ADVERTISEMENT

ಪ್ರವಾಸಿ ಗೈಡ್‌ಗಳಿಗೆ ಒಂದು ತಿಂಗಳಲ್ಲಿ ಸಿಹಿ ಸುದ್ದಿ: ಸಚಿವ ಆನಂದ್ ಸಿಂಗ್ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 12:58 IST
Last Updated 13 ಫೆಬ್ರುವರಿ 2022, 12:58 IST
ಹಂಪಿಯಲ್ಲಿ ಭಾನುವಾರ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘವನ್ನು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಉದ್ಘಾಟಿಸಿ ಮಾತನಾಡಿದರು
ಹಂಪಿಯಲ್ಲಿ ಭಾನುವಾರ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘವನ್ನು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಉದ್ಘಾಟಿಸಿ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ಗೈಡ್‌ಗಳಿಗೆ ಮಾಸಾಶನ ನೀಡಲು ತಾಂತ್ರಿಕವಾಗಿ ಕೆಲ ಸಮಸ್ಯೆಗಳು ಎದುರಾಗಿವೆ. ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಒಂದು ತಿಂಗಳಲ್ಲಿ ಸಿಹಿ ಸುದ್ದಿ ನೀಡುವೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭರವಸೆ ನೀಡಿದರು.

ಹಂಪಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಸಾಶನದ ವ್ಯವಸ್ಥೆ ಮಾಡಿಕೊಟ್ಟರೆ ಅನಧಿಕೃತವಾಗಿ ಹೆಚ್ಚಿನ ಗೈಡ್‌ಗಳು ನೋಂದಣಿ ಮಾಡಿಸಿಕೊಳ್ಳಬಹುದು. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿದ ನಂತರವಷ್ಟೇ ಅದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದರು.

ಪ್ರವಾಸಿ ತಾಣಗಳಲ್ಲಿ ಗೈಡ್‌ಗಳೇ ಇತಿಹಾಸ ಸೃಷ್ಟಿಸುತ್ತಾರೆ. ಪ್ರವಾಸಿಗರು ಹಂಪಿಯ ಯಾವುದೇ ಸ್ಮಾರಕದ ಬಳಿ ಸಿಕ್ಕರೂ ಅಲ್ಲಿಂದಲೇ ಕಥೆಯನ್ನು ಶುರು ಮಾಡುತ್ತಾರೆ. ಇಂತಹ ಕೆಲಸ ಕೈಬಿಡಬೇಕು. ಪ್ರವಾಸಿಗರ ದಿಕ್ಕು ತಪ್ಪಿಸಬಾರದು. ಗೈಡ್‌ಗಳು ಜ್ಞಾನಾರ್ಜನೆ ಮಾಡಿಕೊಂಡು ನಿಖರ ಮಾಹಿತಿ ಕೊಡಬೇಕು ಎಂದು ಹೇಳಿದರು.

ಓದಿ... IPL 2022: ಗುರುವನ್ನೇ ಮೀರಿಸಿದ ಶಿಷ್ಯ; ಧೋನಿಗೆ ₹12 ಕೋಟಿ, ಚಾಹರ್‌ಗೆ ₹14 ಕೋಟಿ!

ಹಂಪಿ ಮಾಸ್ಟರ್ ಪ್ಲ್ಯಾನ್‌ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವೆ. ಹಂಪಿಯಲ್ಲಿ ಹೋಂ ಸ್ಟೇ, ಹೋಟೆಲ್ ನಿರ್ಮಿಸಿ ಪ್ರವಾಸಿಗರಿಗೆ ಸೌಕರ್ಯ ಕಲ್ಪಿಸುವುದರ ಬಗ್ಗೆ ಸಮಾಲೋಚನೆ ನಡೆಸುವೆ. ಅಧಿಕಾರಿಗಳಲ್ಲಿ ಸಮರ್ಪಕ ಮಾಹಿತಿ ಕೊರತೆ ಇರುವುದರಿಂದ ಇಲಾಖೆಯನ್ನು ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ ಎನ್ನುವುದು ನನ್ನ ಭಾವನೆ, ಪ್ರಶ್ನೆ ಮೂಡುತ್ತದೆ. ಬರುವ ದಿನಗಳಲ್ಲಿ ಎಲ್ಲದರ ಬಗ್ಗೆ ತಿಳಿದುಕೊಂಡು ಇಲಾಖೆಯ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ ಮಾತನಾಡಿ, ಗೋವಾ ಮತ್ತು ಕೇರಳದಂತೆ ಹಂಪಿಯಲ್ಲಿ ಪ್ರವಾಸೋದ್ಯಮ, ಪ್ರವಾಸಿ ತಾಣಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳಬೇಕು. ಗೈಡ್‌ಗಳು ಪುರಾಣ ಕಥೆಗಳನ್ನು ಹೇಳುತ್ತ ಇತಿಹಾಸ ತಿರುಚಬಾರದು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರವಾ‌ಸೋದ್ಯಮ ಇಲಾಖೆಯ ವತಿಯಿಂದ ಮಾರ್ಗದರ್ಶಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು. ಹಂಪಿ, ಬೇಲೂರು, ಹಳೆಬೀಡು, ವಿಜಯಪುರ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಭಾಗಗಳ ಪ್ರವಾಸಿ ಮಾರ್ಗದರ್ಶಿಗಳು ಪಾಲ್ಗೊಂಡಿದ್ದರು.

ಆನೆಗೊಂದಿ ರಾಜವಂಶಸ್ಥ ಕೃಷ್ಣದೇವರಾಯ, ಪ್ರಾಧ್ಯಾಪಕ ಚಂದ್ರಶೇಖರ ಶಾಸ್ತ್ರಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ಗೌಡ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಿ ವಿ.ಹಂಪಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.