ADVERTISEMENT

ವಿಜಯನಗರ | ಹೊಳಲು ಅಪಹರಣ: ವಾಟ್ಸ್‌ಆ್ಯಪ್‌ ಕರೆಯಿಂದಲೂ ಸ್ಥಳ ಗುರುತು ಸಾಧ್ಯ

ಎಂ.ಜಿ.ಬಾಲಕೃಷ್ಣ
Published 18 ಅಕ್ಟೋಬರ್ 2025, 5:26 IST
Last Updated 18 ಅಕ್ಟೋಬರ್ 2025, 5:26 IST
ಮಂಜುನಾಥ
ಮಂಜುನಾಥ   

ಹೊಸಪೇಟೆ (ವಿಜಯನಗರ): ಹೂವಿನಹಡಗಲಿ ತಾಲ್ಲೂಕಿನ ಹೊಳಲು ಗ್ರಾಮದ ವರ್ತಕ ಮಂಜುನಾಥ ಶೇಜವಾಡಕರ ಅವರ ಅಪಹರಣ, ಕೊಲೆ ಪ್ರಕರಣ ಜಿಲ್ಲೆಯನ್ನೇ ಕಂಗೆಡಿಸಿದ್ದು, ವಾಟ್ಸ್ಆ್ಯಪ್‌ ಕರೆ ಮಾಡಿದರೆ ಆರೋಪಿಗಳು ಇದ್ದ ಸ್ಥಳ ಪತ್ತೆಹಚ್ಚಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಮಾರ್ದನಿಸತೊಡಗಿದೆ.

ಪುಣೆಯಲ್ಲಿದ್ದ ಆರೋಪಿಗಳನ್ನು ಹುಡುಕಿ ತಂದ ವಿಚಾರದಲ್ಲಿ ಪೊಲೀಸರ ಸಾಧನೆ ಮೆಚ್ಚುವಂತದ್ದೇ. ಆದರೆ ಅಪಹರಣಕ್ಕೆ ಒಳಗಾದ ಅಮಾಯಕ ವ್ಯಕ್ತಿಯನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂಬುದೇ ದೊಡ್ಡ ವೈಫಲ್ಯ. ಇದ್ದ ಒಂದು ಭರ್ತಿ ದಿನವನ್ನು ವ್ಯರ್ಥ ಮಾಡಲು ಬಿಟ್ಟಿದ್ದು ಏಕೆ? ಆರೋಪಿಗಳು ಪದೇ ಪದೇ ಮಂಜುನಾಥ ಅವರ ಮೊಬೈಲ್‌ನಿಂದಲೇ ವಾಟ್ಸ್‌ಆ್ಯಪ್ ಕರೆ ಮೂಲಕ ಮಾತನಾಡುತ್ತಿದ್ದಾಗ ಅವರು ಎಲ್ಲಿದ್ದಾರೆ ಎಂದು ಕಂಡುಹಿಡಿಯಲು ಸಾಧ್ಯವಾಗಿಲ್ಲ ಏಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಹುಡುಕುವುದು ಕಷ್ಟ: ‘ವಾಟ್ಸ್‌ಆ್ಯಪ್‌ ಮೂಲಕ ಕರೆ ಮಾಡಿದರೆ ಆರೋಪಿಗಳು ಇರುವ ಸ್ಥಳ ಹುಡುಕುವುದು ಕಷ್ಟ, ಈಗ ಹಲವರು ಹಲವು ವ್ಯವಹಾರಗಳನ್ನು ವಾಟ್ಸ್‌ಆ್ಯಪ್ ಕರೆ ಮೂಲಕವೇ ಮಾಡುತ್ತಿದ್ದಾರೆ. ದುಷ್ಕೃತ್ಯ ಎಸಗಲು ಸಹ ಇದನ್ನೇ ಬಳಸುತ್ತಿದ್ದಾರೆ. ಅಮೆರಿಕದ ಮೆಟಾ ಕಂಪನಿಯಿಂದ ಮಾಹಿತಿ ತರಿಸಿಕೊಂಡು ದುಷ್ಕರ್ಮಿಗಳು ಇರುವ ಸ್ಥಳ ಪತ್ತೆಹಚ್ಚುವುದು ಬಹಳ ಸಮಯ ಹಿಡಿಯುವ ಕೆಲಸ’ ಎಂದು ಈಚೆಗೆ ಸೈಬರ್ ಅಪರಾಧ ಕುರಿತಂತೆ ತರಬೇತಿ ಮುಗಿಸಿ ಬಂದಿರುವ ನಗರದ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ತಿಳಿಸಿದರು.

ಖಂಡಿತ ಸಾಧ್ಯ: ‘ಮೊಬೈಲ್‌ ಸ್ವಿಚ್ ಆಗಿಲ್ಲದಿದ್ದರೆ, ವಾಟ್ಸ್ಆ್ಯಪ್‌ ಕರೆ ಮಾಡಿದರೆ ಲೊಕೇಷನ್ ಕಂಡುಹಿಡಿಯುವುದು ಕಷ್ಟವೇ ಅಲ್ಲ. ಮಾತನಾಡಿದ ದಾಖಲೆ ಸಿಡಿಆರ್‌ನಿಂದ ಸಿಕ್ಕಿದರೆ, ಕೊನೆಯ ಬಾರಿಗೆ ಮಾತನಾಡಿದ್ದು ಎಲ್ಲಿ, ಸ್ವಿಚ್‌ ಆಫ್ ಆದ ಸ್ಥಳ ಎಲ್ಲಿ ಎಂಬುದು ಕಾಲ್‌ ಡಂಪಿಂಗ್ ಸೈಟ್‌ನಿಂದ ಸಿಕ್ಕೇ ಸಿಗುತ್ತದೆ. ಕಳವಾದ ನೂರಾರು ಮೊಬೈಲ್‌ಗಳನ್ನು ಕೇವಲ ಐಪಿ ಅಡ್ರೆಸ್ ಮೂಲಕವೇ ಕಂಡುಹಿಡಿಯಲು ಸಾಧ್ಯ ಇರುವಾಗ ವಾಟ್ಸ್‌ಆ್ಯಪ್‌ ಕರೆ ಮಾಡಿದಾಗ ಲೊಕೇಷನ್ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವುದು ತಪ್ಪು ಮಾಹಿತಿಯಾಗುತ್ತದೆ. ಪೊಲೀಸರಿಗೆ ನಿಜವಾಗಿಯೂ ಪ್ರಕರಣವನ್ಜು ಭೇದಿಸುವ ಛಲ ಇದ್ದರೆ ತಾಂತ್ರಿಕ ಅಡ್ಡಿ ಆಗಲು ಸಾಧ್ಯವೇ ಇಲ್ಲ. ಇದ್ದ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕಿತ್ತು ಅಷ್ಟೇ’ ಎಂದು ಸೈಬರ್ ಅಪರಾಧ ಕ್ಷೇತ್ರದಲ್ಲಿ ಪಳಗಿರುವ ಹಾವೇರಿ ಜಿಲ್ಲೆಯ ಇನ್‌ಸ್ಪೆಕ್ಟರ್ ಒಬ್ಬರು ಹೇಳಿದರು.

ಅ.10ರಂದು ಬೆಳಿಗ್ಗೆ ಅಪಹರಣ ಕೃತ್ಯ ನಡೆದಿದೆ. ಮರುದಿನವೇ ವರ್ತಕನ ಹತ್ಯೆ ಆಗಿದೆ. ನಾಲ್ಕು ದಿನದ ಬಳಿಕ ಆರೋಪಿಗಳ ಪತ್ತೆಯೂ ಆಗಿದೆ. ಹೀಗಿದ್ದರೂ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಯಾವೊಂದು ಮಾಹಿತಿಯನ್ನೂ ನೀಡದೆ ಮೌನ ವಹಿಸಿದ್ದಾರೆ. ‘ಶಸ್ತ್ರಚಿಕಿತ್ಸೆ ಯಶಸ್ವಿ, ರೋಗಿ ಮಾತ್ರ ಸಾವು’ ಎಂಬಂತಹ ಸ್ಥಿತಿಯಲ್ಲಿ ತಮ್ಮ ವೈಫಲ್ಯ ಎಲ್ಲಿ ಆಯಿತು ಎಂಬುದನ್ನು ಜನರಿಗೆ ತಿಳಿಸುವ ಹೊಣೆಗಾರಿಕೆ ಪೊಲೀಸರಿಗೆ ಇಲ್ಲವೇ ಎಂದು ಜನರು ಕೇಳುತ್ತಿದ್ದಾರೆ.

ಹೊಳಲಿನಲ್ಲಿ ವಾಕಿಂಗ್ ಹೋಗಲೂ ಭಯ

ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಇದೀಗ ಜನರು ವಾಕಿಂಗ್ ಹೋಗಲೂ ಭಯಪಡುತ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಮೈಲಾರ ರಸ್ತೆ ಹ್ಯಾರಡ ರಸ್ತೆ ಹಡಗಲಿ ರಸ್ತೆ ಯಲ್ಲಿ ಮಹಿಳೆಯರು ವೃದ್ದರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ವಾಕಿಂಗ್‌ಗೆ ತೆರಳುತಿದ್ದರು. ಒಂದು ವಾರದಿಂದ ಈ ಮಾರ್ಗಗಳಲ್ಲಿ ವಾಕಿಂಗ್ ಹೋಗುವವರ ಸಂಖ್ಯೆ ವಿರಳವಾಗಿದೆ ಮಹಿಳೆಯರಂತೂ ಕಾಣಿಸುತ್ತಲೇ ಇಲ್ಲ.

ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ವರ್ತಕ ಮಂಜುನಾಥ ಅಪಹರಣ ಕೊಲೆ ಪ್ರಕರಣದ ಆರೋಪಿಗಳಾದ ಮಲ್ಲಿಕಾರ್ಜುನ ಉಜ್ಜಮ್ಮನವರ ಯೋಗೇಶ ಅಂಗಡಿ ಅವವರನ್ನು ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.