SSLC Results: ಕಲ್ಯಾಣ ಕರ್ನಾಟಕಕ್ಕೆ ವಿಜಯನಗರ ಜಿಲ್ಲೆಯೇ ನಂ.1
ಹೊಸಪೇಟೆ (ವಿಜಯನಗರ): ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಜಯನಗರ ಜಿಲ್ಲೆ ಶೇ 67.62ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ ಒಟ್ಟು 35 ಶೈಕ್ಷಣಿಕ ಜಿಲ್ಲೆಗಳ ಪೈಕಿ 18ನೇ ಸ್ಥಾನ ಗಳಿಸಿದೆ. ಈ ಮೂಲಕ ಕಳೆದ ವರ್ಷಕ್ಕಿಂತ (27ನೇ ಸ್ಥಾನ) ಒಂಬತ್ತು ಸ್ಥಾನಗಳ ಸುಧಾರಣೆ ಕಂಡಿದೆ.
‘ಧಾರವಾಡ ಜಿಲ್ಲೆ ಸಹ ಶೇ 67.62ರಷ್ಟು ಫಲಿತಾಂಶ ಪಡೆದಿದೆ. ಫಲಿತಾಂಶ ಪಟ್ಟಿ ಸಿದ್ಧಪಡಿಸುವಾಗ ಇಂಗ್ಲಿಷ್ ಅಕ್ಷರಕ್ಕೆ ಅನುಗುಣವಾಗಿ ಧಾರವಾಡದ ಹೆಸರು ಮೊದಲು ಬಂದಿದೆ, ವಿಜಯನಗರ ಜಿಲ್ಲೆಯ ಹೆಸರು ಬಳಿಕ ಬಂದಿದೆ. ಆದರೆ ಎರಡೂ ಜಿಲ್ಲೆಗಳು 18ನೇ ಸ್ಥಾನದಲ್ಲಿವೆ’ ಎಂದು ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
2022–23ನೇ ಸಾಲಿನಲ್ಲಿ ವಿಜಯನಗರ ಜಿಲ್ಲೆ 10ನೇ ಸ್ಥಾನದಲ್ಲಿತ್ತು. ಆ ವರ್ಷ ಶೇ 91.41ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಆದರೆ ಕಳೆದ ವರ್ಷ ದಿಢೀರನೆ ಫಲಿತಾಂಶ 17 ಸ್ಥಾನಗಳಷ್ಟು ಕುಸಿದಿತ್ತು. ಶೇ 65.61 ಫಲಿತಾಂಶದೊಂದಿಗೆ ಜಿಲ್ಲೆ 27ನೇ ಸ್ಥಾನಕ್ಕೆ ಕುಸಿದಿದ್ದರೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಿಲ್ಲೆಯೇ ಮೊದಲಿಗನಾಗಿತ್ತು. ಆದರೆ ದಿಢೀರ್ ಕುಸಿದ ಫಲಿತಾಂಶ ಮುಖ್ಯಮಂತ್ರಿ ಅವರನ್ನು ಬೆರಗಾಗಿಸಿತ್ತು ಮತ್ತು ಅದಕ್ಕಾಗಿ ಡಿಡಿಪಿಐ ಅವರ ತಲೆದಂಡವೂ ಆಗಿತ್ತು. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ವರ್ಷ ಜಿಲ್ಲೆಯ ಅಧಿಕಾರಿಗಳು ವಹಿಸಿದ ಎಚ್ಚರಿಕೆಯ ಫಲವಾಗಿ ಫಲಿತಾಂಶದಲ್ಲಿ ಏರಿಕೆ ಕಂಡಿದೆ.
ಈ ಬಾರಿ ಪರೀಕ್ಷೆಗೆ 19,413 ಮಂದಿ ಹಾಜರಾಗಿದ್ದು, 13,127 ಮಂದಿ ಉತ್ತೀರ್ಣರಾಗಿದ್ದಾರೆ.
‘ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ ಅವರ ನಿರಂತರ ಕಾಳಜಿಯಿಂದಾಗಿ ಈ ಫಲಿತಾಂಶ ಬಂದಿದೆ. ಅದಕ್ಕಿಂತಲೂ ಮಿಗಿಲಾಗಿ ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಆಕಾಶ್ ಶಂಕರ್ ಅವರ ನಿರಂತರ ಮೇಲ್ವಿಚಾರಣೆಯಿಂದ ಫಲಿತಾಂಶದಲ್ಲಿ ಜಿಲ್ಲೆ 9 ಸ್ಥಾನದಷ್ಟು ಮೇಲೇರುವುದು ಸಾಧ್ಯವಾಯಿತು’ ಎಂದು ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ ಹೇಳಿದರು.
ಜೂನ್‌ನಲ್ಲೇ ಅತಿಥಿ ಶಿಕ್ಷಕರ ನೇಮಕ: ‘ಇತರ ಜಿಲ್ಲೆಗಳಲ್ಲಿ ಇರುವಂತೆ ವಿಜಯನಗರ ಜಿಲ್ಲೆಯಲ್ಲೂ ಶಿಕ್ಷಕರ ಕೊರತೆ ಇದ್ದೇ ಇದೆ. 1,186 ಶಿಕ್ಷಕರ ಹುದ್ದೆಗಳ ಪೈಕಿ 933 ಶಿಕ್ಷಕರು ಮಾತ್ರ ಇದ್ದಾರೆ. 253 ಶಿಕ್ಷಕರ ಕೊರತೆ ಇದೆ. ಇದರಲ್ಲಿ ಚಿತ್ರಕಲೆ, ಸಂಗೀತ ಶಿಕ್ಷಕರೂ ಸೇರಿದ್ದಾರೆ. ಬೋಧನಾ ಶಿಕ್ಷಕರ ಹುದ್ದೆ 174ರಷ್ಟು ಖಾಲಿ ಇತ್ತು. ಆದರೆ ಜೂನ್ ತಿಂಗಳಲ್ಲೇ 174 ಮಂದಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ಕಾರಣ ಸರಿಯಾಗಿ ಪಾಠಗಳನ್ನು ಮುಗಿಸುವುದು ಸಾಧ್ಯವಾಯಿತು’ ಎಂದು ಡಿಡಿಪಿಐ ತಿಳಿಸಿದರು.
‘ಈ ಹಿಂದಿನ ವರ್ಷದ ಕಳಪೆ ಫಲಿತಾಂಶದ ಕಾರಣ ಜೂನ್‌ನಲ್ಲೇ ಅತಿಥಿ ಶಿಕ್ಷಕರ ನಿಯೋಜನೆ ಸಾಧ್ಯವಾಯಿತು. ಸಾಮಾನ್ಯವಾಗಿ ಅಕ್ಟೋಬರ್, ನವೆಂಬರ್‌ನಲ್ಲಷ್ಟೇ ಅತಿಥಿ ಶಿಕ್ಷಕರ ನಿಯೋಜನೆ ನಡೆಯುತ್ತಿತ್ತು. ಈ ಬಾರಿ ಫಲಿತಾಂಶ ಸುಧಾರಣೆಗೆ ಇದು ದೊಡ್ಡ ಕೊಡುಗೆ ನೀಡಿದ್ದು ನಿಜ’ ಎಂದು ಶಿಕ್ಷಕರು ಹೇಳಿದರು.
ನಿರಂತರ ಪರೀಕ್ಷೆ: ಕಲಿಯುವಿಕೆಯಲ್ಲಿ ಹಿಂದೆ ಬಿದ್ದಿದ್ದ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್, 15 ದಿನಕ್ಕೊಮ್ಮೆ ಪರೀಕ್ಷೆ ಸಹಿತ ಹಲವು ಕ್ರಮಗಳನ್ನು ಕೈಗೊಂಡಿದ್ದರಿಂದಲೂ ಫಲಿತಾಂಶ ಸುಧಾರಿಸಿದೆ ಎಂದು ಡಿಡಿಪಿಐ ಅವರು ತಿಳಿಸಿದ್ದು, ಒಟ್ಟಾರೆ ಕಲಬುರಗಿ ವಿಭಾಗ ಮಟ್ಟದಲ್ಲಿ ಜಿಲ್ಲೆ ಮೊದಲ ಸ್ಥಾದದಲ್ಲಿ ಮುಂದುವರಿದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಈ ಬಾರಿಯ ಫಲಿತಾಂಶದಿಂದ ಸ್ವಲ್ಪ ಮಟ್ಟಿನ ತೃಪ್ತಿಯಾಗಿದೆ. ಶಿಕ್ಷಕರ ನಿರಂತರ ಪ್ರಯತ್ನ ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆವೆಂಕಟೇಶ್ ರಾಮಚಂದ್ರಪ್ಪ ಡಿಡಿಪಿಐ ವಿಜಯನಗರ
ಕೊಟ್ಟೂರಿನ ಗುರುದೇವ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಮೂವರು ವಿದ್ಯಾರ್ಥಿಗಳು ತಲಾ 620 ಅಂಕ ಗಳಿಸಿ ತಮ್ಮೊಳಗಿನ ಸ್ಪರ್ಧೆ ಯಾವ ಮಟ್ಟದ್ದಾಗಿತ್ತು ಎಂಬುದನ್ನು ತೋರಿಸಿಕೊಟ್ಟರು. ಅದೇ ಶಾಲೆಯ ಇನ್ನೂ ಮೂವರು ವಿದ್ಯಾರ್ಥಿಗಳು ತಲಾ 619 ಅಂಕ ಗಳಿಸಿದರು. ಒಟ್ಟಾರೆ ಒಂದೇ ಶಾಲೆಯ ಆರು ಮಂದಿ ವಿದ್ಯಾರ್ಥಿಗಳು ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದು ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.