ADVERTISEMENT

ತುಂಗಭದ್ರಾ ಅಣೆಕಟ್ಟೆಗೆ ನವೆಂಬರ್‌ನಲ್ಲಷ್ಟೇ ಕ್ರಸ್ಟ್‌ಗೇಟ್ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 11:02 IST
Last Updated 21 ಜೂನ್ 2025, 11:02 IST
<div class="paragraphs"><p>ಸಿದ್ಧವಾಗಿರುವ ಕ್ರಸ್ಟ್‌ಗೇಟ್</p></div>

ಸಿದ್ಧವಾಗಿರುವ ಕ್ರಸ್ಟ್‌ಗೇಟ್

   

– ಪ್ರಜಾವಾಣಿ ಚಿತ್ರ

ಹೊಸಪೇಟೆ (ವಿಜಯನಗರ): ಕಳೆದ ವರ್ಷ ಆಗಸ್ಟ್‌ 10ರಂದು ಕೊಚ್ಚಿಹೋಗಿದ್ದ ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್‌ ಸ್ಥಳದಲ್ಲಿ ಅಳವಡಿಸಲಿರುವ ನೂತನ ಕ್ರಸ್ಟ್‌ಗೇಟ್‌ ಸಿದ್ಧವಾಗಿ ಶನಿವಾರ ಅಣೆಕಟ್ಟೆಯ ಸಮೀಪಕ್ಕೆ ಬಂದಿದ್ದು, ನವೆಂಬರ್‌ನಲ್ಲಷ್ಟೇ ಅದರ ಅಳವಡಿಕೆ ನಡೆಯಲಿದೆ.

ADVERTISEMENT

49 ಟನ್ ತೂಕದ ಈ ಗೇಟ್‌ ಅನ್ನು ಗದಗ ಸಮೀಪದ ಅಡವಿಸೋಮಾಪುರದಲ್ಲಿ ಸಿದ್ಧಪಡಿಸಲಾಗಿದ್ದು, ಶನಿವಾರ ಮಧ್ಯಾಹ್ನ ಟ್ರಕ್‌ ಮೂಲಕ ಅದನ್ನು ತರಲಾಯಿತು.  

‘ಇದೀಗ ಅಣೆಕಟ್ಟೆಯ ಕ್ರಸ್ಟ್‌ಗೇಟ್ ಅಳವಡಿಸುವ ಬೆಡ್‌ ಕಾಂಕ್ರೀಟ್ ಮಟ್ಟಕ್ಕೆ ಜಲಾಶಯದ ನೀರು ತುಂಬಿದೆ. ಈ ಹಂತದಲ್ಲಿ ಗೇಟ್ ಅಳವಡಿಕೆ ಸಾಧ್ಯವಿಲ್ಲ. ಕಳೆದ ವರ್ಷ ಅಳವಡಿಸಿರುವ ಸ್ಟಾಪ್‌ಲಾಗ್ ಗೇಟ್ ಸುಸ್ಥಿತಿಯಲ್ಲಿದ್ದು, ಈ ಮಳೆಗಾಲ ಅದರಲ್ಲೇ ಸುಧಾರಿಸುವುದು ಸಾಧ್ಯ. ಹೀಗಾಗಿ ಇದೀಗ ಕ್ರಸ್ಟ್‌ಗೇಟ್ ಬಂದಿದ್ದರೂ ನವೆಂಬರ್‌ನಲ್ಲಷ್ಟೇ ಅದರ ಅಳವಡಿಕೆ ಆಗಲಿದೆ’ ಎಂದು ತುಂಗಭದ್ರಾ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಅಹಮದಾಬಾದ್‌ನ ಹಾರ್ಡ್‌ವೇರ್‌ ಟೂಲ್ಸ್‌ ಆ್ಯಂಡ್‌ ಮೆಷಿನರಿ ಪ್ರೊಜೆಕ್ಟ್ ಕಂಪನಿ 19ನೇ ಗೇಟ್‌ ಸಹಿತ ಇತರ ಎಲ್ಲಾ ಗೇಟ್‌ಗಳನ್ನು (ಒಟ್ಟು 33) ಅಳವಡಿಸುವ ಗುತ್ತಿಗೆ ಪಡೆದುಕೊಂಡಿದೆ. ಈ ಬಾರಿ ಮಳೆ ನಿಗದಿತ ಅವಧಿಗೂ ಮೊದಲೇ ಸುರಿದು ಜಲಾಶಯದಲ್ಲಿ ಈಗಾಗಲೇ 41.85 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಈ ಹಿಂದಿನ ವರ್ಷಗಳಲ್ಲಿನ ಮಳೆ ಪ್ರಮಾಣ ಲೆಕ್ಕ ಹಾಕಿದ್ದ ಅಧಿಕಾರಿಗಳು, ಜುಲೈ ಮೊದಲ ವಾರದ ಬಳಿಕವಷ್ಟೇ ಅಣೆಕಟ್ಟೆಯ ನೀರಿನ ಮಟ್ಟ 1,611 ಅಡಿ (40 ಟಿಎಂಸಿ ಅಡಿ ನೀರಿನ ಸಂಗ್ರಹ ಮಟ್ಟ) ತಲುಪಬಹುದು, ಹೀಗಾಗಿ ಈ ವರ್ಷವೇ ಕ್ರಸ್ಟ್‌ಗೇಟ್ ಅಳವಡಿಸಬಹುದು ಎಂದು ಹೇಳಿದ್ದರು. ಆದರೆ ಜೂನ್‌ ಮೂರನೇ ವಾರದಲ್ಲೇ ಈ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ ಅಧಿಕಾರಿಗಳು, ಎಂಜಿನಿಯರ್‌ಗಳ ಲೆಕ್ಕಾಚಾರ ತಪ್ಪಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.