ADVERTISEMENT

ಬೆಲೆ ಏರಿಕೆಗೆ ಖಂಡನೆ: ಹೊಸಪೇಟೆಯಲ್ಲಿ ಪ್ರಧಾನಿ ಮೋದಿ ಪ್ರಕೃತಿ ದಹನ

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 8:27 IST
Last Updated 23 ಫೆಬ್ರುವರಿ 2021, 8:27 IST
ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿಯವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಅವರ ಪ್ರತಿಕೃತಿಯನ್ನು ಡಿವೈಎಫ್‌ಐ ಕಾರ್ಯಕರ್ತರು ಮಂಗಳವಾರ ಹೊಸಪೇಟೆಯಲ್ಲಿ ದಹಿಸಿದರು
ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿಯವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಅವರ ಪ್ರತಿಕೃತಿಯನ್ನು ಡಿವೈಎಫ್‌ಐ ಕಾರ್ಯಕರ್ತರು ಮಂಗಳವಾರ ಹೊಸಪೇಟೆಯಲ್ಲಿ ದಹಿಸಿದರು   

ವಿಜಯನಗರ (ಹೊಸಪೇಟೆ): ಬಂಡವಾಳಷಾಹಿಗಳಿಗೆ ಅನುಕೂಲ ಮಾಡಿಕೊಡಲು ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದು ಎಲ್ಲ ರೀತಿಯ ವಸ್ತುಗಳ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣರಾಗಿದ್ದಾರೆ ಎಂದು ಆರೋಪಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ (ಡಿವೈಎಫ್‌ಐ) ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.

ನಗರದ ಶ್ರಮಿಕ ಭವನದ ಎದುರು ಸೇರಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಮೋದಿ ಪ್ರತಿಕೃತಿ ಸುಟ್ಟರು. ನಂತರ ಅಲ್ಲಿಂದ ಪ್ರಮುಖ ಮಾರ್ಗಗಳ ಮೂಲಕ ತಾಲ್ಲೂಕು ಕಚೇರಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ರಾಷ್ಟ್ರಪತಿಯವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.

ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಕೃಷಿ ಕಾಯ್ದೆ ರದ್ದುಗೊಳಿಸುವಂತೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಮೂರು ತಿಂಗಳಿಂದ ವಿವಿಧ ರಾಜ್ಯದ ರೈತರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಸ್ಪಂದಿಸುತ್ತಿಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದರು.

ADVERTISEMENT

ರೈತರ ಹೋರಾಟಕ್ಕೆ ಸ್ಪಂದಿಸುವುದರ ಬದಲು ರೈತರನ್ನು ದೇಶದ್ರೋಹಿಗಳೆಂದು ಹೀಯಾಳಿಸುತ್ತಿರುವುದು ಖಂಡನೀಯ. ಹೋರಾಟ ಬೆಂಬಲಿಸಿದ ದಿಶಾ ರವಿ ಸೇರಿದಂತೆ ಅನೇಕರನ್ನು ಬಂಧಿಸಿ ಜೈಲಿಗಟ್ಟಿರುವುದು ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ತಂತ್ರ. ಆದರೆ, ಅದಕ್ಕೆ ಯಾರೂ ಜಗ್ಗುವುದಿಲ್ಲ. ಬೇಡಿಕೆಗಳು ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.

ದೇಶದಾದ್ಯಂತ ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು. ಎಪಿಎಂಸಿ, ವಿದ್ಯುತ್‌ ಶಕ್ತಿ ತಿದ್ದುಪಡಿ ಕಾಯ್ದೆ ವಾಪಸ್‌ ಪಡೆಯಬೇಕು. ರೈಲ್ವೆ ಖಾಸಗೀಕರಣ ಕೈಬಿಡಬೇಕು. ಹೊಸ ಶಿಕ್ಷಣ ನೀತಿ ಜಾರಿಗೆ ತರಬಾರದು. ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ವಿ. ಸ್ವಾಮಿ, ತಾಲ್ಲೂಕು ಅಧ್ಯಕ್ಷ ಈಡಿಗರ ಮಂಜುನಾಥ, ಕಾರ್ಯದರ್ಶಿ ಕಲ್ಯಾಣಯ್ಯ, ಉಪಾಧ್ಯಕ್ಷ ಬಿ. ಮಹೇಶ, ಅಲ್ತಾಫ್‌, ರೆಹಮಾನ್‌, ಖಾಲಿಫ್‌, ಬಂಡೆ ತಿರುಕಪ್ಪ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.