
ಹೊಸಪೇಟೆ (ವಿಜಯನಗರ): ಪೊಲೀಸ್ ಕಾನ್‌ಸ್ಟೆಬಲ್‌ಗಳು ಇದುವರೆಗೆ ಬಳಸುತ್ತಿದ್ದ ಸ್ಲೋತ್ ಕ್ಯಾಪ್ ಬದಲಿಗೆ ಪೀಕ್ ಕ್ಯಾಪ್ ತೊಡುವ ಸಮಯ ಜಿಲ್ಲೆಯಲ್ಲಿ ಬಂದಿದ್ದು, ಶುಕ್ರವಾರ ಎಸ್‌ಪಿ ಎಸ್.ಜಾಹ್ನವಿ ಅವರು ಪೀಕ್ ಕ್ಯಾಪ್ ವಿತರಿಸಿದರು ಹಾಗೂ ಪೊಲೀಸರಿಂದ ಇನ್ನಷ್ಟು ದಕ್ಷತೆಯ ಕೆಲಸ ಬಯಸಿದರು.
‘ನೀವು ಇದೀಗ ಬಹಳಷ್ಟು ಚೆನ್ನಾಗಿ ಕಾಣಿಸುತ್ತಿದ್ದೀರಿ. ಹಳೆಯ ಸ್ಲೋತ್ ಕ್ಯಾಪ್‌ನಿಂದ ಬಹಳ ಕಿರಿಕಿರಿ ಅನುಭವಿಸುತ್ತಿದ್ದ ಪೊಲೀಸರು ಇದೀಗ ತುಂಬ ಖುಷಿಯಿಂದ, ದಕ್ಷತೆಯಿಂದ ಕೆಲಸ ಮಾಡುವುದು ಸಾಧ್ಯವಿದೆ, ಇದೀಗ ಅವರ ಕೆಲಸದಲ್ಲಿ ಅದು ಕಾಣಿಸಬೇಕಾಗಿದೆ’ ಎಂದು ಅವರು ಹಲವು ಸಿಬ್ಬಂದಿಗೆ ಕ್ಯಾಪ್ ತೊಡಿಸಿದ ಬಳಿಕ ಹೇಳಿದರು.
‘ಜಿಲ್ಲೆಯಲ್ಲಿರುವ ಎಲ್ಲಾ 1,200ರಷ್ಟು ಪೊಲೀಸ್ ಸಿಬ್ಬಂದಿಗೆ ಕ್ಯಾಪ್ ಬಂದಿದೆ, ತಲೆಗೆ ಹೊಂದಿಕೊಳ್ಳುವ ಆಕಾರದಲ್ಲಿ, ಗಾತ್ರದಲ್ಲಿ ಕ್ಯಾಪ್‌ಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಗಲಭೆ ಸಂದರ್ಭದಲ್ಲಿ ಸ್ವಲ್ಪ ಕಷ್ಟ: ’ಹಿಂದಿನ ಸ್ಲೋತ್ ಕ್ಯಾಪ್‌ನಲ್ಲಿ ಗಲ್ಲದಲ್ಲಿ ಬಿಗಿಯಾಗಿ ಹಿಡಿದುಕೊಳ್ಳುವ ಪಟ್ಟಿ ಇತ್ತು, ಈ ಹೊಸ ಪೀಕ್ ಕ್ಯಾಪ್‌ನಲ್ಲಿ ಆ ಹಿಡಿತ ಇಲ್ಲ, ಸಾಮಾನ್ಯ ದಿನಗಳಲ್ಲಿ ಇದು ಉತ್ತಮ ನಿಜ, ಆದರೆ ಗಲಭೆಯಂತಹ ಸಂದರ್ಭದಲ್ಲಿ ಕ್ಯಾಪ್‌ಅನ್ನು ತಲೆಯಲ್ಲಿ ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು ಕಷ್ಟವಾಗಬಹುದು’ ಎಂದು ಕ್ಯಾಪ್ ಧರಿಸಿದ ಸಿಬ್ಬಂದಿಯೊಬ್ಬರು ಅಭಿಪ್ರಾಯಪಟ್ಟರು.
ಎಎಸ್‌ಪಿ ಜಿ.ಮಂಜುನಾಥ್, ಡಿವೈಎಸ್‌ಪಿಗಳಾದ ಟಿ.ಮಂಜುನಾಥ್, ಮಲ್ಲೇಶ್ ದೊಡ್ಮನಿ, ಹಲವು ಇನ್‌ಸ್ಪೆಕ್ಟರ್‌ಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.