ADVERTISEMENT

ವಿಜಯನಗರ: ಹಂಪಿಯಲ್ಲಿ ವಿದ್ಯಾರ್ಥಿಗಳಿಗೆ ಇತಿಹಾಸದ ಪಾಠ ಮಾಡಿದ ನಿರ್ಮಲಾ ಸೀತಾರಾಮನ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 14:52 IST
Last Updated 15 ಅಕ್ಟೋಬರ್ 2025, 14:52 IST
   

ಹೊಸಪೇಟೆ (ವಿಜಯನಗರ): ಪ್ರತಿಯೊಬ್ಬ ವಿದ್ಯಾರ್ಥಿ ನಮ್ಮ ದೇಶದ ಇತಿಹಾಸವನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಬಯಲು ವಸ್ತು ಸಂಗ್ರಾಲಯದ ಎಂದೇ ವಿಶ್ವವಿಖ್ಯಾತವಾಗಿರುವ ಹಂಪಿಗೆ ಬುಧವಾರ ಭೇಟಿ ನೀಡಿದ ಅವರು, ವಿಜಯ ವಿಠ್ಠಲ ದೇವಸ್ಥಾನದಲ್ಲಿ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳಿಗೆ ಹಂಪಿಯ ಕುರಿತು ಪಾಠ ಮಾಡಿ ಗಮನ ಸೆಳೆದರು.

'ಈ ಹಿಂದೆ ದೇಶವನ್ನು ಆಳಿದ ಅರಸರು, ವಿವಿಧ ಸಾಮ್ರಾಜ್ಯಗಳ ಕುರಿತು ಅರಿತುಕೊಳ್ಳುವುದು ಮುಖ್ಯ. ಪೋಷಕರು ಸಹ ಮಕ್ಕಳಿಗೆ ಇತಿಹಾಸದ ಕುರಿತು ತಿಳಿಸುವುದು ಹಾಗೂ ಅಲ್ಲಿಗೆ ಪ್ರವಾಸಕ್ಕೆ ಕಳುಹಿಸಬೇಕಿದೆ' ಎಂದರು.

ADVERTISEMENT

ಸಾಮ್ರಾಜ್ಯವನ್ನು ಆಳಿದ ಅರಸರು, ರಾಜರು, ಪಾಳೇಗಾರರು ಜನಪರವಾಗಿ ಕೈಗೊಂಡಿದ್ದ ಕಲೆ, ಸಂಸ್ಕೃತಿ, ಕೃಷಿ, ಹಣಕಾಸು ನಿರ್ವಹಣೆ, ರಾಜ್ಯ ಮುನ್ನೆಡೆಸಿದ ರೀತಿ ಸೇರಿದಂತೆ ಸಂಪೂರ್ಣ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದರು.

ಬೆಳಿಗ್ಗೆ ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ಸಂಜೆ ವಿಜಯ ವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡಿ, ಕಲ್ಲಿನ ರಥ ಸೇರಿದಂತೆ ಸಪ್ತಸ್ವರ ಮಂಟಪವನ್ನು ವೀಕ್ಷಿಸಿ ಪ್ರವಾಸಿ ಮಾರ್ಗದರ್ಶಕರಿಂದ ಮಾಹಿತಿ ಪಡೆದುಕೊಂಡರು. ನಂತರ ಮಂಟಪದಲ್ಲಿನ ಕಂಬಗಳಿಗೆ ಕಿವಿಗೊಟ್ಟು ಸಪ್ತಸ್ವರದ ನಾದವನ್ನು ಆಲಿಸಿ ಸಂತಸಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ತಹಶೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಸಚಿವರ ಆಪ್ತ ಕಾರ್ಯದರ್ಶಿ ಅನಿರುದ್ಧ ಶ್ರವಣ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.