ADVERTISEMENT

ಕೂಡ್ಲಿಗಿ: ಹುಣಸೆ ಹಣ್ಣು ಧಾರಣೆ ಕುಸಿತ

ಎ.ಎಂ.ಸೋಮಶೇಖರಯ್ಯ
Published 20 ಮಾರ್ಚ್ 2024, 22:51 IST
Last Updated 20 ಮಾರ್ಚ್ 2024, 22:51 IST

ಕೂಡ್ಲಿಗಿಯಲ್ಲಿ ಹುಣಸೆ ಹಣ್ಣಿನ ಸಂಸ್ಕರಣೆಯಲ್ಲಿ ತೊಡಗಿರುವ ಮಹಿಳೆಯರು

ಕೂಡ್ಲಿಗಿಯಲ್ಲಿ ಹುಣಸೆ ಹಣ್ಣಿನ ಸಂಸ್ಕರಣೆಯಲ್ಲಿ ತೊಡಗಿರುವ ಮಹಿಳೆಯರು

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನಲ್ಲಿ ಈ ಬಾರಿ ಹುಣಸೆ ಹಣ್ಣಿನ ಇಳುವರಿ ಕುಂಠಿತಗೊಂಡಿದೆ. ಜೊತೆಗೆ, ಧಾರಣೆಯೂ ಕುಸಿದಿದೆ. ಇದು ರೈತರು ಮತ್ತು ಹುಣಸೆ ಮರಗಳನ್ನು ಗುತ್ತಿಗೆ ಪಡೆ ದಿರುವ ವ್ಯಾಪಾರಿಗಳನ್ನು ಕಂಗೆಡಿಸಿದೆ.

ADVERTISEMENT

ಜಮೀನಿನ ಬದು, ತೋಟಗಳು, ಮನೆಯ ಅಕ್ಕಪಕ್ಕ ದಲ್ಲಿರುವ ಹುಣಸೆ ಮರಗಳು ರೈತರ ಆದಾಯದ ಮೂಲಗಳಾಗಿವೆ. ತಾಲ್ಲೂಕಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಮರಗಳಿವೆ. ಆದರೆ, ಈ ಬಾರಿ ಮಳೆ ಕೊರತೆ ಕಾರಣ ಇಳುವರಿ ಕುಸಿದಿದೆ.

‘ಒಂದು ತಿಂಗಳ ಹಿಂದೆ ಪ್ರತಿ ಕ್ವಿಂಟಲ್‌ಗೆ ₹9 ಸಾವಿರ ಇದ್ದ ಬೆಲೆ ಈಗ ₹6 ಸಾವಿರಕ್ಕೆ ಇಳಿಕೆಯಾಗಿದೆ. ಮರಗಳಲ್ಲಿನ ಹಣ್ಣನ್ನು ಕೀಳಲು ಒಬ್ಬ ಕೂಲಿಯಾಳುಗೆ ₹500 ನೀಡಬೇಕು. ಮರದಿಂದ ಕೆಳಗೆ ಬಿದ್ದ ಹಣ್ಣನ್ನು ಸಂಗ್ರಹಿಸುವವರಿಗೆ ₹250 ಕೊಡಬೇಕು. ಹಣ್ಣಿನಿಂದ ಬೀಜ, ನಾರು ಬೇರ್ಪಡಿಸಲು ಕೆ.ಜಿಗೆ ₹10 ನೀಡಬೇಕು. ಇದರ ಜೊತೆಗೆ ಬೆಳಿಗ್ಗಿನ ಉಪಾಹಾರ, ಚಹಾ ಸೇರಿ ಇತರೆ ಖರ್ಚನ್ನು ನೋಡಿಕೊಳ್ಳಬೇಕು’ ಎಂದು ಗುತ್ತಿಗೆದಾರ ಮ್ಯಾಕಲ್ ಭೀಮಣ್ಣ ತಿಳಿಸಿದರು.

‘ಎಲ್ಲಾ ವೆಚ್ಚ ಸೇರಿ ಪ್ರತಿ ಕ್ವಿಂಟಲ್ ಹಣ್ಣನ್ನು ಮಾರುಕಟ್ಟೆಗೆ ಸಾಗಿಸುವ ವೇಳೆಗೆ ₹5 ಸಾವಿರಕ್ಕೂ ಹೆಚ್ಚು ವೆಚ್ಚವಾಗುತ್ತದೆ. ಇದೆಲ್ಲವನ್ನು ಸರಿದೂಗಿಸಿಕೊಂಡು ರೈತರು, ಗುತ್ತಿಗೆದಾರರು ಆದಾಯ ಮಾಡಿಕೊಳ್ಳಬೇಕು. ಅಲ್ಲದೆ, ವರ್ಷದ ಮುಂಚೆಯೇ ಮುಂಗಡ ನೀಡಿ ಮರಗಳನ್ನು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕೂಲಿ ಕಾರ್ಮಿಕರ ಕೊರತೆಯಿಂದ ಮರಗಳಲ್ಲಿನ ಹಣ್ಣನ್ನು ಬಿಡಿಸುವ ಗೋಜಿಗೆ ಹೋಗಿಲ್ಲ. ಕೆಲವು ರೈತರು ಸಹ ಅವುಗಳನ್ನು ಬಿಡಿಸಲು ಸಾಧ್ಯವಾಗದೆ ಕೈಚೆಲ್ಲಿದ್ದಾರೆ’ ಎಂದು ತಿಳಿಸಿದರು.

‘ತಾಲ್ಲೂಕಿನಾದ್ಯಂತ ಹೇರಳವಾಗಿ ಹುಣಸೆ ಹಣ್ಣನ್ನು ಬೆಳೆಯಲಾಗುತ್ತದೆ. ಆದರೆ, ಇಲ್ಲಿ ಮಾರುಕಟ್ಟೆ ಇರದ ಕಾರಣ ಹೊಸಪೇಟೆ, ಚಳ್ಳಕೆರೆ, ಚಿತ್ರದುರ್ಗದ ಮಾರುಕಟ್ಟೆಗೆ ಹಣ್ಣನ್ನು ಸಾಗಿಸಬೇಕು. ಅಲ್ಲದೆ, ಹಣ್ಣು ಸಂಗ್ರಹಿಸಿಡಲು ಅಲ್ಲಿ ಶೈತ್ಯಾಗಾರಗಳಿಲ್ಲ’ ಎಂದು ರೈತ ಹನಸಿ ಶಿವಣ್ಣ ತಿಳಿಸಿದರು.

‘ಪಟ್ಟಣದಲ್ಲಿ ಮಾರುಕಟ್ಟೆ ಹಾಗೂ ಶೈತ್ಯಾಗಾರ ನಿರ್ಮಿಸುವಂತೆ ಎರಡು ದಶಕಗಳಿಂದ ಕೋರುತ್ತಿದ್ದೇವೆ. ಆದರೆ, ಈವರೆಗೆ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.