
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 24ನೇ ಗೇಟ್ ತೆರವು ಕಾರ್ಯ ಶುಕ್ರವಾರ ಆರಂಭವಾಗಿದ್ದು, ಈ ಗೇಟ್‌ನ 10 ಅಡಿಯಷ್ಟು ಭಾಗವನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸುವ ಕೆಲಸ ನಡೆಯುತ್ತಿದೆ.
ಈಗಾಗಲೇ 18 ಮತ್ತು 20ನೇ ಗೇಟ್‌ಗಳ 10 ಅಡಿಯಷ್ಟು ಅಗಲದ ಹಲಗೆಯನ್ನು ಕತ್ತರಿಸಿ ತೆಗೆಯಲಾಗಿದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.
ಇದೀಗ ಕಾಲುವೆಗಳಿಗೆ 10,972 ಕ್ಯೂಸೆಕ್ ಮತ್ತು ನದಿಗೆ 5,900 ಕ್ಯೂಸೆಕ್‌ನಷ್ಟು ನೀರು ಹರಿಯುತ್ತಿದೆ. ಈ ಮೂಲಕ ಪ್ರತಿದಿನ 1.8 ಟಿಎಂಸಿ ಅಡಿಯಷ್ಟು ನೀರು ಜಲಾಶಯದಿಂದ ಖಾಲಿಯಾಗುತ್ತಿದೆ. ಸದ್ಯ ಜಲಾಶಯದಲ್ಲಿ 59.85 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಈ ಸಂಗ್ರಹ ಮಟ್ಟ 43 ಟಿಎಂಸಿ ಅಡಿಗೆ ಕುಸಿದ ತಕ್ಷಣ ಹಳೆ ಗೇಟ್‌ಗಳ ಸ್ಥಳದಲ್ಲಿ ಹೊಸ ಗೇಟ್ ಅಳವಡಿಕೆ ಆರಂಭವಾಗಲಿದೆ. ಬಹುತೇಕ ಡಿಸೆಂಬರ್ 20ರ ನಂತರ ಅದಕ್ಕೆ ಚಾಲನೆ ಸಿಗಬಹುದು ಎಂದು ಹೇಳಲಾಗಿದೆ.
ಈಗಾಗಲೇ 15 ಗೇಟ್‌ಗಳ ನಿರ್ಮಾಣ ಮುಗಿದಿದ್ದು, ಇನ್ನೂ 14 ಗೇಟ್‌ಗಳ ತಯಾರಿಗೆ ಸಾಮಗ್ರಿಗಳು ಗದಗ ಮತ್ತು ಇಲ್ಲಿನ ಟಿ.ಬಿ.ಡ್ಯಾಂ ಕಚೇರಿ ಸಮೀಪದ ಕಾರ್ಯಾಗಾರ ಸ್ಥಳಕ್ಕೆ ತಲುಪಿವೆ. ಹೀಗಾಗಿ ಗೇಟ್ ತಯಾರಿ ಕೆಲಸವೂ ವೇಗ ಪಡೆದಿದೆ.
ಈಗಾಗಲೇ ತಿಳಿದಿರುವಂತೆ, ಡಿಸೆಂಬರ್ 5ರಿಂದ ಗೇಟ್‌ಗಳ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು. ಕಳೆದ ಜೂನ್ 21ರಂದು ಒಂದು ಕ್ರೆಸ್ಟ್‌ಗೇಟ್ ಸಿದ್ಧವಾಗಿ ಅಣೆಕಟ್ಟೆ ಸಮೀಪಕ್ಕೆ ಬಂದಿತ್ತು. ಆದರೆ ಆ ಹಂತದಲ್ಲಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಆರಂಭವಾದ ಕಾರಣ ಗೇಟ್ ಅಳವಡಿಕೆ ಅಸಾಧ್ಯವಾಗಿತ್ತು. ಇದೀಗ ಒಟ್ಟು 15 ಗೇಟ್‌ಗಳು ಸಿದ್ಧವಾಗಿದ್ದು, ಇನ್ನು ಮೂರರಿಂದ ನಾಲ್ಕು ತಿಂಗಳ ಒಳಗೆ ಎಲ್ಲಾ 33 ಗೇಟ್‌ಗಳು ಸಿದ್ಧವಾಗುವ ವಿಶ್ವಾಸವನ್ನು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಒಂದು ಹಳೆಯ ಗೇಟ್ ತೆರವುಗೊಳಿಸಲು 7 ದಿನ, ಅದೇ ಜಾಗದಲ್ಲಿ ಹೊಸ ಗೇಟ್ ಅಳವಡಿಕೆಗೆ 7 ದಿನ, ಹೀಗೆ ಒಟ್ಟು 14 ದಿನದಲ್ಲಿ ಒಂದು ಗೇಟ್ ಪೂರ್ಣ ಪ್ರಮಾಣದಲ್ಲಿ ಅಳವಡಿಕೆಯಾಗುತ್ತದೆ ಎಂದು ಈ ಮೊದಲು ತಿಳಿಸಲಾಗಿತ್ತು. ಇದೀಗ ಅಧಿಕಾರಿಗಳು ತಮ್ಮ ಕಾರ್ಯತಂತ್ರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದು, ನೀರು ಖಾಲಿಯಾಗುವ ಸಮಯಕ್ಕೆ ಸಾಧ್ಯವಾದಷ್ಟು ಗೇಟ್‌ಗಳನ್ನು ಅರ್ಧ ಭಾಗದಷ್ಟು ಕತ್ತರಿಸಿ ತೆಗೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಇನ್ನೊಂದು ವಾರದಲ್ಲಿ ನಾಲ್ಕಾರು ಗೇಟ್‌ಗಳ ಅರ್ಧ ಭಾಗಕ್ಕೆ ಕತ್ತರಿ ಬೀಳುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.