ADVERTISEMENT

ಮನೆ ಸಮೀಪಿಸಿತ್ತು, ಜವರಾಯ ಮಾತ್ರ ಬಿಡಲಿಲ್ಲ: ಒಂದೇ ಕುಟುಂಬದ ಏಳು ಮಂದಿ ಸಾವು

ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಸರಣಿ ಅಪಘಾತ

ಎಚ್.ಎಸ್.ಶ್ರೀಹರಪ್ರಸಾದ್
Published 10 ಅಕ್ಟೋಬರ್ 2023, 7:24 IST
Last Updated 10 ಅಕ್ಟೋಬರ್ 2023, 7:24 IST
<div class="paragraphs"><p>ಅಪಘಾತದಲ್ಲಿ ಹೆದ್ದಾರಿಯಿಂದ ಕಮರಿಗೆ ಉರುಳಿಬಿದ್ದ ಟ್ರಕ್‌&nbsp; –</p></div>

ಅಪಘಾತದಲ್ಲಿ ಹೆದ್ದಾರಿಯಿಂದ ಕಮರಿಗೆ ಉರುಳಿಬಿದ್ದ ಟ್ರಕ್‌  –

   

ಪ್ರಜಾವಾಣಿ ಚಿತ್ರ/ ಲವ ಕೆ.

ಮರಿಯಮ್ಮನಹಳ್ಳಿ: ಅದು ಒಂದೇ ಕುಟುಂಬದ ಎಂಟು ಜನ ಸೇರಿಕೊಂಡು ಹರಪನಹಳ್ಳಿ ಬಳಿಯ ಕೂಲಳ್ಳಿ ಗೋಣಿಬಸವೇಶ್ವರ ದರ್ಶನ ಮುಗಿಸಿಕೊಂಡು ಸಂತಸದಿಂದ ತಮ್ಮ ಮಹೇಂದ್ರ ಟಿಯುವಿ ವಾಹನದಲ್ಲಿ ವಾಪಸಾಗುತ್ತಿದ್ದ ಕ್ಷಣ. ಮನೆ ತಲುಪಲು ನಾಲ್ಕು ಕಿ.ಮೀ. ಅಷ್ಟೇ ಉಳಿದಿತ್ತು. ಆದರೆ ಜವರಾಯ ಹೆದ್ದಾರಿಯಲ್ಲೇ ಕಾದು ಕುಳಿತಿದ್ದ. ಏಳೂ ಜನರನ್ನು ಬಲಿ ತೆಗೆದುಕೊಂಡ.

ADVERTISEMENT

ಹೆದ್ದಾರಿಯ ವಿಭಜಕ ದಾಟಿ ಬಂದ ಟಿಪ್ಪರ್ ಹಾಗೂ ಟ್ರಕ್‌ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ಕಾರಿನಲ್ಲಿದ್ದ ಏಳು ಮಂದಿಯ ಮೃತದೇಹ ಹೆದ್ದಾರಿಯಲ್ಲಿ ಕಂಡಾಗ ಜನ ಮಮ್ಮಲ ಮರುಗಿದರು. ನಿರ್ದಯಿ ಜವರಾಯನನ್ನು ಶಪಿಸಿದರು.

ವ್ಯಾಸನಕೆರೆ ರೈಲು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಸೋಮವಾರ ಸಂಜೆ ನಡೆದ ಸರಣಿ ಅಪಘಾತ ಈ ಭಾಗದಲ್ಲಿ ನಡೆದ ಅತ್ಯಂತ ದೊಡ್ಡ ಅಪಘಾತಗಳಲ್ಲಿ ಒಂದೆಂಬ ಕುಖ್ಯಾತಿಯನ್ನೂ ಗಳಿಸಿತು. ವ್ಯಾಸನಕೆರೆ ರೈಲು ನಿಲ್ದಾಣದ ಬಳಿ ಬಲಕ್ಕೆ ಹೊಸಪೇಟೆಯಿಂದ ಕೂಡ್ಲಿಗಿ ಕಡೆ ಸಾಗುತ್ತಿದ್ದ ಟಿಪ್ಪರ್‌ನ ಸ್ಟಿಯರಿಂಗ್ ತುಂಡಾಗಿ ರಸ್ತೆ ವಿಭಜಕ ದಾಟಿಕೊಂಡು ತನ್ನ ಬಲಕ್ಕೆ ಸಾಗುತ್ತಿದ್ದ ಕಾರಿಗೆ ಹಾಗೂ ಅದರ ಪಕ್ಕದಲ್ಲೇ ಚಲಿಸುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದುದರಿಂದ ಈ ಸರಣಿ ಅ‍ಪಘಾತ ಸಂಭವಿಸಿತು. ನಡುವೆ ಸಿಲುಕಿದ ಕಾರು ನಜ್ಜುಗುಜ್ಜಾದರೆ, ಟಿಪ್ಪರ್ ಡಿಕ್ಕಿಯ ರಭಸಕ್ಕೆ ಟ್ರಕ್‌ ಕಮರಿಗೆ ಹೋಗಿ ಬಿತ್ತು.

ಹೊಸಪೇಟೆಯ ಉಕ್ಕಡಕೇರಿಯ ಗೋಣಿಬಸಪ್ಪ (65), ಕೆಂಚಮ್ಮ(80) ಯುವರಾಜ(05), ಭಾಗ್ಯಮ್ಮ(32) ಹಾಗೂ ಸಂಡೂರಿನ ಇವರ ಸಂಬಂಧಿಕರಾದ ಒಂದೇ ಕುಟುಂಬದ ಭೀಮಲಿಂಗಪ್ಪ (60), ಅವರ ಪತ್ನಿ ಉಮಾ(55) ಹಾಗೂ ಅವರ ಪುತ್ರ ಅನಿಲ್(26) ಅವರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಬಾಲಕ ಇವನ್(2) ಹಾಗೂ ಲಾರಿಗಳ ಚಾಲಕರಾದ ಪಳನಿಸ್ವಾಮಿ ಹಾಗೂ ರಾಜೇಶ್ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಹರಪನಹಳ್ಳಿ ಬಳಿಯ ಕೂಲಳ್ಳಿ ಗೋಣಿಬಸವೇಶ್ವರ ದರ್ಶನ ಮುಗಿಸಿಕೊಂಡು ವಾಪಸ್‌ ಬರುವಾಗ ಘಟನೆ ನಡೆದಿದೆ. ಹೆದ್ದಾರಿಯ ಮಧ್ಯಭಾಗದಲ್ಲೇ ಅಪಘಾತ ಸಂಭವಿಸಿದ್ದರಿಂದ ಕೆಲ ಗಂಟೆಗಳ ಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಪೊಲೀಸರು ವಾಹನಗಳನ್ನು ಎಂಎಸ್‍ಪಿಎಲ್ ಕ್ರಾಸ್‍ನಿಂದ ಬಲಬದಿಯ ಸರ್ವಿಸ್ ರಸ್ತೆಯ ಮೂಲಕ ತೆರಳಲು ಅನುವು ಮಾಡಿಕೊಟ್ಟರು.

ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದರಿಂದ ಪೊಲೀಸರು ಹರಸಾಹಸ ಮಾಡಿ ಜನರನ್ನು ಚದುರಿಸಬೇಕಾಯಿತು. ನಂತರ ಎರಡು ಕ್ರೇನ್‍ಗಳ ಮೂಲಕ ಕಾರು ಹಾಗೂ ಲಾರಿಯನ್ನು ಹೆದ್ದಾರಿಯಿಂದ ಪಕ್ಕಕ್ಕೆ ಸರಿಸಿ ವಾಹನಗಳು ತೆರಳಲು ಅನುವು ಮಾಡಿಕೊಟ್ಟರು. ಸ್ಥಳಕ್ಕೆ ಎಸ್ಪಿ ಶ್ರೀಹರಿಬಾಬು ಬಿ.ಎಲ್. ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

4 ವರ್ಷದಲ್ಲಿ 82 ಜನ ಸಾವು

ಪಟ್ಟಣದ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಬರುವ 35 ಕಿ.ಮೀ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಕಳೆದ 4 ವರ್ಷಗಳಲ್ಲಿ ನಡೆದ ಹೆದ್ದಾರಿ ಅಪಘಾತದಲ್ಲಿ 82 ಜನ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆಯಿಂದ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದ ಆರ್‌ಟಿಐ ಕಾರ್ಯಕರ್ತ ಹಾಗೂ ಸಮೂಹ ಶಕ್ತಿ ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಪೋತಲಕಟ್ಟೆಯ ಪಿ.ಎಚ್.ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 2019ರ ಜ.1ರಿಂದ 2023ರ ಫೆ.28ರವರೆಗಿನ 4 ವರ್ಷದಲ್ಲಿ ಹೆದ್ದಾರಿಯಲ್ಲಿ ನಡೆದ ಮಾರಣಾಂತಿಕ ಅಪಘಾತಗಳು ಸಂಖ್ಯೆ 81 ಆಗಿದ್ದು ಅದರಲ್ಲಿ 82 ಜನ ಅಸುನೀಗಿದ್ದರೆ ಒಟ್ಟು 178 ಜನ ತೀವ್ರ ಗಾಯಗೊಂಡಿದ್ದಾರೆ. ಮಾರಣಾಂತಿಕ ಅಲ್ಲದ ಅಪಘಾತಗಳ ಸಂಖ್ಯೆ 152ರಷ್ಟಿದ್ದು 250 ಮಂದಿಗೆ ಗಾಯವಾಗಿದೆ. ಒಟ್ಟು 148 ಆರೋ‍ಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ನಜ್ಜುಗುಜ್ಜಾದ ಕಾರು  –ಪ್ರಜಾವಾಣಿ ಚಿತ್ರ/ ಲವ ಕೆ.
ಅಪಘಾತಕ್ಕೆ ಕಾರಣವಾದ ಟಿಪ್ಪರ್‌  –ಪ್ರಜಾವಾಣಿ ಚಿತ್ರ/ ಲವ ಕೆ.
ನಜ್ಜುಗುಜ್ಜಾದ ವಾಹನಗಳನ್ನು ಹೆದ್ದಾರಿಯಿಂದ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು – ಪ್ರಜಾವಾಣಿ ಚಿತ್ರ/ ಲವ ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.