ADVERTISEMENT

ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ವಿಚಾರ ಸಂಕಿರಣ

‘ಸುಸ್ಥಿರ ಪ್ರವಾಸೋದ್ಯಮ ಇಂದಿನ ಅಗತ್ಯ’

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 13:06 IST
Last Updated 27 ಸೆಪ್ಟೆಂಬರ್ 2022, 13:06 IST
ಪ್ರವಾಸೋದ್ಯಮದ ಪುನರಾವಲೋಕನ ರಾಷ್ಟ್ರೀಯ ವಿಚಾರ ಸಂಕಿರಣ
ಪ್ರವಾಸೋದ್ಯಮದ ಪುನರಾವಲೋಕನ ರಾಷ್ಟ್ರೀಯ ವಿಚಾರ ಸಂಕಿರಣ   

ಹೊಸಪೇಟೆ: ‘ಸುಸ್ಥಿರವಾದ ಪ್ರವಾಸೋದ್ಯಮ ಅಭಿವೃದ್ಧಿ ಇಂದಿನ ಅಗತ್ಯ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅಭಿಪ್ರಾಯಪಟ್ಟರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಪುರಾತತ್ವ ಅಧ್ಯಯನ ವಿಭಾಗ ಮತ್ತು ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಂಗಳವಾರ ವಿ.ವಿ.ಯಲ್ಲಿ ಏರ್ಪಡಿಸಿದ್ದ ‘ಪ್ರವಾಸೋದ್ಯಮದ ಪುನರಾವಲೋಕನ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಮುಂದಿನ ಪೀಳಿಗೆಗಳಿಗೆ ಪ್ರೇಕ್ಷಣೀಯ ಸ್ಥಳಗಳ ಮಹತ್ವ ತಿಳಿಯಬೇಕೆಂದರೆ ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ವಾಸ್ತುಶಿಲ್ಪಗಳಿಗೆ ಹೆಸರಾಗಿರುವ ಹಂಪಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಲಾಭ ದೊರಕಿಸಿಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಪ್ರವಾಸಕ್ಕೆಂದು ಬರುವ ಹಿರಿಯ ನಾಗರಿಕರು, ಅಂಗವಿಕಲರಿಗೆ ಸ್ಮಾರಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
ಕುಲಪತಿ ಪ್ರೊ. ಸ ಚಿ ರಮೇಶ ಮಾತನಾಡಿ, ಹಂಪಿ ಪ್ರವಾಸಿ ತಾಣವಾಗಿ ಬೆಳೆಯುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಸಹಕಾರ ಬಹಳ ಇದೆ ಎಂದು ಹೇಳಿದರು.

ADVERTISEMENT

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎಸ್‌. ತಿಪ್ಪೇಸ್ವಾಮಿ ಮಾತನಾಡಿ, ಪ್ರವಾಸೋದ್ಯಮ ದಿನಾಚರಣೆಗೆ ತನ್ನದೆ ಆದ ಇತಿಹಾಸವಿದೆ. ಅದರ ವ್ಯಾಪ್ತಿ, ಪರಿಣಾಮ, ಪ್ರಾಮುಖ್ಯತೆ ಅರಿಯಲು ಈ ದಿನ ಸಹಕಾರಿ. ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಪ್ರವಾಸೋದ್ಯಮ ಪಾತ್ರ ಪ್ರಮುಖವಾದುದು ಎಂದು ತಿಳಿಸಿದರು.

ಹಂಪಿ ಅಭಿವೃದ್ದಿ ಪ್ರಾಧಿಕಾರದಿಂದ ಪ್ರವಾಸೋದ್ಯಮದ ಲೋಗೋ ಮತ್ತು ಕಿರುಚಿತ್ರ ಬಿಡುಗಡೆಗೊಳಿಸಲಾಯಿತು. ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ, ವಿಭಾಗದ ಮುಖ್ಯಸ್ಥ ಎಸ್‌.ವೈ. ಸೋಮಶೇಖರ್‌, ಸಂಶೋಧನಾರ್ಥಿ ಶ್ವೇತಾ ಭಸ್ಮೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.