
ಹೊಸಪೇಟೆ (ವಿಜಯನಗರ): ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡು ದಿನದ ಹಿಂದೆ ಹಂಪಿಯಿಂದ ಹೋದ ಬಳಿಕ ಇಲ್ಲಿನ ಅವ್ಯವಸ್ಥೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಬುಧವಾರ ಸ್ಪಷ್ಟವಾಗಿದ್ದು, ಕೇಂದ್ರ ಸಚಿವ ಸಂಪುಟ ಸಭೆಯಲ್ಲೇ ಇದನ್ನು ಉಲ್ಲೇಖಿಸಿದ್ದಾರೆ.
ಭಾನುವಾರ ಚಕ್ರತೀರ್ಥ ಪ್ರದೇಶಕ್ಕೆ ಭೇಟಿ ನೀಡಿದ್ದ ಸಚಿವೆ ನಿರ್ಮಲಾ ಅವರು, ಅಲ್ಲಿನ ಗಲೀಜು ಪರಿಸರ ಕಂಡು ಬೇಸರಪಟ್ಟುಕೊಂಡಿದ್ದರು. ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ, ಕೋದಂದರಾಮ ದೇವಸ್ಥಾನಗಳಿಗೆ ಭೇಟಿ ನೀಡಿದ್ದ ಅವರು ಮುಂದೆ ಅಚ್ಯುತರಾಯ ದೇವಸ್ಥಾನದತ್ತ ತೆರಳಲು ಮುಂದಾಗಿದ್ದರು. ಆದರೆ ಕಾಲುದಾರಿಯಲ್ಲೇ ಇದ್ದ ಮನುಷ್ಯರ ಮಲ, ಜಾನುವಾರುಗಳ ಮಲ ಕಂಡು ಹೇಸಿಗೆಪಟ್ಟಿದ್ದರು. ತಮ್ಮ ಭೇಟಿ ಮೊಟಕುಗೊಳಿಸಿ ವಾಪಸಾಗಿದ್ದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯೇ (ಎಎಸ್ಐ) ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳ ರಕ್ಷಣೆ ಮತ್ತು ಅವುಗಳ ನಿರ್ವಹಣೆಯ ಹೊಣೆ ಹೊತ್ತಿದ್ದು, ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಮಹಾನವಮಿ ದಿಬ್ಬದ ಬಳಿ ಎಎಸ್ಐ ಅಧಿಕಾರಿಗಳು ಸಚಿವರೊಂದಿಗೆ ಫೋಟೊ ತೆಗೆಸಿಕೊಳ್ಳಲು ಮುಂದಾಗಿದ್ದಾಗ ಸಚಿವರು ಮೊದಲು ಒಪ್ಪಿರಲಿಲ್ಲ, ನೀವು ನಿಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿಲ್ಲ, ಮತ್ತೇಕೆ ನಿಮ್ಮ ಜತೆಗೆ ಫೋಟೊ ತೆಗೆಸಿಕೊಳ್ಳಲಿ ಎಂದು ಹೇಳಿದ್ದರು, ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ ಫೋಟೊಗೆ ಫೋಸ್ ನೀಡಿದ್ದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಶನಿವಾರ ಸಂಜೆ ಆನೆಲಾಯ ಪ್ರದೇಶದಲ್ಲಿ ಧ್ವನಿಬೆಳಕು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಚಿವೆ ನಿರ್ಮಲಾ, ಸ್ಚಚ್ಛತೆ, ತೋಟದ ಕೆಲಸಗಾರರ ಬಳಿ ಮಾತನಾಡಿದ್ದರು. ಅವರಿಗೆ ಕೊಡುತ್ತಿರುವ ಸಂಬಳದ ಬಗ್ಗೆ ತಿಳಿದು ಬೇಸರಪಟ್ಟಿದ್ದರು ಎಂದು ಹೇಳಲಾಗಿದೆ.
ಜಿಲ್ಲಾಡಳಿತಕ್ಕೂ ಬಿಸಿ: ಸಚಿವರು ದೆಹಲಿಗೆ ಹೋದ ಬಳಿಕ ಬಹಳ ದೊಡ್ಡ ಬೆಳವಣಿಗೆ ಆದಂತಿದ್ದು, ಜಿಲ್ಲಾಡಳಿತ ಇದೀಗ ಅದರ ಬಿಸಿ ಅನುಭವಿಸುತ್ತಿದೆ ಎನ್ನಲಾಗಿದೆ. ಗುರುವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಹಂಪಿ ಸ್ಥಿತಿಗತಿ ಕುರಿತು ಸಭೆ ನಡೆಸಿದ್ದು, ಶೀಘ್ರದಲ್ಲೇ ಹಂಪಿಗೆ ಆಗಮಿಸಲಿರುವ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬರುವ ಮೊದಲು ಮಾಡಬೇಕಾದ ಸಿದ್ಧತೆಗಳು, ಹುಳುಕು ಮುಚ್ಚುವ ಕಾರ್ಯತಂತ್ರಗಳ ಕುರಿತು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.