ADVERTISEMENT

ವಿಜಯನಗರ | ಪೊಲೀಸ್ ಮೇಲೆ ಹಲ್ಲೆ: ಮೂವರಿಗೆ 7 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 3:09 IST
Last Updated 18 ಡಿಸೆಂಬರ್ 2025, 3:09 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಹೊಸಪೇಟೆ (ವಿಜಯನಗರ): ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಮೂವರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶ ನೀಡಿದೆ.

ತಳವಾರಕೇರಿಯ ಅಣ್ಣಪ್ಪ, ಬಾಣದಕೇರಿಯ ಶ್ರೀಕಾಂತ, ಹಳೆಮಲಪನಗುಡಿಯ ಮೌಲಾ ಹುಸೇನ್‌ ತಪ್ಪು ಎಸಗಿರುವುದು ಸಾಬೀತಾಗಿದೆ ಎಂದು ಕಂಡುಕೊಂಡ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ಈ ಆದೇಶ ನೀಡದರು ಹಾಗೂ ₹58 ಸಾವಿರ ದಂಡ ವಿಧಿಸಿದರು. ದಂಡದ ಮೊತ್ತದಲ್ಲಿ ₹30 ಸಾವಿರ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ನೀಡಬೇಕು ಮತ್ತು ₹28 ಸಾವಿರ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ADVERTISEMENT

ಘಟನೆಯ ವಿವರ: 2020ರ ಮಾರ್ಚ್‌ 14ರಂದು ಮಧ್ಯರಾತ್ರಿ 1.20ರ ಸುಮಾರಿಗೆ ಪೊಲೀಸ್ ಕಾನ್‌ಸ್ಟೆಬಲ್ ಮತ್ತಣ್ಣ ಅವರು ನಗರದ ಮುಖ್ಯ ಮಸೀದಿಯ ಮುಂದೆ ಕರ್ತವ್ಯದಲ್ಲಿದ್ದಾಗ ಈ ಮೂವರು ಆರೋಪಿಗಳು ಎರಡು ಬೈಕ್‌ಗಳಲ್ಲಿ ಕೇಕೆ ಹಾಕುತ್ತ, ಸೈಲೆನ್ಸರ್ ಶಬ್ದ ಮಾಡುತ್ತ ಬರುತ್ತಿದ್ದರು. ಮತ್ತಣ್ಣ ಅವರು ಇವರನ್ನು ತಡೆದು, ಗಲಾಟೆ ಮಾಡಬೇಡಿ, ಮನೆಗೆ ಹೋಗಿ ಎಂದು ಬುದ್ಧಿವಾದ ಹೇಳಿದ್ದರು. ಇದರಿಂದ ಕುಪಿತಗೊಂಡ ಅಣ್ಣಪ್ಪ ಬೈಕ್‌ ಅನ್ನು ಪೊಲೀಸ್ ಮೇಲೆ ಹತ್ತಿಸಲು ಯತ್ನಿಸಿದ್ದ, ಇತರ ಇಬ್ಬರು ಕಲ್ಲಿನಿಂದ ಮುಖಕ್ಕೆ ಜಜ್ಜಿ ಗಾಯಗೊಳಿಸಿದ್ದರು. ತನಿಖಾಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್ ಪ್ರಸಾದ್ ಕೆ.ಗೋಖಲೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಹೊಸಪೇಟೆ ಪಟ್ಟಣ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಶಿವು ನಾಯ್ಕ ಅವರು ಸಾಕ್ಷಿದಾರರನ್ನು ಹಾಜರುಪಡಿಸಲು ಸಹಕರಿಸಿದ್ದರು. ಸರ್ಕಾರದ  ಪರವಾಗಿ ಸರ್ಕಾರಿ ವಕೀಲ ಟಿ.ಅಂಬಣ್ಣ ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.