ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಪರಿಶಿಷ್ಟ ಜಾತಿಯ ಪುನರ್ವಸತಿ ಕಲ್ಪಿತ ದೇವದಾಸಿ ಹುಲಿಗೆಮ್ಮಜ್ಜಿ ಎಂಬುವರು ಕೊಟ್ಯಂತರ ರೂಪಾಯಿ ಮೌಲ್ಯದಲ 13.17 ಎಕರೆ ಫಲವತ್ತಾದ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ದಾನ ಮಾಡಿ 25 ವರ್ಷಗಳಾಗಿವೆ. ಆದರೆ, ಈವರೆಗೆ ಅಲ್ಲಿ ಶಾಲೆ ನಿರ್ಮಾಣವಾಗಿಲ್ಲ.
ಹಗರಿಬೊಮ್ಮನಹಳ್ಳಿಯಿಂ 12 ಕಿ.ಮೀ.ದೂರದ ಬಾಚಿಗೊಂಡನಹಳ್ಳಿ-2 ಗ್ರಾಮದಲ್ಲಿ ಹುಲಿಗೆಮ್ಮಜ್ಜಿ ಪೂರ್ವಜರಿಂದ ಬಂದಿದ್ದ 13.17ಎಕರೆ ಜಮೀನನ್ನು 2000ನೇ ಇಸವಿಯಲ್ಲಿ ಸರ್ಕಾರಿ ಶಾಲೆಗೆ ದಾನ ನೀಡಿದ್ದರು. ‘ಸುತ್ತಮುತ್ತಲ ಗ್ರಾಮಗಳ ಮಕ್ಕಳ ಅನುಕೂಲಕ್ಕೆ ಶಾಲಾ–ಕಾಲೇಜು ಆರಂಭವಾಗಬೇಕು. ಮಕ್ಕಳು ಪಟ್ಟಣಕ್ಕೆ ಅಲೆದಾಡುವುದು ತಪ್ಪಬೇಕು’ ಎಂಬುದು ಅವರ ಕನಸಾಗಿತ್ತು. ಅವರು ಮೃತಪಟ್ಟು 11 ವರ್ಷ ಆಗಿವೆ. ಆದರೆ, ಕನಸು ನನಸಾಗಿಲ್ಲ.
‘ಗ್ರಾಮದ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಹುಲಿಗೆಮ್ಮಜ್ಜಿಯ ಹೆಸರು ಇಡಲಾಗಿದೆ. 2013ರಲ್ಲಿ ದಾನ ನೀಡಿದ ಜಮೀನಿನಲ್ಲಿ ಕಸ್ತೂರಬಾ ಗಾಂಧಿ ವಸತಿ ಶಾಲೆ ನಿರ್ಮಿಸುವ ಭರವಸೆ ನೀಡಲಾಗಿತ್ತು. ಕಟ್ಟಡ ನಿರ್ಮಾಣಕ್ಕೆ ₹1.5 ಕೋಟಿ ಮಂಜೂರಾಗಿತ್ತು. ಆದರೆ ಕಾಮಗಾರಿ ಆರಂಭಗೊಳ್ಳಲಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.
‘ಆಸ್ತಿ ಎಲ್ಲವನ್ನೂ ದಾನ ಮಾಡಿರುವುದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿತಾದರೂ ಅಜ್ಜಿಯ ದಾನದ ಉದ್ದೇಶ ಈಡೇರಿಸಿಲ್ಲ. ಶೈಕ್ಷಣಿಕ ಸಂಸ್ಥೆ ಕಟ್ಟುವ ಪ್ರಯತ್ನವೂ ಕಾಣುತ್ತಿಲ್ಲ’ ಎಂದು ಅವರು ತಿಳಿಸಿದರು.
ಶೈಕ್ಷಣಿಕ ಚಟುವಟಿಕೆಗೆ ದಾನ ನೀಡಿದ ಜಮೀನನ್ನು ಅನ್ಯರಿಗೆ ಗುತ್ತಿಗೆ ನೀಡಿದ ಮಾಹಿತಿಯನ್ನು ಮುಖ್ಯ ಶಿಕ್ಷಕರಿಂದ ಪಡೆದಿರುವೆ. ಇದರ ಬಗ್ಗೆ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಹೇಳಿದರು.
ಮಹಾದಾನಿ ಹುಲಿಗೆಮ್ಮಜ್ಜಿ ಕನಸನ್ನು ಈಗಿನ ಸರ್ಕಾರ ಈಡೇರಿಸಬೇಕು, ಈ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಬೇಕು ಎಂದು ಎಚ್.ದೊಡ್ಡಬಸಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಒತ್ತಾಯಿಸಿದರು.
ಶಾಲೆಯ ಜಮೀನು ಗುತ್ತಿಗೆಗೆ
ಹುಲಿಗೆಮ್ಮಜ್ಜಿ ನೀಡಿದ ಜಮೀನನ್ನು ಮೊದಲಿನಿಂದಲೂ ಕೃಷಿ ಚಟುವಟಿಕೆಗೆ ರೈತರಿಗೆ ಗುತ್ತಿಗೆ ನೀಡಲಾಗುತ್ತಿದೆ. ಮೂರು ವರ್ಷಗಳಿಂದ ಅದರ ಪ್ರಯೋಜನ ವಿದ್ಯಾರ್ಥಿಗಳಿಗೆ ಲಭಿಸುತ್ತಿದೆ. ‘13.5 ಎಕರೆ ಜಮೀನು ವರ್ಷಕ್ಕೆ ₹60 ಸಾವಿರಕ್ಕೆ ಗುತ್ತಿಗೆ ಕರಾರು ಮಾಡಲಾಗಿದೆ. ಬರುವ ಆ ಮೊತ್ತದಿಂದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮವಸ್ತ್ರ ಟ್ರ್ಯಾಕ್ ಸೂಟ್ ಖರೀದಿಸಲಾಗಿದೆ. ವಾಲಿಬಾಲ್ ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಪ್ರವೇಶ ಪಡೆದ ಸಂದರ್ಭದಲ್ಲಿ ವಿನಿಯೋಗಿಸಲಾಗಿದೆ’ ಎಂದು ಪ್ರಭಾರ ಮುಖ್ಯ ಶಿಕ್ಷಕ ಹ್ಯಾಟಿ ಲೋಕಪ್ಪ ತಿಳಿಸಿದರು.
ಶೈಕ್ಷಣಿಕ ಚಟುವಟಿಕೆಗೆ ದಾನ ನೀಡಿದ ಜಮೀನನ್ನು ಅನ್ಯರಿಗೆ ಗುತ್ತಿಗೆ ನೀಡಿದ ಮಾಹಿತಿಯನ್ನು ಮುಖ್ಯ ಶಿಕ್ಷಕರಿಂದ ಪಡೆದುಕೊಂಡಿದ್ದೇನೆ, ಈ ಕುರಿತಂತೆ ಸಮಗ್ರವಾಗಿ ಪರಿಶೀಲಿಸಲಾಗುವುದು.-ಮೈಲೇಶ್ ಬೇವೂರು, ಕ್ಷೇತ್ರ ಶಿಕ್ಷಣಾಧಿಕಾರಿ
ಮಹಾದಾನಿ ಹುಲಿಗೆಮ್ಮಜ್ಜಿ ಕನಸನ್ನು ಈಗಿನ ಸರ್ಕಾರ ಈಡೇರಿಸಬೇಕು, ಈ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಬೇಕು.-ಎಚ್.ದೊಡ್ಡಬಸಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.