ಶ್ರೀ ಗುರು ಹಾಲಶಂಕರ ಸ್ವಾಮಿಗಳ ಕಾರ್ತೀಕೋತ್ಸವ ಮತ್ತು ರಥೋತ್ಸವ ಅಂಗವಾಗಿ ನಡೆದ ಮುಳ್ಳುಗದ್ದುಗೆ ಉತ್ಸವದ ಮೆರವಣಿಗೆ ಶನಿವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ನೂರಾರು ಭಕ್ತರು ಉತ್ಸವವನ್ನು ಕಣ್ತುಂಬಿಕೊಂಡರು.

ಪೂಜೆ ಸಲ್ಲಿಸಿದ ಮುಳ್ಳಿನ ಗದ್ದುಗೆಯ ಆಸನದಲ್ಲಿ ಹಾಲಸಿದ್ಧೇಶ್ವರ ಸ್ವಾಮೀಜಿ ಅವರನ್ನು ಕೂಡಿಸಿ ಮೆರವಣಿಗೆ ಮಾಡಲಾಯಿತು. ಜಾಲಿ ಮುಳ್ಳುಗಳ ಗದ್ದುಗೆಯ ಮೇಲೆ ಬಾಳೆ ದಿಂಡಿನ ಕೌಪೀನ ಮಾತ್ರ ಧರಿಸಿದ್ದ ಸ್ವಾಮೀಜಿ ಜಿಗಿದು ಜಿಗಿದು ಮುಳ್ಳನ್ನು ತುಳಿಯುತ್ತಿದ್ದ ದೃಶ್ಯ ನೆರೆದಿದ್ದ ನೂರಾರು ಭಕ್ತರ ಮೈನವಿರೇಳಿಸುತ್ತಿತ್ತು. ಮಠದಿಂದ ಆರಂಭವಾದ ಮೆರವಣಿಗೆಯಲ್ಲಿ ಸಮಾಳ, ಭಜನೆ, ನಂದಿಕೋಲು, ಹಲಗೆ ವಾದನ ಸೇರಿದಂತೆ ವಿವಿಧ ವಾದ್ಯಗಳು ಉತ್ಸವಕ್ಕೆ ಮೆರಗು ನೀಡಿದವು. ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತ್ತೆ ಮಠದ ಮೂಲ ಸ್ಥಳಕ್ಕೆ ಆಗಮಿಸಿತು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಮುಳ್ಳು ಗದ್ದುಗೆಯಲ್ಲಿ ಸ್ವಾಮೀಜಿಗಳನ್ನು ವೀಕ್ಷಿಸಿ ಭಕ್ತಿ ಪರವಶರಾಗಿ ನಮಿಸಿ ಜೈಕಾರ ಕೂಗಿದರು. ನಂತರದಲ್ಲಿ ಪಲ್ಲಕ್ಕಿ ಮುಟ್ಟಿ ನಮಸ್ಕರಿಸಿದರು, ಬೆಳಗಿನ ಜಾವದಿಂದಲೇ ಹಾಲಸ್ವಾಮಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಇದಕ್ಕೂ ಮುನ್ನ ನೂರಾರು ಭಕ್ತರು ಕಾರ್ತೀಕೋತ್ಸವ ಅಂಗವಾಗಿ ದೇವಸ್ಥಾನದ ಮುಂದೆ ದೀಪಗಳನ್ನು ಬೆಳಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.