ಅಕ್ಬರ್, ತರುಣ್, ಮಂಜುನಾಥ್
ಹೊಸಪೇಟೆ (ವಿಜಯನಗರ): ಹದಿನೇಳು ವರ್ಷದ ಬಾಲಕಿಯೊಬ್ಬಳನ್ನು ಪ್ರೀತಿ, ಪ್ರೇಮದ ಹೆಸರಿನಲ್ಲಿ ಪುಸಲಾಯಿಸಿ, ಮದುವೆ ಮಾಡಿಕೊಂಡು, ಬಳಿಕ ಆಕೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ಕೊಲೆ ಮಾಡಿ ಹೂತು ಹಾಕಿದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
‘ಆರೋಪಿ ಮಂಜುನಾಥ (24) ಹೊಸಪೇಟೆ ನಗರದ ನೇಕಾರ ಕಾಲೋನಿ ನಿವಾಸಿಯಾಗಿದ್ದು, ಚಪ್ಪರದಹಳ್ಳಿ ಬಾಲಕಿಯನ್ನು ನಾಲ್ಕು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿ ತನ್ನ ಮನೆಗೆ ಕರೆದೊಯ್ದಿದ್ದ. ಆತನ ಮನೆಯುಲ್ಲಿ ಆತನ ತಾಯಿ ಲಕ್ಷ್ಮಿ ಸಹ ಇದ್ದರು. ಕೆಲವೇ ದಿನಗಳಲ್ಲಿ ಬಾಲಕಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾರಂಭಿಸಿದರು. ಎರಡು ತಿಂಗಳ ಹಿಂದೆ ಆರೋಪಿ ಮಂಜುನಾಥನು ತರುಣ್ ಮತ್ತು ಅಕ್ಬರ್ ಎಂಬವರೊಡನೆ ಸೇರಿಕೊಂಡು ಬಾಲಕಿಯನ್ನು ಕೊಂದು ಮುನಿರಾಬಾದ್ ಸೇತುವೆ ಸಮೀಪ ಹೂತು ಹಾಕಿ ಸಾಕ್ಷ್ಯ ನಾಶ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡೂವರೆ ತಿಂಗಳ ಹಿಂದೆ ಕೊಲೆ: ‘ಬಾಲಕಿಯನ್ನು ಎರಡೂವರೆ ತಿಂಗಳ ಹಿಂದೆ ಕೊಲೆ ಮಾಡಲಾಗಿತ್ತು, ಎರಡು ದಿನದ ಹಿಂದೆ ಆರೋಪಿಗಳಲ್ಲಿ ಒಬ್ಬ ವಿಷಯ ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗದೆ ಸತ್ಯ ಬಾಯಿಬಿಟ್ಟ ಮೇರೆಗೆ ಈ ಕೊಲೆ ಪ್ರಕರಣ ಬಹಿರಂಗವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ತೋರಿಸಿದ ಸ್ಥಳದಲ್ಲಿ ಶುಕ್ರವಾರ ಮಣ್ಣು ಅಗೆದು ನೋಡಿದಾಗ ಬಹುತೇಕ ಕೊಳೆತು ಹೋಗಿದ್ದ ಮೃತದೇಹ ಪತ್ತೆಯಾಯಿತು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆದಿದ್ದು, ಶವದ ನಿಖರ ಗುರುತಿಸುವಿಕೆಗಾಗಿ ಡಿಎನ್‌ಎ ಪರೀಕ್ಷೆಯನ್ನೂ ನಡೆಸುವ ಸಾಧ್ಯತೆ ಇದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ನಾಲ್ವರನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ. ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.