
ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಒಳಹರಿವು ಪ್ರಮಾಣ ಹೆಚ್ಚಿದ ಕಾರಣ ಶುಕ್ರವಾರ ಅಣೆಕಟ್ಟೆಯ ಮೂರು ಕ್ರೆಸ್ಟ್‌ಗೇಟ್‌ಗಳನ್ನು ತೆರೆದು 8,970 ಕ್ಯೂಸೆಕ್‌ನಷ್ಟು ನೀರನ್ನು ನದಿಗೆ ಹರಿಸಲಾಗಿದೆ.
ಕಾಲುವೆ ಮತ್ತು ವಿದ್ಯುತ್ ಉತ್ಪಾದನೆಗಾಗಿ 13,524 ಕ್ಯೂಸೆಕ್‌ನಷ್ಟು ನೀರು ಹರಿಯುತ್ತಿದೆ. ಈ ಮೂಲಕ ಜಲಾಶಯದಿಂದ ಒಟ್ಟು 22,938 ಕ್ಯೂಸೆಕ್‌ನಷ್ಟು ನೀರಿನ ಹೊರಹರಿವು ಇದೆ.
‘ಮೂರು ಕ್ರೆಸ್ಟ್‌ಗೇಟ್‌ಗಳನ್ನು ತಲಾ 2.5 ಅಡಿಯಷ್ಟು ಎತ್ತಿ ನೀರನ್ನು ಹೊರಬಿಡುಲಾಗುತ್ತಿದೆ. ಸದ್ಯ ಒಳಹರಿವಿನ ಪ್ರಮಾಣ 22,938 ಕ್ಯೂಸೆಕ್‌ನಷ್ಟಿದೆ. ಒಂದು ವೇಳೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾದರೆ ಇನ್ನಷ್ಟು ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಹರಿಸಲಾಗುವುದು’ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.
1,633 ಅಡಿ ಎತ್ತರದ ಅಣೆಕಟ್ಟೆಯ ಕ್ರೆಸ್ಟ್‌ಗೇಟ್‌ಗಳು ಶಿಥಿಲಗೊಂಡಿವೆ, ಎಲ್ಲವನ್ನೂ ಬದಲಿಸಬೇಕು ಎಂಬ ತಜ್ಞರ ವರದಿಯ ಹಿನ್ನೆಲೆಯಲ್ಲಿ ಹಾಗೂ ತಜ್ಞರೇ ನೀಡಿದ ಸಲಹೆಯಂತೆ ಈ ಮಳೆಗಾಲದಲ್ಲಿ ಗರಿಷ್ಠ 1,626 ಅಡಿ ಎತ್ತರಕ್ಕಷ್ಟೇ (80 ಟಿಎಂಸಿ ಅಡಿ) ನೀರು ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ. ಈಚೆಗೆ ಒಳಹರಿವಿನ ಪ್ರಮಾಣ 4,700 ಕ್ಯೂಸೆಕ್‌ಗಿಂತಲೂ ಕಡಿಮೆ ಮಟ್ಟಕ್ಕೆ ಇಳಿದಿತ್ತು. ಹೀಗಾಗಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಯುತ್ತ 78 ಟಿಎಂಸಿ ಅಡಿಗೆ ನೀರು ಇಳಿದಿತ್ತು. ಇದೀಗ ಹಿಂಗಾರು ಮಳೆ ಬಿರುಸುಗೊಂಡಿರುವುದರಿಂದ ಮತ್ತೆ ಜಲಾಶಯಕ್ಕೆ ನೀರು ಹರಿದುಬರುತ್ತಿದ್ದು, 80 ಟಿಎಂಸಿ ಅಡಿಗಿಂತ ಹೆಚ್ಚು ನೀರು ಸಂಗ್ರಹ ಸಾಧ್ಯವಿಲ್ಲದ ಕಾರಣ ಹೆಚ್ಚುವರಿ ನೀರನ್ನು ಕ್ರೆಸ್ಟ್‌ಗೇಟ್ ತೆರೆದು ನದಿಗೆ ಹರಿಸುವುದು ಅನಿವಾರ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.