ADVERTISEMENT

ತುಂಗಭದ್ರಾ: 33 ಕ್ರಸ್ಟ್‌ಗೇಟ್ ತೆರೆದು ನದಿಗೆ ನೀರು

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 14:57 IST
Last Updated 27 ಜುಲೈ 2024, 14:57 IST
   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದ್ದು, ಪ್ರಸ್ತುತ 1.49 ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಒಳಹರಿವಿನ ಪ್ರಮಾಣ ಲಕ್ಷ ಕ್ಯುಸೆಕ್‌ ಮೀರಿದ ಕಾರಣ ಶುಕ್ರವಾರ ರಾತ್ರಿ 8 ಗಂಟೆಯ ವೇಳೆಗೆ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರು ಹೊರಬಿಡಲು ತುಂಗಭದ್ರಾ ಮಂಡಳಿ ನಿರ್ಧರಿಸಿತು. ಶನಿವಾರ ಸಹ ಎಲ್ಲಾ ಗೇಟ್‌ಗಳಿಂದ ನೀರು ಹೊರಬರುವುದನ್ನು ವಾರಾಂತ್ಯದ ಪ್ರವಾಸಿಗರು ನೋಡಿ ಖುಷಿಪಟ್ಟರು.

ಹಂಪಿಯ ಚಕ್ರತೀರ್ಥದಲ್ಲಿ ರಾಮಲಕ್ಷ್ಮಣ ದೇವಸ್ಥಾನದ ಸಮೀಪಕ್ಕೆ ನೀರು ಬಂದಿದ್ದು, ಸುಗ್ರೀವ ಗುಹೆಯ ಹತ್ತಿರ ಇರುವ ಸೀತೆಯ ಸೆರಗು ಬಂಡೆಯ ಮೇಲೆಯೇ ನೀರು ಹರಿದಿದೆ. ಪುರಂದರ ಮಂಟಪ ನೀರಿನಲ್ಲಿ ಮುಚ್ಚಿಕೊಂಡಿದ್ದು, ಮಂಟಪದ ಧ್ವಜದ ಮೇಲೆ ನೀರು ಹರಿಯುತ್ತಿದೆ.

ADVERTISEMENT

ಪ್ರವಾಸಿಗರಿಗೆ ಖುಷಿ: ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರನ್ನು ಹರಿಸುತ್ತಿರುವುದರಿಂದ ಎಲ್ಲೆಡೆ ಜಲವೈಭವ ಕಂಗೊಳಿಸಿದೆ. ವಾರಾಂತ್ಯದ ಪ್ರವಾಸಿಗರು ಇದನ್ನು ಕಂಡು ಖುಷಿಗೊಂಡರು.

ಎರಡು ವರ್ಷಗಳ ಬಳಿಕ ಈ ಅದ್ಭುತ ದೃಶ್ಯವನ್ನು ನೋಡುವ ಅವಕಾಶ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಲಭಿಸಿದ್ದು, ಹೆದ್ದಾರಿಯಲ್ಲಿ ಹೋಗುವ ಪ್ರಯಾಣಿಕರು ಸಹ ಮುನಿರಾಬಾದ್‌ ಸೇತುವೆಯ ಮೇಲಿನಿಂದಲೇ ಉಕ್ಕಿ ಹರಿಯುತ್ತಿರುವ ಜಲಧಾರೆಯನ್ನು ಕಂಡು ಪುಳಕಿತರಾಗುತ್ತಿದ್ದಾರೆ.

ಹಂಪಿಯ ಸುಗ್ರೀವ ಗುಹೆಯ ಹತ್ತಿರ ಇರುವ ಸೀತೆಯ ಸೆರಗು ಬಂಡೆಯ ಮೇಲೆ ಶನಿವಾರ ಸಂಜೆ ನೀರು ಹರಿದ ಅಪರೂಪದ ದೃಶ್ಯ

ಶುಕ್ರವಾರ ರಾತ್ರಿ 8 ಗಂಟೆಯ ವೇಳೆಗೆ ಎಲ್ಲಾ ಗೇಟ್‌ಗಳನ್ನು ತೆರೆಯುವ ನಿರ್ಧಾರಕ್ಕೆ ತುಂಗಭದ್ರಾ ಮಂಡಳಿ ಬಂದಿತು. ಇದರಿಂದ ಹಂಪಿ ಭಾಗದಲ್ಲಿ ಸ್ನಾನಘಟ್ಟದ ಅನುಷ್ಠಾನ ಮಂಟಪ ಸಹ ಬಹುತೇಕ ಮುಳುಗಿದ್ದಲ್ಲದೆ, ಚಕ್ರತೀರ್ಥದ ರಾಮಲಕ್ಷ್ಮಣ ದೇವಸ್ಥಾನದ ಬಳಿಗೆ ನೀರು ಬಂದಿತ್ತು. ಶನಿವಾರ ಬೆಳಿಗ್ಗೆ ನೀರು ಹರಿಸುವಿಕೆ ಪ್ರಮಾಣ ಕಡಿಮೆಯಾಗಿತ್ತು. 11 ಗಂಟೆಯ ಬಳಿಕ ಮತ್ತೆ ಹೆಚ್ಚಿಸಿ 1.49 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡಲಾಯಿತು. ಸಂಜೆ ವೇಳೆಗೆ ಸುಗ್ರೀವ ಗುಹೆ ಬಳಿಯ ಸೀತಾ ಸೆರಗು ಬಂಡೆಯ ಮೇಲೆ ತುಂಗಭದ್ರಾ ನೀರು ಹರಿಯುವ ಅಪರೂಪದ ದೃಶ್ಯ ಕಾಣಿಸಿತು.

108 ಬಾಗಿನ: ಬಿಜೆಪಿ ಯುವ ಮುಖಂಡ ಸಿದ್ಧಾರ್ಥ ಸಿಂಗ್ ನೇತೃತ್ವದಲ್ಲಿ ರೈತ ಮುಖಂಡರು ಹಾಗೂ ಸುಮಂಗಲೆಯರು ಶನಿವಾರ ಬೆಳಿಗ್ಗೆ ವಿರೂಪಾಕ್ಷನಿಗೆ ಪೂಜೆ ಸಲ್ಲಿಸಿ, ತುಂಗಭದ್ರಾ ನದಿಯ ಸ್ನಾನಘಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ 108 ಬಾಗಿನವನ್ನು ಅರ್ಪಿಸಿದರು. 

‘ದೇವರ ದಯದಿಂದ ಈ ಬಾರಿ ತುಂಗಭದ್ರಾ ತುಂಬಿ ಹರಿಯುತ್ತಿದೆ. ನದಿಯು ಯಾವುದೇ ಹಾನಿ ಉಂಟುಮಾಡದೆ ರೈತರ ಬಾಳು ಬೆಳಗಲಿ ಎಂದು ಹಾರೈಸಿ ಇದೇ ಮೊದಲ ಬಾರಿಗೆ 108 ಬಾಗಿನ ಅರ್ಪಿಸಲಾಗಿದೆ’ ಎಂದು ಸಿದ್ಧಾರ್ಥ ಸಿಂಗ್ ಹೇಳಿದರು.

ಗುಡ್ಡ ಏರಿ ಯಂತ್ರೋದ್ಧಾರಕ್ಕೆ ಪ್ರಯಾಣ: ಚಕ್ರತೀರ್ಥದಲ್ಲಿ ನದಿ ನೀರು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಕಾಲುದಾರಿ ಬಂದ್ ಆಗಿರುವ ಕಾರಣ ಭಕ್ತರು ಯಂತ್ರೋದ್ಧಾರಕ ಆಂಜನೇಯ ಸ್ವಾಮಿಯನ್ನು ಕಾಣಲು ಎದುರು ಬಸವಣ್ಣ ಮಂಟಪದ ಬಳಿ ಗುಡ್ಡ ಏರಿ, ಅಚ್ಚುತರಾಯ ದೇವಸ್ಥಾನದ ಮೂಲಕ ತೆರಳಿದರು. ಶನಿವಾರವಾಗಿದ್ದರಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಇದೇ ದಾರಿಯಲ್ಲಿ ನಡೆದು ದೇವರ ದರ್ಶನ ಪಡೆದರು. ಜತೆಗೆ ಜಲರಾಶಿಯ ನಡುವೆಯೇ ರಾಮ ಲಕ್ಷ್ಮಣರ ದರ್ಶನವನ್ನೂ ಪಡೆದರು.

ಹಂಪಿ ಚಕ್ರತೀರ್ಥದ ರಾಮ ಲಕ್ಷ್ಮಣ ದೇವಸ್ಥಾನದ ಬಳಿಗೆ ಬಂದಿರುವ ತುಂಗಭದ್ರೆಯ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.