ADVERTISEMENT

ಹೊಸ ಜಿಲ್ಲೆಗೆ ಬಜೆಟ್‌ನಲ್ಲಿಲ್ಲ ಅನುದಾನ

ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದ ವಿಜಯನಗರ ಜಿಲ್ಲೆಯ ಜನತೆಗೆ ನಿರಾಸೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 5 ಮಾರ್ಚ್ 2022, 11:18 IST
Last Updated 5 ಮಾರ್ಚ್ 2022, 11:18 IST
ಹಂಪಿ ಕಲ್ಲಿನ ರಥದ ಸಾಂದರ್ಭಿಕ ಚಿತ್ರ
ಹಂಪಿ ಕಲ್ಲಿನ ರಥದ ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ರಾಜ್ಯದ 31ನೇ ಹೊಸ ಜಿಲ್ಲೆಯಾಗಿ ಜನ್ಮ ತಳೆದು ವರ್ಷ ಪೂರೈಸಿರುವ ವಿಜಯನಗರಕ್ಕೆ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಸಿಗಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.

ಹೊಸಪೇಟೆಯಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಕೇಂದ್ರ ಸ್ಥಾಪನೆ ಹೊರತುಪಡಿಸಿದರೆ ಯಾವುದೇ ಮಹತ್ವದ ಘೋಷಣೆಗಳು ಬಜೆಟ್‌ನಲ್ಲಿ ಆಗಿಲ್ಲ. ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಬಲಪಡಿಸಿ, ಮತ್ತಷ್ಟು ರಚನಾತ್ಮಕ ಚಟುವಟಿಕೆ ಕೈಗೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಅದಕ್ಕೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ವಿ.ವಿ.ಗೆ ಅನುದಾನ ಬಿಡುಗಡೆಗೊಳಿಸಬೇಕೆಂಬ ಬೇಡಿಕೆ ಇತ್ತು.

ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲಾಗುವುದು ಎಂದು ಸಿ.ಎಂ. ತಿಳಿಸಿದ್ದಾರೆ. ಆದರೆ, ನಿರ್ದಿಷ್ಟವಾಗಿ ಯಾವ ಸ್ಮಾರಕ, ದತ್ತು ಸ್ವೀಕರಿಸುವ ವಿಧಾನವನ್ನು ವಿವರಿಸಿಲ್ಲ. ತುಂಗಭದ್ರಾ ಜಲಾಶಯದಿಂದ ಹೂಳು ತೆಗೆಸಬೇಕೆಂಬ ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲ. ಬದಲಾಗಿ ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರಿನ ಸಂಗ್ರಹಕ್ಕೆ ಕೊಪ್ಪಳದ ನವಲಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಅನುದಾನ ಘೋಷಿಸಲಾಗಿದೆ. ಪ್ರವಾಸಿ ಮಾರ್ಗದರ್ಶಿಗಳಿಗೆ (ಗೈಡ್‌ಗಳು) ಮಾಸಿಕ ₹2,000 ಭತ್ಯೆ ಘೋಷಣೆಯಾಗಿದೆ. ರಾಜ್ಯದಲ್ಲೇ ಹಂಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೈಡ್‌ಗಳು ಇರುವುದರಿಂದ ಸಹಜವಾಗಿಯೇ ಅವರಿಗೆ ಪ್ರಯೋಜನವಾಗಲಿದೆ. ಈ ಕುರಿತು ಸ್ಥಳೀಯ ಗೈಡ್‌ಗಳು ಅನೇಕ ದಿನಗಳಿಂದ ಹೋರಾಟ ನಡೆಸುತ್ತಿದ್ದರು.

ADVERTISEMENT

ಹಂಪಿಯಲ್ಲಿ ಹೆಲಿಪೋರ್ಟ್‌ ಸ್ಥಾಪಿಸುವ ಘೋಷಣೆ ಹೊರಬಿದ್ದಿದೆ. ಆದರೆ, ಈ ಬಗ್ಗೆ ಹಿಂದಿನ ಎಲ್ಲ ಸರ್ಕಾರಗಳು ಈ ಕುರಿತು ಭರವಸೆ ನೀಡಿವೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ. ಈಗ ಸಿ.ಎಂ. ಪುನಃ ಅದನ್ನೇ ಹೇಳಿದ್ದಾರೆ. ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣ ನಿರ್ಮಾಣ, ಹೊಸ ಕಚೇರಿಗಳ ಸ್ಥಾಪನೆ, ವಿಶ್ವಪ್ರಸಿದ್ಧ ಹಂಪಿಯಲ್ಲಿ ಮೂಲಸೌಕರ್ಯ, ತಾಲ್ಲೂಕುಗಳ ಅಭಿವೃದ್ಧಿಗೆ ಅನುದಾನ ಘೋಷಣೆಯಾಗುವ ಭರವಸೆ ಇತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ. ಬಜೆಟ್‌ಗೂ ಮುನ್ನ ಸಿ.ಎಂ, ಸಚಿವರಾದ ಆನಂದ್‌ ಸಿಂಗ್‌, ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರನ್ನು ಒಳಗೊಂಡ ಅಧಿಕಾರಿಗಳ ನಿಯೋಗದೊಂದಿಗೆ ಸಭೆ ನಡೆಸಿದ್ದರು.

‘ವಿಜಯನಗರ ಜಿಲ್ಲೆಗೆ ನಿರಾಶಾದಾಯಕ ಬಜೆಟ್‌. ಮೂಲಸೌಕರ್ಯ ಕಲ್ಪಿಸಲು ಅನುದಾನ ಸಿಕ್ಕಿಲ್ಲ. ಕಚೇರಿಗಳ ಸ್ಥಾಪನೆಯ ಉಲ್ಲೇಖವೂ ಇಲ್ಲ’ ಎಂದು ವಿಜಯನಗರ ಜಿಲ್ಲಾ ಅಭಿವೃದ್ಧಿ ಸಮಿತಿ ಸಂಚಾಲಕ ವೈ.ಯಮುನೇಶ್‌, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಜಿಲ್ಲಾಧ್ಯಕ್ಷ ಅಶ್ವಿನ್‌ ಕೋತಂಬ್ರಿ ಪ್ರತಿಕ್ರಿಯಿಸಿದ್ದಾರೆ.

‘ಒಂದೇ ಸಲಕ್ಕೆ ಎಲ್ಲ ಸಿಗೊಲ್ಲ’

‘ವಿಜಯನಗರ ಜಿಲ್ಲೆಯಾಗಿ ಒಂದು ವರ್ಷ ಕಳೆದಿದೆ. ಮೊದಲ ವರ್ಷವೇ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಬಜೆಟ್‌ನಲ್ಲಿ ಒಂದೇ ಸಲಕ್ಕೆ ಎಲ್ಲ ಸಿಗೊಲ್ಲ. ಕೇಂದ್ರ ಸರ್ಕಾರದಿಂದ ಈಗಾಗಲೇ ಗುರುತಿಸಲಾಗಿರುವ ‘ಐಕಾನಿಕ್‌ ಡೆಸ್ಟಿನೇಷನ್‌’ಗಳ ಪಟ್ಟಿಯಲ್ಲಿ ಹಂಪಿ ಸೇರಿಸಲಾಗಿದೆ. ಅದರಿಂದ ₹400 ಕೋಟಿ ಬರಲಿದ್ದು, ಹಂಪಿಯಲ್ಲಿ ಮೂಲಸೌಕರ್ಯ ಕಲ್ಪಿಸಲು ನೆರವಾಗುತ್ತದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

'ಈಗಾಗಲೇ ₹228 ಕೋಟಿ ಸಿಕ್ಕಿದೆ’

ವಿಜಯನಗರ ನೂತನ ಜಿಲ್ಲೆ. ಈ ಜಿಲ್ಲೆಯ ಅಭಿವೃದ್ದಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ಕಾಳಜಿ ಹೊಂದಿದ್ದಾರೆ. ಈಗಾಗಲೇ ವಿಶೇಷ ಅನುದಾನದ ಅಡಿಯಲ್ಲಿ ₹228 ಕೋಟಿ ಅನುದಾನ ನೀಡಿದ್ದಾರೆ. ಈ ಬಾರಿಯ ಆಯವ್ಯಯದಲ್ಲಿ ಹಂಪಿಯಲ್ಲಿ ಹೆಲಿಪೋರ್ಟ್‌, ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ದಿಗೆ ಅನುದಾನ ಮತ್ತು ಸ್ಮಾರಕಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಯೋಜನೆಗಳ ಘೋಷಣೆ ಆಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಗೆ ವಿಶೇಷ ಅನುದಾನ ನೀಡುವ ಭರವಸೆ ಇದೆ.
–ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ

ವಿಜಯನಗರ ಜಿಲ್ಲೆಗೆ ಸಿಕ್ಕಿದೇನು?

* ಸ್ವಯಂಚಾಲಿತ ಚಾಲನಾ ಪರೀಕ್ಷಾ ಕೇಂದ್ರ

* ಹಂಪಿ ಕನ್ನಡ ವಿ.ವಿ. ಬಲಪಡಿಸಲು ಕ್ರಮ

* ಹಂಪಿ ಗೈಡ್‌ಗಳಿಗೆ ಮಾಸಿಕ ₹2,000 ಭತ್ಯೆ

* ಹಂಪಿಯಲ್ಲಿ ಹೆಲಿಪೋರ್ಟ್‌

* ಸ್ಮಾರಕಗಳ ದತ್ತು

* ಟಿ.ಬಿ. ಡ್ಯಾಂ ಹೆಚ್ಚುವರಿ ನೀರು ಸಂಗ್ರಹಕ್ಕೆ ನವಲಿಯಲ್ಲಿ ಸಮಾನಾಂತರ ಜಲಾಶಯ

* ಹಂಪಿ ಸಮೀಪದ ಅಂಜನಾದ್ರಿಗೆ ₹100 ಕೋಟಿ

ನಿರೀಕ್ಷೆಗಳೇನಿತ್ತು?

* ಜಿಲ್ಲಾಮಟ್ಟದ ಕಚೇರಿ ಸಂಕೀರ್ಣ

* ಕಚೇರಿಗಳ ಸ್ಥಾಪನೆಗೆ ಹಣ

* ಮೆಡಿಕಲ್‌ ಕಾಲೇಜು ಘೋಷಣೆ

* ಹೊಸ ಜಿಲ್ಲೆಯಲ್ಲಿ ಮೂಲಸೌಕರ್ಯ

* ಹಂಪಿಯಲ್ಲಿ ಇನ್ನಷ್ಟು ಸೌಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.