ADVERTISEMENT

ಎಂಟು ದಿನದಲ್ಲಿ ಡಕಾಯಿತಿ, ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಇಬ್ಬರು ಮಹಿಳೆಯರು ಸೇರಿ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 13:07 IST
Last Updated 30 ಅಕ್ಟೋಬರ್ 2021, 13:07 IST
ಎಂಟು ದಿನದಲ್ಲಿ ಡಕಾಯಿತಿ, ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ಎಂಟು ದಿನದಲ್ಲಿ ಡಕಾಯಿತಿ, ಕೊಲೆ ಪ್ರಕರಣ ಭೇದಿಸಿದ ಪೊಲೀಸರು   

ಹೊಸಪೇಟೆ (ವಿಜಯನಗರ): ನಗರದ ರಾಣಿಪೇಟೆಯಲ್ಲಿ ನಡೆದ ಡಕಾಯಿತಿ, ಕೊಲೆ ಪ್ರಕರಣವನ್ನು ಪೊಲೀಸರು ಎಂಟು ದಿನಗಳಲ್ಲಿ ಭೇದಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ಶುಕ್ರವಾರ (ಅ.29) ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ತರಕಾರಿ ವ್ಯಾಪಾರಿ ತೈಬುಜುಲ್ಲಾ ಮನ್ನಣ್ಣ (25), ದಾವಣಗೆರೆಯಲ್ಲಿ ಬೆಲ್ದಾರ್‌ ಕೆಲಸ ಮಾಡುವ ಎ.ಎಸ್‌. ನಾಗರಾಜ (26), ಕೆ. ಬೀರೇಶ (24), ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಗೀತಾ (38), ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಜಿ.ಎಲ್‌. ಪ್ರಮೀಳಾ (33) ನ್ಯಾಯಾಂಗ ಬಂಧನಕ್ಕೆ ಒಳಗಾದವರು.

ಪ್ರಕರಣದ ತನಿಖೆಗೆ ಡಿವೈಎಸ್ಪಿ ವಿಶ್ವನಾಥ್‌ ರಾವ್‌ ಕುಲಕರ್ಣಿ ನೇತೃತ್ವದಲ್ಲಿ ಪಟ್ಟಣ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸರಾವ್‌ ಮನ್ನೆ, ಚಿತ್ತವಾಡ್ಗಿ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಜಯಪ್ರಕಾಶ ನೇತೃತ್ವದಲ್ಲಿ ಘಟನೆ ನಡೆದ ಅ. 22ರಂದು ತಂಡ ರಚಿಸಲಾಗಿತ್ತು. ಘಟನೆಯ ಜಾಡು ಹಿಡಿದ ಪೊಲೀಸರು ವಾರದೊಳಗೆ ಪ್ರಕರಣವನ್ನು ಭೇದಿಸಿದ್ದಾರೆ. ಇದಕ್ಕಾಗಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ ಸೂದ್‌ ಅವರು ತಂಡಕ್ಕೆ ₹1 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಐವರನ್ನು ಈಗ ವಶಕ್ಕೆ ಪಡೆಯಲಾಗಿದೆ. ಇನ್ನೂ ಇವರೊಂದಿಗೆ ಕೆಲವರು ಇರುವ ಸಾಧ್ಯತೆ ಇದೆ. ಹಾಗಾಗಿ ತನಿಖೆ ಮುಂದುವರೆದಿದೆ. ಇನ್ನಷ್ಟೇ ಬಂಧಿತರಿಂದ ನಗದು, ಚಿನ್ನಾಭರಣ ವಶಪಡಿಸಿಕೊಳ್ಳಬೇಕಿದೆ. ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ. ಪ್ರಕರಣವನ್ನು ಪೂರ್ಣ ಪ್ರಮಾಣದಲ್ಲಿ ಭೇದಿಸಿದ ನಂತರ ಸಂಪೂರ್ಣ ಮಾಹಿತಿ ಮಾಧ್ಯಮದವರಿಗೆ ನೀಡಲಾಗುವುದು’ ಎಂದು ಹೇಳಿದರು.

ಘಟನೆ ಹಿನ್ನೆಲೆ:ಭುವನೇಶ್ವರಿ (65) ಹಾಗೂ ಅವರ ಕಿರಿಯ ಸಹೋದರಿ ಶಿವಭೂಷಣ ವೇದಾಚಲಂ (65) ಎಂಬುವರು ರಾಣಿಪೇಟೆಯ ಅವರ ಮನೆಯಲ್ಲೇ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಅ. 22ರಂದು ಸಂಜೆ 5.30ರಿಂದ 6ರ ನಡುವೆ ಐದು ಜನ ಬಟ್ಟೆ ಖರೀದಿಗೆಂದು ಬಂದಿದ್ದಾರೆ. ಬಾಗಿಲು ಮುಚ್ಚಿಕೊಂಡು ಇಬ್ಬರ ಕೈಕಾಲು ಕಟ್ಟಿ, ₹3 ಲಕ್ಷ ನಗದು, ₹3.30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ. ಉಸಿರುಗಟ್ಟಿದ್ದರಿಂದ ಭುವನೇಶ್ವರಿ ಜೀವ ಹೋಗಿದೆ. ಶಿವಭೂಷಣ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಶಿವಭೂಷಣ ಕೊಟ್ಟ ದೂರಿನ ಮೇರೆಗೆ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಕೊಲೆ, ಡಕಾಯಿತಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಕಚೇರಿಯಿಂದ ಸ್ವಲ್ಪವೇ ದೂರದಲ್ಲಿ ಘಟನೆ ನಡೆದಿತ್ತು. ಜನದಟ್ಟಣೆ ಇರುವ ಪ್ರದೇಶದಲ್ಲಿ ಕೊಲೆ ನಡೆದಿದ್ದರಿಂದ ಜನ ತೀವ್ರ ಆತಂಕಗೊಂಡಿದ್ದರು. ಅದೇ ದಿನ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ತನಿಖಾ ತಂಡದಲ್ಲಿ ಎಎಸ್‌ಐ ಶ್ರೀನಿವಾಸ, ಹೆಡ್‌ ಕಾನ್‌ಸ್ಟೆಬಲ್‌ಗಳಾದ ರಾಘವೇಂದ್ರ, ನಾಗರಾಜ, ಶ್ರೀನಿವಾಸ, ಶ್ರೀರಾಮರೆಡ್ಡಿ, ಕಾನ್‌ಸ್ಟೆಬಲ್‌ಗಳಾದ ಕೊಟ್ರೇಶ, ತಿಮ್ಮಪ್ಪ, ಅಡಿವೆಪ್ಪ, ಗಾಳೆಪ್ಪ, ಲಿಂಗರಾಜ್‌, ಮಂಜುನಾಥ, ನಾಗರಾಜ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.