
ಡಿ.ಕೆ.ಶಿವಕುಮಾರ್
ಕೂಡ್ಲಿಗಿ (ವಿಜಯನಗರ ಜಿಲ್ಲೆ): ತುಂಗಭದ್ರಾ ನೀರನ್ನು ಆಶ್ರಯಿಸಿರುವ ರೈತರು ಎರಡನೇ ಬೆಳೆ ವಿಚಾರದಲ್ಲಿ ರಾಜಕೀಯ ಮಾಡಬಾರದು.
ಅಣೆಕಟ್ಟೆ ಮುಖ್ಯನೋ,ಬೆಳೆ ಮುಖ್ಯನೋ ವಿಚಾರ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿ ಭಾನುವಾರ 74 ಕೆರೆ ತುಂಬಿಸುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತುಂಗಭದ್ರಾ ಅಣೆಕಟ್ಟೆಗೆ ರೈತರ ಹಿತದೃಷ್ಟಿಯಿಂದ ಹೊಸ ಗೇಟ್ ಅಳವಡಿಸಲಾಗುತ್ತದೆ, ಇದಕ್ಕೆ ಸಹಕಾರ ನೀಡಬೇಕು ಎಂದರು.
ಕೆರೆ ಹರಾಜು ಹಾಕಿ:
₹800 ಕೋಟಿಗೂ ಹೆಚ್ಚು ಹಣ ಕೆರೆ ತುಂಬಿಸುವ ಯೋಜನೆಗೆ ಬಂದಿದೆ. ಎಲ್ಲ ಕೆರೆಗಳು ಹರಾಜು ಹಾಕಬೇಕು. ಮೀನು ಮರಿಗಳನ್ನು ಬಿಟ್ಟು ಆ ಹಣದಿಂದ ವಿದ್ಯುತ್ ಬಿಲ್ ತುಂಬಲು ಬಳಸಬೇಕು ಎಂದು ಡಿಸಿಎಂ ಸಲಹೆ ನೀಡಿದರು.
ವಿಜಯನಗರ, ಬಳ್ಳಾರಿ ಜಿಲ್ಲೆಯ ಹಲವು ಶಾಸಕರು ಕಾಂಗ್ರೆಸ್ ಕಚೇರಿಗೆ ನಿವೇಶನ ನೀಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಗಾಂಧಿ ಭಾರತದ ನೆನಪಿನಲ್ಲಿ 100 ಕಾಂಗ್ರೆಸ್ ಕಚೇರಿಗಳನ್ನು ಸ್ಥಾಪಿಸಲು ಕೆಲವರು ಸೈಟ್ ನೀಡಿಲ್ಲ. ಯಾರು ಸೈಟ್ ನೀಡಿಲ್ಲ ಅವರ ವರದಿಯನ್ನು ದೆಹಲಿಯಿಂದ ಕೇಳಿದ್ದಾರೆ. ವರದಿಯನ್ನು ಕೊಟ್ಟಿದ್ದೇನೆ ಎಂದರು.
ಜತೆಗಿದ್ದೇವೆ: ಇಡೀ ಸರ್ಕಾರ ಇಲ್ಲಿಗೆ ಬಂದಿದೆ. ನಾವು ಎಲ್ಲರೂ ಶ್ರೀನಿವಾಸ್ ಜೊತೆಗೆ ಇದ್ದೇವೆ ಎನ್ನುವುದನ್ನು ತೋರಿಸಿಕೊಟ್ಟಿದ್ದೇವೆ. ಟೀಕೆಗಳನ್ನು ಮರೆಯಬೇಕು,ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಇದೇ ನಮ್ಮ ಸರಕಾರದ ಕಲ್ಪನೆ. ಟೀಕೆಗಳು ಸಾಯುತ್ತವೆ,ಕೆಲಸಗಳು ಉಳಿಯುತ್ತವೆ ಎಂಬ ಮಾತನ್ನು ಪುನರುಚ್ವರಿಸಿದರು.
ಬಿಜೆಪಿಗೆ ಟೀಕೆ: ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ. ದಾನ ಧರ್ಮ ಕೈ ಅಧಿಕಾರದಲ್ಲಿ ಇದ್ದರೆ ಚೆಂದ. ಹಸ್ತ ವಿರೋಧ ಪಕ್ಷದವರ ಬಾಯನ್ನು ಮುಚ್ಚಿದೆ, ಬೆಲೆ ಏರಿಕೆ ನಿಯಂತ್ರಣ ಮಾಡಿದೆ. ಈ ಹಸ್ತ ಐದು ಗ್ಯಾರಂಟಿ ಕೊಟ್ಟಿದೆ. ಈ ಹಸ್ತ ಗ್ಯಾರಂಟಿ ಮೂಲಕ ಕೈ ಗಟ್ಟಿ ಮಾಡಿದೆ. ಗ್ಯಾರಂಟಿ ಮೂಲಕ ಒಂದು ಲಕ್ಷ ಕೋಟಿ ಮನೆಗೆ ಕೊಟ್ಟಿದ್ದೇವೆ. ಬಿಜೆಪಿಯವರು ಇಂತಹ ಕಾರ್ಯವನ್ನು ಯಾವ ಕಾಲಕ್ಕೂ ಮಾಡಕ್ಕೆ ಆಗಲ್ಲ ಎಂದು ಡಿಕೆಶಿ ಹೇಳಿದರು.
ಬಿಜೆಪಿಯವರು ಮನೆ ನಿರ್ಮಾಣಕ್ಕೆ ಒಂದು ಪೈಸೆ ಕೊಟ್ಟಿಲ್ಲ ಎಂದ ಅವರು, ಬೆಂಗಳೂರು ಸುತ್ತಮುತ್ತಲಿನ ಕೊಳಚೆ ನೀರನ್ನು ಕೆರೆಗಳಿಗೆ ತುಂಬಿಸಿ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.