ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಹೊಸಪೇಟೆ (ವಿಜಯನಗರ): ಬಜೆಟ್ ತಯಾರಿಯಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಇಡೀ ದಿನ ಹಂಪಿ ಸಮೀಪದ ಮಲಪನಗುಡಿಯ ವಿಜಯಶ್ರೀ ಹೆರಿಟೇಜ್‌ನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚಿಂತನ ಮಂಥನ ಶಿಬಿರ ನಡೆಸಿದ್ದರು. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಹಂಪಿಯ ಪುರಾತತ್ವ ತಾಣಗಳ ಅಭಿವೃದ್ಧಿಗೆ ಒಂದಿಷ್ಟು ಅನುದಾನ ಸಿಗಬಹುದೇ ಎಂಬ ನಿರೀಕ್ಷೆ ಗರಿಗೆದರಿದೆ.
ಪ್ರತಿ ವರ್ಷ ದೇಶದ ಬೇರೆ ಬೇರೆ ಕಡೆಗಳಲ್ಲಿ ಬಜೆಟ್‌ಗಿಂತ ಮೊದಲು ಇಂತಹ ಚಿಂತನ ಶಿಬಿರಗಳನ್ನು ನಡೆಸುವ ಸಂಪ್ರದಾಯವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಡೆಸುತ್ತ ಬಂದಿದ್ದಾರೆ, ಈ ಬಾರಿ ಆ ಅವಕಾಶ ಹಂಪಿಗೆ ಒಲಿದಿದೆ, ಇದರಿಂದ ಒಂದಿಷ್ಟು ಆಶಾಭಾವನೆ ಮೂಡುವಂತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.
ಸಭೆ ಕೊನೆಗೊಳಿಸಿದ ಸಚಿವರು ತಮ್ಮ ತಂಡದೊಂದಿಗೆ ಸಂಜೆ ಹಂಪಿಯ ಆನೆಲಾಯ, ಕುದುರೆಲಾಯ ಪ್ರದೇಶಕ್ಕೆ ಬಂದರು. ಅಲ್ಲಿ ಇಡೀ ತಂಡಕ್ಕೆ ವಿಜಯನಗರ ವೈಭವವನ್ನು ತೋರಿಸಲು ವ್ಯವಸ್ಥೆ ಮಾಡಲಾಗಿತ್ತು. ಆನೆಲಾಯದ ಹಿನ್ನೆಲೆಯಲ್ಲಿ ಧ್ವನಿ ಬೆಳಕಿನಲ್ಲಿ ವಿಜಯನಗರ ವೈಭವವನ್ನು ಕಣ್ತುಂಬಿಕೊಂಡರು.
ಹಂಪಿ ಉತ್ಸವದ ವೇಳೆ ಪ್ರದರ್ಶಿಸುವ ಧ್ವನಿಬೆಳಕಿನಲ್ಲಿ ಕಲಾವಿದರು ಸ್ವತಃ ನಟಿಸುತ್ತಾರೆ, ಇಲ್ಲಿ ಮುದ್ರಿತ ವಿಡಿಯೊ ಚಿತ್ರಗಳನ್ನು ಅನೆಲಾಯದ ಸ್ಮಾರಕಗಳ ಮೇಲೆ ಹಾಯಿಸಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿಂಬಿಸಿ ಅತಿಥಿಗಳಿಗೆ ಪರಿಚಯಿಸಲಾಯಿತು.
ಜತೆಗೆ ಯಕ್ಷಗಾನ, ಡೊಳ್ಳುಕುಣಿತ, ಪಟಕುಣಿತ, ಪೂಜಾ ಕುಣಿತ, ನಂದಿಕೋಲು ಮೊದಲಾದ ರಾಜ್ಯದ ಜಾನಪದ ವೈಭವವನ್ನು ಪರಿಚಯಿಸುವ ಪ್ರಯತ್ನವೂ ನಡೆಯಿತು.
ಅತಿ ಗಣ್ಯರು ಭಾಗಿ: ಬಜೆಟ್ ಚಿಂತನ ಶಿಬಿರದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲದೆ, ಹಣಕಾಸು ಖಾತೆ ರಾಜ್ಯ ಸಚಿವ ಎಚ್.ಡಿ.ಮಲ್ಹೋತ್ರಾ, ಹಣಕಾಸು ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳು, ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರು, ಮುಖ್ಯ ಹಣಕಾಸು ಸಲಹೆಗಾರರು ಹಾಗೂ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಭಾನುವಾರವೂ ಈ ಚಿಂತನ ಮಂಥನ ಶಿಬಿರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.