ADVERTISEMENT

ಒಂದೇ ದಿನದಲ್ಲಿ 108 ಹನುಮಾನ್‌ ದರ್ಶನ: ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲು

ಎಂ.ಜಿ.ಬಾಲಕೃಷ್ಣ
Published 12 ಡಿಸೆಂಬರ್ 2024, 5:24 IST
Last Updated 12 ಡಿಸೆಂಬರ್ 2024, 5:24 IST
   

ಹೊಸಪೇಟೆ (ವಿಜಯನಗರ): ನಾಡಿನಾದ್ಯಂತ ಶುಕ್ರವಾರ ಹನುಮದ್‌ ವ್ರತ ಆಚರಿಸಲಾಗುತ್ತಿದ್ದು, ನಗರದ ಇಬ್ಬರು ಭಕ್ತರು ಐದು ವರ್ಷಗಳ ಹಿಂದೆ ಒಂದೇ ದಿನದಲ್ಲಿ 108 ಹನುಮಾನ್‌ ಗುಡಿಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾದ ನೆನಪು ಮತ್ತೊಮ್ಮೆ ಮರುಕಳಿಸುವಂತೆ ಮಾಡಿದೆ.

ಪಟೇಲ್ ನಗರದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿರುವ ಟಿ.ಕೃಷ್ಣಮೂರ್ತಿ ಅವರು ತಮ್ಮ ಸ್ನೇಹಿತ, ಮೆಕ್ಯಾನಿಕಲ್ ಎಂಜಿನಿಯರ್‌ ಭರತ್ ಕುಮಾರ್ ಜತೆಗೂಡಿ ಈ ಸಾಧನೆ ಮಾಡಿದ್ದರು. 2019ರ ಆಗಸ್ಟ್ 3ರಂದು ಶ್ರಾವಣ ಮಾಸದ ಶನಿವಾರ ಬೆಳಿಗ್ಗೆ 5ರಿಂದ ರಾತ್ರಿ 8ರ ನಡುವೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ 108 ಹನುಮಾನ್‌ ದೇವಸ್ಥಾನಗಳಿಗೆ ತೆರಳಿ, ಕರ್ಪೂರ ಹೆಚ್ಚಿ, ಹೂ ಇಟ್ಟು ಪೂಜೆ ಸಲ್ಲಿಸಿದ್ದರು. ಪ್ರತಿ ದೇವಸ್ಥಾನದ ಹೊರಗೆ ಮತ್ತು ಒಳಗೆ ತಾವು ನೀಡಿದ ಭೇಟಿ, ಮಾಡಿದ ಪೂಜೆಗಳ ಜಿಪಿಎಸ್‌ ಪುರಾವೆ ಸಹಿತ ಫೋಟೊ ಕ್ಲಿಕ್ಕಿಸಿಕೊಂಡು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ಕಳುಹಿಸಿದ್ದರು. ಅದೇ ವರ್ಷದ ಅಕ್ಟೋಬರ್‌ 11ರಂದು ದಾಖಲೆ ಪುಸ್ತಕದಲ್ಲಿ ಇವರ ವಿಶಿಷ್ಟ ಸೇವೆ ದಾಖಲಾಗಿತ್ತು ಹಾಗೂ ಪ್ರಮಾಣಪತ್ರ ಬಂದಿತ್ತು.

‘ಗುಂತಕಲ್‌ ಸಮೀಪದ  ಕಸಾಪುರ ಆಂಜನೇಯ, ರಾಯದುರ್ಗ ಸಮೀಪದ ಮುರಡಿ ಆಂಜನೇಯ, ಬಳ್ಳಾರಿ ಹತ್ತಿರದ  ನೇಮಕಲ್‌ ಆಂಜನೇಯ ದೇವಸ್ಥಾನಗಳನ್ನು ಸ್ಥಾಪಿಸಿದವರು ವ್ಯಾಸರಾಯರು. ಒಂದೇ ದಿನದಲ್ಲಿ ಈ ಮೂರೂ ದೇವಸ್ಥಾನಗಳ ದರ್ಶನವನ್ನು ಮಾಡುವ ಭಕ್ತರಿದ್ದಾರೆ. ಅದರಂತೆ ನಾವೂ ಏನಾದರೊಂದು ಸಾಧನೆ ಮಾಡಬೇಕು ಎಂದು ತೀರ್ಮಾನಿಸಿ 108 ಹನುಮಾನ್ ದೇವಸ್ಥಾನಗಳನ್ನು ಒಂದು ದಿನದಲ್ಲಿ ಭೇಟಿ ಮಾಡುವ ಸಂಕಲ್ಪ ಮಾಡಿದೆವು. ಅದಕ್ಕಾಗಿ ಒಂದು ವರ್ಷದ ಹಿಂದಿನಿಂದಲೇ ಹೊಸಪೇಟೆ ಸುತ್ತಮುತ್ತ ಇರುವ ಹನುಮಾನ್‌ ದೇವಸ್ಥಾನಗಳ ಸಮೀಕ್ಷೆ ಆರಂಭಿಸಿದ್ದೆವು’ ಎಂದು ನೆನಪಿಸಿಕೊಂಡರು ಕೃಷ್ಣಮೂರ್ತಿ.

ADVERTISEMENT

‘ಈ ಸಾಧನೆಯ ಮೂರು ತಿಂಗಳ ಮೊದಲು ಸುಮಾರು 88 ಹನುಮಾನ್ ಗುಡಿಗಳಿಗೆ ಒಂದೇ ದಿನದಲ್ಲಿ ಭೇಟಿ ನೀಡಿದ್ದೆವು. ಆದರೆ ಆಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನವರು ನಮ್ಮ ದಾಖಲೆಗಳನ್ನು ಪರಿಶೀಲಿಸಿ 78 ದೇವಸ್ಥಾನಗಳ ಭೇಟಿಯನ್ನು ದೃಢಪಡಿಸಿದ್ದರು. ಇನ್ನೊಂದು ಬಾರಿ ಯಾವುದೇ ತಪ್ಪಿಗೂ ಅವಕಾಶ ಇಲ್ಲದಂತೆ 108 ಗುಡಿಗಳ ದರ್ಶನವನ್ನು ದಾಖಲೆ ಸಹಿತ ಮಂಡಿಸಿ ಅದರಲ್ಲಿ ಸಫಲರಾದೆವು’ ಎಂದು ಅವರು ಹೇಳಿದರು.

ಒಂದೇ ದಿನದಲ್ಲಿ 108 ಹನುಮಾನ್ ಗುಡಿ ದರ್ಶನ ಮಾಡಿದ್ದಕ್ಕೆ ನೀಡಲಾದ ದಾಖಲೆಯ ಪ್ರಮಾಣಪತ್ರ

ನಮ್ಮ ಕಾರ್ಯದ ಬಗ್ಗೆ ಹೆಮ್ಮೆ ಇದೆ

‘ಅಂಜನಾದ್ರಿ ಬೆಟ್ಟ ಹತ್ತಿ ಇಳಿದುದು ಸಹಿತ 108 ದೇವಸ್ಥಾನಗಳಿಗೆ ಒಂದೇ ದಿನದಲ್ಲಿ ಭೇಟಿ ನೀಡಿದ್ದನ್ನು ಯೋಚಿಸಿದಾಗ ಈಗ ಅದು ಸಾಧ್ಯವೇ ಇಲ್ಲ ಎನ್ನಿಸುತ್ತಿದೆ. ನನ್ನ ಹೊಸ ಬೈಕ್‌ನಲ್ಲಿ ಅಂದು 179 ಕಿ.ಮೀ.ಕ್ರಮಿಸಿದ್ದೆವು. ಉಪವಾಸ ಇದ್ದುಕೊಂಡೇ ದೇವರ ದರ್ಶನ ಪಡೆದಿದ್ದೆವು’ ಎಂದು ಭರತ್‌ ಕುಮಾರ್ ತಿಳಿಸಿದರು.

ಯಾತ್ರೆ ಸಂದರ್ಭದಲ್ಲಿ ನೀರು ಸಹ ಕುಡಿಯುತ್ತಿರಲಿಲ್ಲ. ನೀರು ಕುಡಿದರೆ ಮೂತ್ರ ವಿಸರ್ಜನೆಗೆ ಸಮಯ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಇಷ್ಟೆಲ್ಲ ಕಠಿಣ ನಿರ್ಧಾರ ಕೈಗೊಂಡು ಲಗುಬಗೆಯಿಂದ ದೇವರ ದರ್ಶನ ಮಾಡುತ್ತ ಹೋದೆವು. ಅದರಲ್ಲಿ ಸಫಲತೆ ಸಾಧಿಸಿದ್ದರ ಕುರಿತಂತೆ ಈಗಲೂ ಹೆಮ್ಮೆ ಇದೆ. ಈ ದಾಖಲೆಯನ್ನು ಬೇರೆಯವರು ಮುರಿದ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ’ ಎಂದು ಭರತ್‌ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.