ADVERTISEMENT

ವಿಜಯನಗರ: ಬಿಳಿ ಪಂಚೆ, ಸೀರೆಯಲ್ಲಿ ಕಂಗೊಳಿಸಿದ ಪೌರ ಕಾರ್ಮಿಕರು!

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 13:22 IST
Last Updated 23 ಸೆಪ್ಟೆಂಬರ್ 2022, 13:22 IST
ಹೊಸಪೇಟೆ ನಗರಸಭೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಹಿರಿಯ ಪೌರ ಕಾರ್ಮಿಕರನ್ನು ಅಧ್ಯಕ್ಷೆ ಸುಂಕಮ್ಮ ಸನ್ಮಾನಿಸಿದರು
ಹೊಸಪೇಟೆ ನಗರಸಭೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಹಿರಿಯ ಪೌರ ಕಾರ್ಮಿಕರನ್ನು ಅಧ್ಯಕ್ಷೆ ಸುಂಕಮ್ಮ ಸನ್ಮಾನಿಸಿದರು   

ಹೊಸಪೇಟೆ (ವಿಜಯನಗರ): ಪೌರ ಕಾರ್ಮಿಕರು ಶುಕ್ರವಾರ ಸ್ವಲ್ಪ ಭಿನ್ನವಾಗಿ ಕಾಣಿಸಿಕೊಂಡರು. ಸಮವಸ್ತ್ರಗಳನ್ನು ಬದಿಗಿಟ್ಟು ಬಿಳಿ ಅಂಗಿ, ಪಂಚೆ ಧರಿಸಿದ್ದರೆ, ಮಹಿಳೆಯರು ಅಂಚಿನ ಸೀರೆ ಧರಿಸಿ ಹೆಜ್ಜೆ ಹಾಕಿದರು. ಎಲ್ಲರಲ್ಲೂ ಸಂಭ್ರಮ ಮನೆ ಮಾಡಿತು.

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದಲ್ಲಿ ಪೌರ ಕಾರ್ಮಿಕರು ರ್‍ಯಾಲಿ ನಡೆಸಿದರು. ಬೆಳಿಗ್ಗೆಯೇ ನಗರ ಸ್ವಚ್ಛತೆಯ ಕಾರ್ಯ ಪೂರ್ಣಗೊಳಿಸಿ, ಹೊಸ ವಸ್ತ್ರಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದರು. ರ್‍ಯಾಲಿಯುದ್ದಕ್ಕೂ ಉತ್ಸಾಹದಿಂದ ಹೆಜ್ಜೆ ಹಾಕಿದರು. ಕೆಲವರು ನಾದಕ್ಕೆ ಕುಣಿದರು. ಅವರಿಗಾಗಿಯೇ ಒಂದು ದಿನ ಆಚರಿಸಿ, ಅವರ ಸೇವೆ ಸ್ಮರಿಸಿದ್ದಕ್ಕೆ ಕೃತಜ್ಞತೆಯ ಭಾವ ಅವರ ಕಂಗಳಲ್ಲಿ ಕಾಣಿಸಿತು.

ನಗರಸಭೆ ಕಚೇರಿಯಿಂದ ಆರಂಭಗೊಂಡ ರ್‍ಯಾಲಿಯು ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಪುನಃ ನಗರಸಭೆ ಕಚೇರಿ ಬಳಿ ಕೊನೆಗೊಂಡಿತು. ಮಾರ್ಗದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಅನಂತರ ನಗರಸಭೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪೌರ ಕಾರ್ಮಿಕರ ಸೇವೆ ಗುರುತಿಸಿ ಸತ್ಕರಿಸಲಾಯಿತು.

ADVERTISEMENT

ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಪೌರಾಯುಕ್ತ ಮನೋಹರ್‌ ನಾಗರಾಜ, ಪರಿಸರ ಎಂಜಿನಿಯರ್‌ ಆರತಿ, ಆರೋಗ್ಯ ಅಧಿಕಾರಿ ವಿರೂಪಾಕ್ಷ ಸೇರಿದಂತೆ ಸದಸ್ಯರು, ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.