ADVERTISEMENT

ಉತ್ತಂಗಿ ಮಠದ ಶಂಕರ ಸ್ವಾಮೀಜಿ ಲಿಂಗೈಕ್ಯ: ಸಮಾಜಕ್ಕೆ ಮಠದ ಆಸ್ತಿ ನೀಡಿದ ಸಂತ

ಕೆ.ಸೋಮಶೇಖರ
Published 2 ಡಿಸೆಂಬರ್ 2024, 5:43 IST
Last Updated 2 ಡಿಸೆಂಬರ್ 2024, 5:43 IST
ಹೂವಿನಹಡಗಲಿ ತಾಲ್ಲೂಕಿನ ಉತ್ತಂಗಿ ಗ್ರಾಮದ ಶಂಕರಸ್ವಾಮಿ ಸಂಸ್ಥಾನ ಮಠದ ಆವರಣದಲ್ಲಿ ಶಂಕರ ಸ್ವಾಮೀಜಿ ಅಂತಿಮಯಾತ್ರೆ ಭಕ್ತರ ಸಮ್ಮುಖದಲ್ಲಿ ಭಾನುವಾರ ಜರುಗಿತು –ಪ್ರಜಾವಾಣಿ ಚಿತ್ರ
ಹೂವಿನಹಡಗಲಿ ತಾಲ್ಲೂಕಿನ ಉತ್ತಂಗಿ ಗ್ರಾಮದ ಶಂಕರಸ್ವಾಮಿ ಸಂಸ್ಥಾನ ಮಠದ ಆವರಣದಲ್ಲಿ ಶಂಕರ ಸ್ವಾಮೀಜಿ ಅಂತಿಮಯಾತ್ರೆ ಭಕ್ತರ ಸಮ್ಮುಖದಲ್ಲಿ ಭಾನುವಾರ ಜರುಗಿತು –ಪ್ರಜಾವಾಣಿ ಚಿತ್ರ   

ಹೂವಿನಹಡಗಲಿ: ಇವರು ತನಗಾಗಿ ಏನನ್ನೂ ಬೇಡಲಿಲ್ಲ, ಮಠಕ್ಕಾಗಿ ಯಾರ ಬಳಿಯೂ ಕೈ ಚಾಚಲಿಲ್ಲ. ಬದಲಾಗಿ ಮಠದ ಆಸ್ತಿಯನ್ನೇ ಸರ್ಕಾರ, ಸಮಾಜದ ಒಳಿತಿಗಾಗಿ ಅರ್ಪಿಸಿ ನಿಸ್ಪೃಹ ಸೇವೆ ಸಲ್ಲಿಸಿದರು.

ತಾಲ್ಲೂಕಿನ ಉತ್ತಂಗಿ ಗ್ರಾಮದ ಶಂಕರಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಶಂಕರ ಸ್ವಾಮೀಜಿ, ಮಠದ 138 ಎಕರೆ ಜಮೀನಿನ ಬಹುಪಾಲನ್ನು ಸಮಾಜದ ಅಭಿವೃದ್ಧಿ ಕೆಲಸಗಳಿಗೆ ನೀಡಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಶನಿವಾರ ಅವರು ಲಿಂಗೈಕ್ಯರಾದರು. ಗ್ರಾಮಾಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಸ್ವಾಮೀಜಿ ಅಗಲಿಕೆಗೆ ಗ್ರಾಮದ ಜನರು ಕಂಬನಿ ಮಿಡಿದು, ಭಕ್ತಿಯ ನಮನ ಸಲ್ಲಿಸಿದರು.

ADVERTISEMENT

ಉತ್ತಂಗಿಯಲ್ಲಿ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಗ್ರಾಮ ಪಂಚಾಯಿತಿ, ಸಮುದಾಯ ಭವನ, ಸರ್ಕಾರಿ ಆಸ್ಪತ್ರೆ, ರಂಗಮಂದಿರ ಕಟ್ಟಡ ನಿರ್ಮಾಣಕ್ಕೆ ಹಾಗೂ ಹೊಳಗುಂದಿ, ಹನಸಿ, ಒಡೆಯಂಪುರದಲ್ಲಿ ಶಾಲೆ, ವಸತಿ ನಿಲಯ, ಆಶ್ರಯ ಪ್ಲಾಟ್, ಸ್ಮಶಾನಕ್ಕೆ ಸ್ವಾಮೀಜಿ ಬೆಲೆ ಬಾಳುವ ಮಠದ ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಒಡೆಯಂಪುರ ಶ್ರೀಗಳ ಹುಟ್ಟೂರು. ಪಾಲಾಕ್ಷಯ್ಯ–ದೇವೀರಮ್ಮ ಅವರ ಪೂರ್ವಾಶ್ರಮದ ತಂದೆ, ತಾಯಿ. 1962ರಲ್ಲಿ ಉತ್ತಂಗಿಯ ಶಂಕರ ಸಂಸ್ಥಾನಮಠದ 19ನೇ ಪೀಠಾಧಿಪತಿಯಾಗಿ ನಿಯುಕ್ತಿಗೊಂಡು, ಕೊಟ್ಟೂರು ಗುರುಬಸವೇಶ್ವರ ದೇವಸ್ಥಾನ ಕ್ರಿಯಾಮೂರ್ತಿಗಳಾಗಿ, ಉಜ್ಜಿನಿ ಚೌಕಿ ವಿರಕ್ತಮಠ, ಉತ್ತಂಗಿ, ಇಟ್ಟಿಗಿ, ಹೊಳಗುಂದಿ, ಕೂಡ್ಲಿಗಿ ತಾಲ್ಲೂಕಿನ ಎಂ.ಬಿ.ಅಯ್ಯನಹಳ್ಳಿ, ಶಿಕಾರಿಪುರ ತಾಲ್ಲೂಕಿನ ನಿಂಬೆಗೊಂದಿ, ಹಿರೇಕೆರೂರು ತಾಲ್ಲೂಕಿನ ಒಡೆಯಂಪುರ ಸೇರಿದಂತೆ ಅಷ್ಟ ಮಠಗಳ ಪೀಠಾಧಿಪತಿಯಾಗಿ ಆರು ದಶಕದಿಂದ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.

‘ಕೆರೆಯ ನೀರು ಕೆರೆಗೆ ಚೆಲ್ಲುವೆ, ಇದರಲ್ಲಿ ನನ್ನದೆಂಬುದು ಏನೂ ಇಲ್ಲ. ಊರು ಅಭಿವೃದ್ಧಿಯಾಗಬೇಕು. ಮುಂದಿನ ಪೀಳಿಗೆ ಶಿಕ್ಷಣ ಪಡೆದು, ಸುಖವಾಗಿ ಬದುಕಬೇಕೆಂದು ಶಂಕರ ಸ್ವಾಮೀಜಿ ಹೇಳುತ್ತಿದ್ದರು’ ಎಂದು ಕರಿಗಾರ ಕೊಟ್ರಪ್ಪ ಸ್ಮರಿಸಿದರು.

ಅಂತಿಮ ದರ್ಶನ: ಉಜ್ಜಿನಿ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಸೋಮಶಂಕರ ಸ್ವಾಮೀಜಿ, ಅಭಿನವ ಚನ್ನಬಸವ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ಹಂಪಸಾಗರದ ಶಿವಲಿಂಗ ರುದ್ರಮುನಿ ಸ್ವಾಮೀಜಿ, ಹಿರೇಹಡಗಲಿ ಹಾಲಸ್ವಾಮೀಜಿ ಇತರೆ ಮಠಾಧೀಶರು, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಇತರರು ಶ್ರೀಗಳ ಅಂತಿಮ ದರ್ಶನ ಪಡೆದರು.

ಶಂಕರ ಸ್ವಾಮೀಜಿ
ಸಾಮಾಜಿಕ ಕಳಕಳಿ ಹೊಂದಿದ್ದ ಸ್ವಾಮೀಜಿ ಮಕ್ಕಳ ಭವಿಷ್ಯಕ್ಕಾಗಿ ಮಠದ ಆಸ್ತಿಯನ್ನೇ ನೀಡಿದ್ದಾರೆ. ಸಮರ್ಪಣಾ ಮನೋಭಾವದಿಂದ ಮಾದರಿಯಾಗಿದ್ದಾರೆ
ಸೋಮಶಂಕರ ಸ್ವಾಮೀಜಿ ಶಂಕರ ಸ್ವಾಮಿ ಮಠ ಉತ್ತಂಗಿ
ಶ್ರೀಗಳ ಗದ್ದುಗೆ ಬಳಿ ಕ್ರಿಯಾ ಸಮಾಧಿ
ಮಠದ ಆವರಣದಲ್ಲಿ ಭಾನುವಾರ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅನೇಕ ಮಠಾಧೀಶರು ರಾಜಕಾರಣಿಗಳು ಭಕ್ತರು ಅಂತಿಮ ದರ್ಶನ ಪಡೆದರು. ಅಲಂಕೃತ ಪಲ್ಲಕ್ಕಿಯಲ್ಲಿ ಸ್ವಾಮೀಜಿ ಅಂತಿಮಯಾತ್ರೆ ನಡೆಯಿತು. ಮಠದ ಆವರಣದಲ್ಲಿ ಕೆಂಪಯ್ಯ ಸ್ವಾಮೀಜಿ ಗದ್ದುಗೆ ಪಕ್ಕದಲ್ಲೇ ಶಂಕರ ಸ್ವಾಮೀಜಿ ಕ್ರಿಯಾ ಸಮಾಧಿ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.