
ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದ ನೀರು ಉಳಿಸಿ, ಬೇಸಿಗೆ ಬೆಳೆಗೆ ನೀರು ಕೊಡಿ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಒತ್ತಾಯಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಮುನಿರಾಬಾದ್‌ನಲ್ಲಿ ಜಲಸಂಪನ್ಮೂಲ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮಣ ನಾಯಕ್ ಅವರಿಗೆ ಮನವಿ ಸಲ್ಲಿಸಿದ್ದು, ನೀರಾವರಿ ತಜ್ಞರಾದ ಕನ್ನಯ್ಯ ನಾಯ್ಡು ಅವರು ಜಲಾಶಯಕ್ಕೆ ಗೇಟುಗಳ ಅಳವಡಿಕೆಗೆ ಮತ್ತು ಬೇಸಿಗೆ ಬೆಳೆ ಬೆಳೆಯಲು ಸಮಯದ ಅವಕಾಶವಿದೆ ಎಂದು ತಿಳಿಸಿರುವ ಕಾರಣ ಎರಡನೇ ಬೆಳೆಗೆ ನೀರು ಹರಿಸಬೇಕು ಎಂದು ಹೇಳಿದ್ದಾರೆ.
ತುಂಗಭದ್ರಾ ಜಲಾಶಯದ ವ್ಯಾಪ್ತಿಯ ಬಲದಂಡೆ ಮತ್ತು ಎಡದಂಡೆಯ ಎಚ್‍ಎಲ್‍ಸಿ, ಎಲ್‍ಎಲ್‍ಸಿ. ಎಲ್‍ಬಿಎಂಸಿ ಕಾಲುವೆಗಳ ವ್ಯಾಪ್ತಿಯಲ್ಲಿ ಹಾಗೂ ಆಂಧ್ರಪ್ರದೇಶದ ವ್ಯಾಪ್ತಿಯ ರೈತರ ಜಮೀನುಗಳಿಗೆ ಉತ್ತಮ ಮಳೆಯಾಗಿದ್ದು, ಮುಂಗಾರು ಬೆಳೆ ಕಟಾವಿಗೆ ಬಂದಿವೆ. ಆದರೆ ಇದೀಗ ಕಾಲುವೆಗಳಿಗೆ ಹೆಚ್ಚುವರಿ ನೀರನ್ನು ಬಿಟ್ಟು ಕಾಲುವೆಗಳಿಂದ ಮೋರಿಗಳ ಮುಖಾಂತರ ಹಳ್ಳಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಹಳ್ಳಗಳ ವ್ಯಾಪ್ತಿಯಲ್ಲಿ ಬೆಳೆದ ರೈತರ ಬೆಳೆಗಳು ನೀರಿನಲ್ಲಿ ಮುಳುಗಿ ನಷ್ಟವಾಗುತ್ತಿದೆ, ನದಿಗೆ ಸಹ ಹೆಚ್ಚುವರಿ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಲಾಶಯ ವ್ಯಾಪ್ತಿಯ ರೈತರು ಮುಂಗಾರು ಹಂಗಾಮಿನ ಬೆಳೆಗಳಲ್ಲಿ ಹೆಚ್ಚುವರಿ ಮಳೆಯಿಂದ ಸಾಕಷ್ಟು ನಷ್ಟ ಹೊಂದಿರುವ ಕಾರಣ ಬೇಸಿಗೆ ಬೆಳೆಯ ಕುರಿತು ಆಶಾದಾಯಕರಾಗಿದ್ದಾರೆ. ಹೀಗಾಗಿ ಜಲಾಶಯದ ನೀರು ಪೋಲು ಮಾಡದೆ ಬೇಸಿಗೆ ಬೆಳೆಗೆ ರೈತರಿಗೆ ನೀರು ಕೊಡಲು ಸಹಕರಿಸಬೇಕು. ನೀರು ಪೋಲು ಮಾಡಿದರೆ ನಿಮ್ಮ ಕಚೇರಿಯ ಮುಂದೆ ಸಾವಿರಾರು ರೈತರಿಂದ ಉಗ್ರ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಪುರುಷೋತ್ತಮ ಗೌಡ ಎಚ್ಚರಿಸಿದರು.
ಹಿರಿಯ ಅಧಿಕಾರಿ ಬಸಪ್ಪ ಜಾನ್‍ಕರ್, ದರೂರ್ ಸಾಗರ ಗೌಡ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.