
ಹೊಸಪೇಟೆ (ವಿಜಯನಗರ): ಕಳೆದ ಒಂದು ತಿಂಗಳಿನಿಂದೀಚೆಗೆ ಮರಳು ಮಾಫಿಯಾ ರಾಯಲ್ಟಿ ನೆಪದಲ್ಲಿ ಮರಳು ಅಭಾವ ಸೃಷ್ಠಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಆರಂಭಿಸಿದ್ದು, ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಮತ್ತು ಬಡವರ ಮನ ಕೆನಸು ನುಚ್ಚು ನೂರಾಗದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್ ಒತ್ತಾಯಿಸಿದೆ.
ಒಕ್ಕೂಟದ ತಾಲ್ಲೂಕು ಸಮಿತಿಯ ಸಂಚಾಲಕ ಎನ್.ಯಲ್ಲಾಲಿಂಗ ನೇತೃತ್ವದಲ್ಲಿ ಬುಧವಾರ ಇಲ್ಲಿ ಉಪವಿಭಾಗಾಧಿಕಾರಿ ಪಿ.ವಿವೇಕಾನಂದ ಅವರನ್ನು ಭೇಟಿ ಮಾಡಿದ ನಿಯೋಗ, ತಕ್ಷಣ ಮರಳು ದಂಧೆಕೋರರ ಮೇಲೆ ಕ್ರಮ ಕೈಗೊಂಡು ಬ್ಯಾಂಕ್ ಸಾಲ ಪಡೆದು ಮನೆ ಕಟ್ಟುವವರ ಹಿತ ಕಾಯಬೇಕು ಎಂದು ಆಗ್ರಹಿಸಿತು.
ತಿಂಗಳ ಹಿಂದೆ ಮರಳು ಟ್ರ್ಯಾಕ್ಟರ್‌ಗೆ ₹4 ಸಾವಿರಕ್ಕೆ ಮತ್ತು ಎಂ ಸ್ಯಾಂಡ್ ₹2 ಸಾವಿರಕ್ಕೆ ಸಿಗುತ್ತಿತ್ತು. ಒಂದು ಲಾರಿ ಮರಳಿಗೆ ₹20 ಸಾವಿರ ಇತ್ತು. ಇಂದು ಅದು ಕ್ರಮವಾಗಿ ₹6 ಸಾವಿರ, ₹4 ಸಾವಿರ ಮತ್ತು ₹36 ಸಾವಿರಕ್ಕೆ ಹೆಚ್ಚಳವಾಗಿದೆ. ಸ್ಲಂ ಬೋರ್ಡ್ ಯೋಜನೆ ಪಡೆದವರಿಗೆ ಮಂಡಳಿ ಸಾಮಾಗ್ರಿಗಳನ್ನು ಕೊಡದೆ ಅರ್ಧಕ್ಕೆ ನಿಲ್ಲಿಸಿದೆ. ಇವರ ಪರಿಸ್ಥಿತಿ ಕೇಳುವ ಜನಪ್ರತಿನಿಧಿಗಳೇ ಇಲ್ಲವಾಗಿದ್ದಾರೆ. ಈ ಕಾರಣದಿಂದ ಕಟ್ಟಡ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಗುಳೆ ಹೋಗುವುದನ್ನು ತಪ್ಪಿಸುವುದನ್ನು ಮತ್ತು ಬೆಲೆ ಏರಿಕೆಯ ಮಾಫಿಯಾ ನೈಜ ಕಾರಣಗಳನ್ನು ಆಧರಿಸಿ ಮರುಳು, ಇಟ್ಟಿಗೆ, ಸಿಮೆಂಟ್ ಮತ್ತು ಇತರೆ ಸಾಮಾಗ್ರಿಗಳ ಮಾರಾಟಗಾರರ ಸಭೆ ನಡೆಸಿ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಎಂ.ಗೋಪಾಲ್, ಹೇಮಂತ ನಾಯ್ಕ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.