ADVERTISEMENT

ಹೊಸಪೇಟೆ: ವಿಜಯನಗರಕ್ಕೆ 1 ವರ್ಷ ಪೂರ್ಣ, ನಾಲ್ಕು ಪ್ರಮುಖ ಇಲಾಖೆ ಕಾರ್ಯಾರಂಭ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 9 ಫೆಬ್ರುವರಿ 2022, 6:34 IST
Last Updated 9 ಫೆಬ್ರುವರಿ 2022, 6:34 IST
ಹಂಪಿ ಕಲ್ಲಿನ ರಥ –ಸಾಂದರ್ಭಿಕ ಚಿತ್ರ
ಹಂಪಿ ಕಲ್ಲಿನ ರಥ –ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ರಾಜ್ಯದ 31ನೇ ಜಿಲ್ಲೆಯಾಗಿ ಉದಯಗೊಂಡಿರುವ ವಿಜಯನಗರಕ್ಕೆ ವರ್ಷ ತುಂಬಿದೆ.

2021ರ ಫೆ. 8ರಂದು ವಿಜಯನಗರ ಜಿಲ್ಲೆ ಘೋಷಿಸಿ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಕೋವಿಡ್‌ ಕರಿಛಾಯೆಯಲ್ಲಿ ಉದಯಗೊಂಡ ನೂತನ ಜಿಲ್ಲೆಯ ಉದ್ಘಾಟನಾ ಸಮಾರಂಭ ಅ. 2ರಂದು ಅದ್ದೂರಿಯಾಗಿ ನೆರವೇರಿಸಲಾಗಿತ್ತು. ಸ್ವತಃ ಮುಖ್ಯಮಂತ್ರಿ ಜಿಲ್ಲೆಗೆ ಬಂದು ಕೋಟ್ಯಂತರ ರೂಪಾಯಿ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದರು. ಆದರೆ, ಕೋವಿಡ್‌ನಿಂದ ಕೆಲ ಕಾಮಗಾರಿಗಳು ಆರಂಭಗೊಳ್ಳಬೇಕಿದೆ. ಕೆಲವು ಟೆಂಡರ್‌ ಹಂತದಲ್ಲಿವೆ.

ಜಿಲ್ಲೆ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಕೋವಿಡ್‌ ಬಿಟ್ಟೂ ಬಿಡದೇ ಕಾಡುತ್ತಿದೆ. ಅದರಿಂದಾಗಿ ಅಭಿವೃದ್ಧಿಯ ರಥ ಅಂದುಕೊಂಡಷ್ಟು ವೇಗವಾಗಿ ಚಲಿಸಿಲ್ಲ. ರಾಜ್ಯ ಸರ್ಕಾರ ನೂತನ ಜಿಲ್ಲೆಯಲ್ಲಿ 16 ಇಲಾಖೆಗಳ ಆರಂಭಕ್ಕೆ ಅನುಮೋದನೆ ನೀಡಿದೆ. ಈ ಪೈಕಿ ನಾಲ್ಕು ಇಲಾಖೆಗಳಷ್ಟೇ ಅಸ್ತಿತ್ವಕ್ಕೆ ಬಂದು ಕೆಲಸ ನಿರ್ವಹಿಸುತ್ತಿವೆ.

ADVERTISEMENT

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಧಿಕಾರಿ ಕಚೇರಿ ಈಗಲೂ ಅಮರಾವತಿ ಅತಿಥಿ ಗೃಹದ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದೆ. ಜಿಲ್ಲಾ ಪಂಚಾಯಿತಿ ಕಚೇರಿ ಖನಿಜ ಪ್ರತಿಷ್ಠಾನದ ಕಚೇರಿಯಲ್ಲಿದ್ದರೆ, ಎಸ್ಪಿ ಕಚೇರಿ ಬಾಬು ಜಗಜೀವನರಾಂ ಭವನದಲ್ಲಿ ಆರಂಭಗೊಂಡಿದೆ. ಹೀಗೆ ಪ್ರಮುಖ ಕಚೇರಿಗಳಿಗೆ ಇನ್ನಷ್ಟೇ ಶಾಶ್ವತ ಸೂರು ದೊರೆಯಬೇಕಿದೆ. ತಾತ್ಕಾಲಿಕವಾಗಿ ಈ ಕಚೇರಿಗಳ ಆರಂಭಕ್ಕೆ ಗುರುತಿಸಲಾಗಿರುವ ಟಿಎಸ್‌ಪಿ ಕಟ್ಟಡದ ನವೀಕರಣ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಇನ್ನಷ್ಟೇ ಡಿ.ಸಿ., ಜಿ.ಪಂ. ಕಚೇರಿ ಅಲ್ಲಿಗೆ ಸ್ಥಳಾಂತರಗೊಳ್ಳಬೇಕಿದೆ.

ತಿಂಗಳೊಳಗೆ ಪ್ರಮುಖ ಕಚೇರಿಗಳನ್ನು ಆರಂಭಿಸಿ, ಖಾಲಿ ಹುದ್ದೆಗಳನ್ನು ತುಂಬಬೇಕೆಂದು ಮುಖ್ಯಮಂತ್ರಿಯವರು ನಿರ್ದೇಶನ ನೀಡಿದ್ದಾರೆ. ಅದು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ನೋಡಬೇಕಿದೆ.

ನಾಲ್ಕು ಪ್ರಮುಖ ಇಲಾಖೆಗಳ ಹೊರತಾಗಿ ಗ್ರಾಮೀಣ ಕುಡಿಯುವ ನೀರು, ಪಿಡಬ್ಲ್ಯೂಡಿ ಎಂಜಿನಿಯರಿಂಗ್‌ ವಿಭಾಗಗಳು ಕ್ರಮವಾಗಿ ಹರಪನ ಹಳ್ಳಿ, ಹೂವಿನಹಡಗಲಿಯಲ್ಲಿ ಮೊದಲಿನಿಂದಲೂ ಕಾರ್ಯನಿರ್ವಹಿ ಸುತ್ತಿವೆ. ಆದರೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ನೋಂದಣಾಧಿಕಾರಿ ಕಚೇರಿ, ಕೃಷಿ ಇಲಾಖೆ ಸೇರಿದಂತೆ ಪ್ರಮುಖ ಕಚೇರಿಗಳು ಆರಂಭಗೊಳ್ಳಬೇಕು. ಇಷ್ಟೇ ಅಲ್ಲ, ದಾಖಲೆಗಳ ಕೊಠಡಿಯೂ ನಿರ್ಮಾಣಗೊಳ್ಳಬೇಕು. ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣಕ್ಕೆ ಇನ್ನೂ ಹಲವು ವರ್ಷಗಳೇ ಬೇಕಾಗಬಹುದು. ಖಾಸಗಿಯವರಿಂದ ಕಟ್ಟಡಗಳನ್ನು ಬಾಡಿಗೆಗೆ ಪಡೆದು, ಕಚೇರಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ. ಎಲ್ಲ ನಾಡ ಕಚೇರಿಗಳಲ್ಲಿ ರೈತರಿಗೆ ಪಹಣಿ ಸಿಗುತ್ತವೆ. ಆದರೆ, ಗ್ರಾಮ ನಕಾಶೆ, ಜಿಲ್ಲಾಧಿಕಾರಿಗಳ ಆದೇಶದ ದಾಖಲೆಗಳು, ನ್ಯಾಯಾಲಯದ ವ್ಯಾಜ್ಯಗಳ ದಾಖಲೆಗಳು ಪಡೆಯ ಬೇಕಾದರೆ ಜಿಲ್ಲಾಧಿಕಾರಿ ಕಚೇರಿ ಇರುವುದು ಅಗತ್ಯ. ರೆಕಾರ್ಡ್ ರೂಂ ನಿರ್ಮಿಸಲು ಅನುಮತಿ ಸಿಕ್ಕಿದೆ. ಆದರೆ, ಇನ್ನಷ್ಟೇ ಅದು ನಿರ್ಮಾಣಗೊಳ್ಳಬೇಕಿದೆ. ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಜಾಗ, ಅನುದಾನ ಮಂಜೂರಾಗಿದೆ. ಅದರ ನಿರ್ಮಾಣಕ್ಕೂ ಹಲವು ತಿಂಗಳುಗಳೇ ಹಿಡಿಯಬಹುದು.

ಕೃಷಿ ಜಮೀನು ಲೇಔಟ್‌ ಆಗಿ ಬದಲಿಸಬೇಕಾದರೆ, ದಾಖಲೆಗಳಲ್ಲಿ ತಿದ್ದುಪಡಿ ಮಾಡಿಸಬೇಕಾದರೆ ಜಿಲ್ಲಾ ನೋಂದಣಾಧಿಕಾರಿ ಕಚೇರಿ ಅಗತ್ಯ. ಇದು ಕೂಡ ಇಲ್ಲ. ಅದು ಆರಂಭಗೊಳ್ಳುವವರೆಗೆ ಬಳ್ಳಾರಿಗೆ ಅಲೆದಾಡುವುದು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ. ಈ ಮಧ್ಯೆ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿದೆ. ಆನಂದ್‌ ಸಿಂಗ್‌ ಅವರನ್ನು ಬದಲಿಸಿ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರಿಗೆ ಜಿಲ್ಲೆಯ ಹೊಣೆ ವಹಿಸಿದೆ. ಇನ್ನಷ್ಟೇ ಅವರು ಜಿಲ್ಲೆಯ ಬಗ್ಗೆ ತಿಳಿದುಕೊಂಡು ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದೆ.

ಆರಂಭಗೊಂಡ ಕಚೇರಿಗಳು
ಜಿಲ್ಲಾಧಿಕಾರಿ
ಜಿಲ್ಲಾ ಪಂಚಾಯಿತಿ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ನಗರಾಭಿವೃದ್ಧಿ ಇಲಾಖೆ

*
ಸಿ.ಎಂ ವಿಜಯನಗರ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ತಿಂಗಳಲ್ಲಿ ಖಾಲಿ ಹುದ್ದೆ ತುಂಬಬೇಕೆಂದು ನಿರ್ದೇಶನ ನೀಡಿದ್ದಾರೆ.
-ಅನಿರುದ್ಧ್‌ ಶ್ರವಣ್‌ ಪಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.