ADVERTISEMENT

ವಿಜಯನಗರ ಕಬಡ್ಡಿ ಲೀಗ್‌ ಆರಂಭ: ಜೆಎನ್‌ಬಿ ವಾರಿಯರ್ಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 16:34 IST
Last Updated 3 ಮಾರ್ಚ್ 2023, 16:34 IST
ಹೊಸಪೇಟೆಯ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ಜೆಎನ್‌ಬಿ ವಾರಿಯರ್ಸ್‌ ಹಾಗೂ ಯುತ್‌ ಐಕಾನ್ಸ್‌ ತಂಡಗಳ ನಡುವೆ ಕಬಡ್ಡಿ ಪಂದ್ಯ ನಡೆಯಿತು
ಹೊಸಪೇಟೆಯ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ಜೆಎನ್‌ಬಿ ವಾರಿಯರ್ಸ್‌ ಹಾಗೂ ಯುತ್‌ ಐಕಾನ್ಸ್‌ ತಂಡಗಳ ನಡುವೆ ಕಬಡ್ಡಿ ಪಂದ್ಯ ನಡೆಯಿತು   

ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ಕಬಡ್ಡಿ ವೈಭವದ ಅಂಗವಾಗಿ ಹಮ್ಮಿಕೊಂಡಿರುವ ‘ವಿಜಯನಗರ ಕಬಡ್ಡಿ ಲೀಗ್‌–1’ ಶನಿವಾರ ರಾತ್ರಿ ನಗರದ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭಗೊಂಡಿತು.

ಪುರುಷರ ವಿಭಾಗದಲ್ಲಿ ಹೊಸಪೇಟೆ ಜೆಎನ್‌ಬಿ ವಾರಿಯರ್ಸ್‌ ಹಾಗೂ ಯುತ್‌ ಐಕಾನ್ಸ್‌ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು. ಕಿಕ್ಕಿರಿದು ಸೇರಿದ ಕ್ರೀಡಾಭಿಮಾನಿಗಳ ನಡುವೆ ಹೊನಲು ಬೆಳಕಿನ ಮ್ಯಾಟ್‌ ಪಂದ್ಯದಲ್ಲಿ ಜೆಎನ್‌ಬಿ ವಾರಿಯರ್ಸ್‌ ತಂಡದ ಆಟಗಾರರು ಉತ್ತಮ ಪ್ರದರ್ಶನ ತೋರಿ ಯುತ್‌ ಐಕಾನ್ಸ್‌ ತಂಡವನ್ನು ಮಣಿಸಿ ಗೆಲುವಿನ ಶುಭಾರಂಭ ಮಾಡಿದರು. ವಾರಿಯರ್ಸ್ ತಂಡ 18 ಹಾಗೂ ಯುತ್‌ ಐಕಾನ್ಸ್‌ ತಂಡ 5 ಅಂಕ ಗಳಿಸಿತು.

ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಟ್ಟು 78 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಭಾನುವಾರ (ಮಾ.5) ಅಂತಿಮ ಹಣಾಹಣಿ ನಡೆಯಲಿದೆ. ಕಬಡ್ಡಿ ಪಂದ್ಯಕ್ಕೂ ಮುನ್ನ ನಗರದ ವಡಕರಾಯ ದೇವಸ್ಥಾನದಿಂದ ಕ್ರೀಡಾಂಗಣದ ವರೆಗೆ ಮೆರವಣಿಗೆ ನಡೆಯಿತು. ಎಲ್ಲ ತಂಡಗಳ ಆಟಗಾರರು ಪಾಲ್ಗೊಂಡಿದ್ದರು.

ADVERTISEMENT

ಪಂದ್ಯಾವಳಿಗೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಸಂಘಟನಾ ಕಾರ್ಯದರ್ಶಿ ಬಿ.ಸಿ. ಸುರೇಶ್‌ ಮಾತನಾಡಿ, ನಗರದಲ್ಲಿ ಕಬಡ್ಡಿ ಲೀಗ್‌ ಆಯೋಜಿಸಿರುವುದು ಶ್ಲಾಘನಾರ್ಹ ಕೆಲಸ. ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸಿದಂತಾಗಿದೆ. ಕ್ರೀಡಾಪಟುಗಳು ಉತ್ತಮ ಸಾಧನೆ ತೋರಬೇಕು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌, ಸದಸ್ಯರಾದ ಪಿ. ವೆಂಕಟೇಶ್‌, ಕೆ. ಮಂಜುನಾಥ್‌, ಜಿಲ್ಲಾ ವಕ್ಫ್‌ ಬೋರ್ಡ್‌ ಅಧ್ಯಕ್ಷ ಟಿಂಕರ್‌ ರಫೀಕ್‌, ಹುಡಾ ಅಧ್ಯಕ್ಷ ಅಶೋಕ್‌ ಜೀರೆ, ಹಿರಿಯ ಕಬಡ್ಡಿ ಆಟಗಾರ ದುರುಗೋಜಿ ರಾವ್‌, ಸಿದ್ದಾರ್ಥ ಸಿಂಗ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.