
ಹಗರಿಬೊಮ್ಮನಹಳ್ಳಿ ಸಮೀಪದ ಚಿಂತ್ರಪಳ್ಳಿ ಕೆರೆಯ ಬಳಿ ರೋಸಿ ಸ್ಟಾರ್ಲಿಂಗ್ ಹಕ್ಕಿಗಳ ಕಲರವ
ಪ್ರಜಾವಾಣಿ ಚಿತ್ರ
ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಪಟ್ಟಣದ ಹೊರವಲಯದಲ್ಲಿ ಇರುವ ಚಿಂತ್ರಪಳ್ಳಿ ಕೆರೆಯಲ್ಲಿ ‘ರೋಸಿ ಸ್ಟಾರ್ಲಿಂಗ್’ (ಗುಲಾಬಿ ಕಬ್ಬಕ್ಕಿ) ಪಕ್ಷಿಗಳ ಕಲರವ ಮನೆಮಾಡಿದೆ. ನೋಡುಗರನ್ನು ಮುದಗೊಳಿಸುತ್ತಿವೆ.
ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಹೆಸರಾಂತ ಅಂಕಸಮುದ್ರ ಪಕ್ಷಿಧಾಮದ ಹತ್ತಿರದಲ್ಲಿ, 275 ಎಕರೆ ವಿಸ್ತೀರ್ಣದ ಚಿಂತ್ರಪಳ್ಳಿ ಕೆರೆಗೆ ಸಾವಿರಾರು ಪಕ್ಷಿಗಳು ವಲಸೆ ಬಂದಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಂತ್ರಪಳ್ಳಿ ಕೆರೆ ದಡದ ಗಿಡಗಳಲ್ಲಿ ವಿಶ್ರಮಿಸುತ್ತಿರುವ ರೋಸಿ ಸ್ಟಾರ್ಲಿಂಗ್ ಹಕ್ಕಿಗಳು
ಹರಪನಹಳ್ಳಿಯ ಪಾಳೇಗಾರನಾಗಿದ್ದ ಸೋಮಶೇಖರ ನಾಯಕ ಈ ಕೆರೆ ನಿರ್ಮಿಸಿದ್ದನೆಂದು ಇತಿಹಾಸ ಹೇಳುತ್ತದೆ. ಇಲ್ಲಿಗೆ ಆಹಾರ ಅರಸಿ ದೇಶ, ವಿದೇಶಗಳ ಹಕ್ಕಿಗಳು ವಲಸೆ ಬರುತ್ತಿವೆ. ಈ ವರ್ಷ ಮುಖ್ಯವಾಗಿ ಯುರೋಪ್‌ನಿಂದ ರೋಸಿ ಸ್ಟಾರ್ಲಿಂಗ್ ಪಕ್ಷಿಗಳು ಬಂದಿವೆ.
ಕೆರೆ ದಡದ ಗಿಡಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು ಕುಳಿತಾಗ ಮಲ್ಲಿಗೆ ಮೊಗ್ಗಿನ ಮಾಲೆಯಂತೆ ಭಾಸವಾಗುತ್ತದೆ. ಅವು ಪುರ‍್ರನೆ ಹಾರಿದಾಗ ಬಾನಿಗೆ ಬಲೆ ಬೀಸಿದಂತೆ ದೃಶ್ಯಕಾವ್ಯ ಮೂಡುತ್ತದೆ.
ಪಕ್ಷಿಧಾಮದ ಜತೆಗೆ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶ, ತಾಲ್ಲೂಕಿನ ಮಾಲವಿ ಜಲಾಶಯ, ತಿಗಳನ ಕೆರೆ, ಭೀಮನಕೆರೆ, ಓಬಳಾಪುರ ಕೆರೆಗಳಲ್ಲೂ ಕೆಲ ಅಪರೂಪದ ಬಾನಾಡಿಗಳು ವಾಸ್ತವ್ಯ ಹೂಡುತ್ತಿವೆ. ಹೀಗಾಗಿ ಹಗರಿಬೊಮ್ಮಮಹಳ್ಳಿ ತಾಲ್ಲೂಕು ವಿಶಾಲ ಪಕ್ಷಿಧಾಮದಂತೆಯೇ ಭಾಸವಾಗುತ್ತಿದೆ.
‘ಅಂಕಸಮುದ್ರ ಪಕ್ಷಿಧಾಮದ ಜತೆಗೆ ಇತರ ಕೆರೆಗಳತ್ತಲೂ ಹಕ್ಕಿಗಳು ವಲಸೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಪರಿಸರ ಶುದ್ಧವಾಗಿದ್ದಷ್ಟೂ ಪಕ್ಷಿಗಳ ವಲಸೆ, ವಾಸ ನಿಶ್ಚಿತ’ ಎನ್ನುತ್ತಾರೆ ಬಾಂಬೆ ನ್ಯಾಚುರಲ್‍ಹಿಸ್ಟರಿ ಸೊಸೈಟಿ (ಬಿಎನ್‍ಎಚ್‍ಎಸ್) ಸಂಶೋಧಕ ಎಚ್.ರಮೇಶ್.
ಚಿಂತ್ರಪಳ್ಳಿ ಕೆರೆಗೆ ವಿದೇಶಿ ಹಕ್ಕಿಗಳು ಬರುತ್ತಿರುವ ಕಾರಣ ಕೆರೆ ಸಂರಕ್ಷಣೆಯ ಜತೆಗೆ ಬೇಟೆಗಾರರಿಂದ ಹಕ್ಕಿಗಳನ್ನು ರಕ್ಷಿಸುವ ಕೆಲಸವೂ ಅಗತ್ಯವಾಗಿ ಆಗಬೇಕುಟಿ.ಕೊಟ್ರೇಶ್ ಪಕ್ಷಿಪ್ರೇಮಿ ಚಿಂತ್ರಪಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.