ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮಾಲವಿ ಜಲಾಶಯದ ಕ್ರೆಸ್ಟ್‌ಗೇಟ್‌ಗಳ ದುರಸ್ತಿ ಮತ್ತು ನವೀಕರಣ ಕಾರ್ಯ ಮತ್ತಷ್ಟು ವಿಳಂಬವಾಗಿದೆ. ಜೂನ್ ತಿಂಗಳಲ್ಲಿ ಆರಂಭಗೊಂಡ ನವೀಕರಣದ ಕಾಮಗಾರಿ ನಾಲ್ಕು ತಿಂಗಳಾದರೂ ಶೇಕಡ 50ರಷ್ಟು ಪೂರ್ಣವಾಗಿಲ್ಲ. ಒಟ್ಟು 10 ಕ್ರೆಸ್ಟ್‌ಗೇಟ್‌ಗಳಲ್ಲಿ ಕೇವಲ ಮೂರನ್ನು ಮಾತ್ರ ದುರಸ್ತಿಗೊಳಿಸಿ ಅಳವಡಿಸಲಾಗಿದೆ.
ಆಣೆಕಟ್ಟೆಯ 6ರಿಂದ 10ನೇ ಸಂಖ್ಯೆಯ ಗೇಟ್‍ಗಳನ್ನು ಹೊರ ತೆಗೆದು ಆವರಣದಲ್ಲಿ ಇಟ್ಟು ದುರಸ್ತಿಗೊಳಿಸಲಾಗುತ್ತಿದೆ. ಸದ್ಯ ಮೂರು ಗೇಟ್‌ಗಳನ್ನು ಮಾತ್ರ ಮತ್ತೆ ಅಳವಡಿಸಲಾಗಿದೆ. ಮತ್ತೆ ಮೂರು ಗೇಟ್‍ಗಳನ್ನು ಬೇರ್ಪಡಿಸಲಾಗಿದೆ. ಇನ್ನೆರಡು ಯಥಾಸ್ಥಿತಿ ಇವೆ. ಮಳೆಗಾಲದ ಒಳಗೆ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ, ನೀರು ಸಂಗ್ರಹಗೊಳ್ಳುವುದಿಲ್ಲ ಎಂಬ ಆತಂಕ ರೈತರಿಗೆ ಕಾಡುತ್ತಿದೆ.
ಈ ಮುಂಗಾರು ಹಂಗಾಮಿನ ಆರಂಭದಲ್ಲೇ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ಜಲಾಶಯದಲ್ಲಿ ನೀರು ಸಂಗ್ರಹಗೊಳಿಸದೇ ಬಲದಂಡೆ ಕಾಲುವೆಯ ಮೂಲಕ ಬ್ಯಾಲಾಳು ಕೆರೆಗೆ ನೀರು ಹರಿಸಲಾಗಿದೆ. ದುರಸ್ತಿ ನಡೆಯುವ ಕ್ರೆಸ್ಟ್‌ಗೇಟ್‌ಗಳ ಕಡೆಗೆ ನೀರು ಹರಿಯದಂತೆ ಒಡ್ಡು ನಿರ್ಮಿಸಲಾಗಿದೆ.
‘ಪ್ರತಿ ಸಲ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಜಲಾಶಯ ಭರ್ತಿ ಆಗುತಿತ್ತು. ಕ್ರೆಸ್ಟ್‌ಗೇಟ್‌ಗಳ ಮೂಲಕ ಹಗರಿ ಹಳ್ಳದಿಂದ ಹೆಚ್ಚುವರಿ ನೀರನ್ನು ತುಂಗಭದ್ರೆಗೆ ಹರಿಸಲಾಗುತಿತ್ತು. ಆದರೆ, ಈ ಬಾರಿ ಜಲಾಶಯ ಮೂಲದಿಂದ ಕೃಷಿ ಚಟುವಟಿಕೆಗಳಿಗೆ ನೀರು ಬರುವುದಿಲ್ಲ’ ಎಂದು ಮಾಲವಿ ಗ್ರಾಮದ ರೈತ ರೇವಣಸಿದ್ದಪ್ಪ ತಿಳಿಸಿದರು.
ಶೀಘ್ರ ಅಳವಡಿಕೆಗೆ ಕ್ರಮ: ‘ಮಾಲವಿ ಜಲಾಶಯದ 5 ಗೇಟ್‍ಗಳನ್ನು ಶೀಘ್ರ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಮಳೆ ಆಗದಿದ್ದಲ್ಲಿ ಉಳಿದ ಎರಡು ಗೇಟ್‌ಗಳನ್ನು ದುರಸ್ತಿಗೊಳಿಸಿ ಅಳವಡಿಸಲಾಗುವುದು, ಈ ಮಳೆಗಾಲ ಮುಗಿಯುವುದರೊಳಗೆ ಕಾಮಗಾರಿ ಮುಗಿಸಲು ಪ್ರಯತ್ನಿಸಲಾಗುವುದು’ ಎಂದು ಮಾಲವಿ ಜಲಾಶಯದ ಜ್ಯೂನಿಯರ್ ಎಂಜಿನಿಯರ್ ಹುಲಿರಾಜ ಹೇಳಿದರು.
2 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ 10 ಗೇಟ್‌ಗಳ ಪೈಕಿ 3 ಗೇಟ್ ದುರಸ್ತಿಗೊಳಿಸಿ ಅಳವಡಿಕೆ ₹4 ಕೋಟಿಯ ಕಾಮಗಾರಿ
ಅಹಮದಾಬಾದ್‍ನಿಂದ ಕ್ರೆಸ್ಟ್‌ಗೇಟ್‌ಗಳ ನವೀಕೃತ ರೋಲರ್ಸ್ ಬರುವುದು ವಿಳಂಬವಾಗಿದೆ. ಆರಂಭದಲ್ಲಿ ಸಿದ್ಧವಾಗಿದ್ದ 2 ರೋಲರ್ಸ್ ಜೋಡಣೆಯಾಗದೆ ಇದ್ದುದರಿಂದ ವಾಪಸ್ ಕಳಿಸಲಾಗಿತ್ತುಹುಲಿರಾಜ ಮಾಲವಿ ಜಲಾಶಯದ ಜೂನಿಯರ್ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.