ADVERTISEMENT

ವಿಜಯನಗರ | ತುಂಗಭದ್ರಾ ಜಲಾಶಯ: 1.10ಲಕ್ಷ ಕ್ಯೂಸೆಕ್ ನೀರು ನದಿಗೆ

ಕಂಪ್ಲಿ–ಗಂಗಾವತಿ ಸಂಪರ್ಕ ಭಾನುವಾರ ಸಂಜೆಯಿಂದ ಸಂಪೂರ್ಣ ಕಡಿತ: ಜನರ ಸಂಚಾರಕ್ಕೆ ತೀವ್ರ ತೊಂದರೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 7:09 IST
Last Updated 28 ಜುಲೈ 2025, 7:09 IST
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಸಂಜೆ ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಒಳಹರಿವು ದಾಖಲಾಗುತ್ತಿದ್ದರಿಂದ ನದಿಗೆ ನೀರು ಹರಿಸಲಾಗುತ್ತಿದೆ.
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಸಂಜೆ ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಒಳಹರಿವು ದಾಖಲಾಗುತ್ತಿದ್ದರಿಂದ ನದಿಗೆ ನೀರು ಹರಿಸಲಾಗುತ್ತಿದೆ.   

ಹೊಸಪೇಟೆ(ವಿಜಯನಗರ): ತುಂಗಭದ್ರಾ ಜಲಾಶಯಕ್ಕೆ ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ಒಳ ಹರಿವು ದಾಖಲಾಗುತ್ತಿರುವುದರಿಂದ ಭಾನುವಾರ ಸಂಜೆ 1.10 ಲಕ್ಷ ಕ್ಯೂಸೆಕ್ ನೀರು ತುಂಗಭದ್ರಾ ನದಿಗೆ ಹರಿಸಲಾಗುತ್ತಿದೆ.

ನದಿಗೆ ನೀರು ಹರಿಯ ಬಿಟ್ಟ ಪರಿಣಾಮ ವಿಶ್ವವಿಖ್ಯಾತ ಹಂಪಿಯ ನದಿ ಪಾತ್ರದ ವಿವಿಧ ಮಂಟಪಗಳು ಮುಳುಗಡೆಯ ಭೀತಿ ಎದುರಾಗಿದೆ. ಇನ್ನು ತುಂಗಾ ಜಲಾಶಯದಿಂದ 80 ಸಾವಿರ ಕ್ಯೂಸೆಕ್, ಭದ್ರಾ ಅಣೆಕಟ್ಟಿನಿಂದ 40 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಜೊತೆಗೆ ವರದಾ ನದಿಯಿಂದ 20ಸಾವಿರ ಕ್ಯೂಸೆಕ್ ನೀರು ತುಂಗಭದ್ರಾ ನದಿಗೆ ಸೇರುತ್ತಿರುವುದರಿಂದ ತುಂಗಭದ್ರ ಅಣೆಕಟ್ಟೆಗೆ 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಕ್ಷಣ ಕ್ಷಣಕ್ಕೆ ಜಲಾಶಯದ ಒಳ ಹರಿವು ಏರಿಕೆಯಾಗುತ್ತಿರುವುದರಿಂದ 90 ಸಾವಿರ ದಿಂದ 1.40 ಲಕ್ಷ ಕ್ಯೂಸೆಕ್ ನೀರು ಹದಿಗೆ ಹರಿಸುವುದಾಗಿ ಭಾನುವಾರ ಮಧ್ಯಾಹ್ನದ ವೇಳೆಗೆ ಟಿಬಿ ಬೋರ್ಡ್ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 8ಗಂಟೆಗೆ ದಾಖಲಾದ ಮಾಹಿತಿಯಂತೆ ಅಣೆಕಟ್ಟೆಯ 1633 ಅಡಿಯಲ್ಲಿ 1624.61 ಅಡಿಗೆ ನೀರು ತಲುಪಿದೆ. 105.788 ಟಿಎಂಸಿ ಅಡಿ ಒಟ್ಟು ಸಾಮರ್ಥ್ಯದಲ್ಲಿ 75.226 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 1ಲಕ್ಷ ಕ್ಯೂಸೆಕ್ ಒಳ ಹರಿವು ದಾಖಲಾಗುತ್ತಿದ್ದು, 1.10 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ADVERTISEMENT

ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ನದಿಗೆ ಹರಿಸುವುತ್ತಿರುವುದರಿಂದ ವಿಶ್ವವಿಖ್ಯಾತ ಹಂಪಿ ಭಾಗದ ನದಿ ಪಾತ್ರದಲ್ಲಿರುವ ಕ್ರಿಯಾ ಮಂಟಪ, ಪುರಂದರ ಮಂಟಪ ಸೇರಿದಂತೆ ವಿವಿಧ ಸ್ಮಾರಕಗಳು ಜಲಾವೃತಗೊಂಡಿವೆ. ಚಕ್ರತೀರ್ಥಕ್ಕೆ ತೆರಳುವ ಪಾದಚಾರಿ ಮಾರ್ಗ ಜಲಾವೃತಗೊಂಡಿದ್ದು, ಜನರು ವಿಜಯ ವಿಠ್ಠಲ ದೇವಸ್ಥಾನ, ಎದರು ಬಸವಣ್ಣ ಮಾರ್ಗವಾಗಿ ಸುತ್ತಿ ಬಳಸಿ ತೆರಳುವಂತಾಗಿದೆ.

‘ತೆಲಂಗಾಣ, ಆಂಧ್ರಕ್ಕೆ ತೆರಳಲು ಸಮಸ್ಯೆ’

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ಇಲ್ಲಿಯ ಕೋಟೆ ಜನವಸತಿ ಪ್ರದೇಶದ ಬಳಿಯ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಸೇತುವೆ ಮುಳುಗಡೆಯಾಗಿ ಕಂಪ್ಲಿ- ಗಂಗಾವತಿ ಸಂಪರ್ಕ ಭಾನುವಾರ ಸಂಜೆಯಿಂದ ಸಂಪೂರ್ಣ ಕಡಿತಗೊಂಡಿದೆ.

ಸೇತುವೆ ಬಳಿ ಜನರ ನಿಯಂತ್ರಣಕ್ಕಾಗಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದು, ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ಕಲ್ಯಾಣ, ಉತ್ತರ ಮತ್ತು ಮಧ್ಯ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶಕ್ಕೆ ತೆರಳುವ ಪ್ರಯಾಣಿಕರು ಪ್ರಸ್ತುತ ಸಂಪರ್ಕ ಕಡಿತದಿಂದ ಪರದಾಡುವ ಪರಿಸ್ಥಿತಿ
ಎದುರಾಗಿದೆ.

ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ನಿತ್ಯ ಗಂಗಾವತಿ ನಗರಕ್ಕೆ ತೆರಳುವ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಹೋಗುವ ರೋಗಿಗಳು, ವಾಣಿಜ್ಯ ವ್ಯವಹಾರಗಳಿಗೆ ತೆರಳುವವರು ವಿಜಯನಗರ ಜಿಲ್ಲೆಯ ಬುಕ್ಕಸಾಗರ ಗ್ರಾಮದ ಬಳಿಯ ಕಡೆಬಾಗಿಲು ಸೇತುವೆ ಮೂಲಕ ಸುತ್ತು ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ತಲೆದೋರಿದೆ.

ಕಂಪ್ಲಿ-ಸಿರುಗುಪ್ಪ ಹೆದ್ದಾರಿಯ ನಾರಿಹಳ್ಳ ಸೇತುವೆಗೆ ನದಿ ಹಿನ್ನೀರು ನುಗ್ಗುವ ಸಂಭವ ಇದ್ದು, ರಸ್ತೆ ಸಂಚಾರ ಸ್ಥಗಿತಗೊಳ್ಳುವ ನಿರೀಕ್ಷೆಯೂ ಇದೆ. ನದಿ ಪಾತ್ರದಲ್ಲಿ ಅಳವಡಿಸಿರುವ ನೂರಾರು ಪಂಪ್‍ಸೆಟ್‍ಗಳನ್ನು ರೈತರು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಉಸ್ತುವಾರಿ ಅಧಿಕಾರಿಯಾದ ಕುರುಗೋಡು ತಹಶೀಲ್ದಾರ್ ನರಸಪ್ಪ ನದಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿ, ನದಿ ಪಾತ್ರದ ಕೆಲ ಮೀನುಗಾರರ ಕುಟುಂಬಗಳಿಗೆ ನೆರೆಯಿಂದ ತೊಂದರೆಯಾಗಲಿದ್ದು, ಅಗತ್ಯವಾದರೆ ತಾಲ್ಲೂಕು ಆಡಳಿತದಿಂದ ಸರ್ಕಾರಿ ಹಿರಿಯ ಪ್ರಾಥಮಿಕ(ಮುಕ್ಕಣ) ಶಾಲೆಯಲ್ಲಿ ಆರಂಭಿಸಲಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು. ಪಿಐ ಕೆ.ಬಿ.ವಾಸುಕುಮಾರ್, ಕಂದಾಯ ನಿರೀಕ್ಷಕ ಜಗದೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.