ADVERTISEMENT

ವಿಜಯಪುರ: ಮನೆ‌ಗೆ ತೆರಳಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕ

ಮಕ್ಕಳ ಅಭ್ಯಾಸದತ್ತ ಗಮನ ಕೊಡಲು ಪಾಲಕರಿಗೆ ಸಲಹೆ

ಪರಮೇಶ್ವರ ಎಸ್.ಜಿ.
Published 15 ಜುಲೈ 2020, 15:56 IST
Last Updated 15 ಜುಲೈ 2020, 15:56 IST
ಬಬಲೇಶ್ವರ ತಾಲ್ಲೂಕಿನ ಕೆಂಗಲಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಣಮಂತ ಕಾತರಕಿ ಗ್ರಾಮದ ಮನೆ ಮನೆಗೆ ತೆರಳಿ ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿರುವುದು
ಬಬಲೇಶ್ವರ ತಾಲ್ಲೂಕಿನ ಕೆಂಗಲಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಣಮಂತ ಕಾತರಕಿ ಗ್ರಾಮದ ಮನೆ ಮನೆಗೆ ತೆರಳಿ ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿರುವುದು   

ತಿಕೋಟಾ: ಕೊವಿಡ್ ಹಿನ್ನೆಲೆಯಲ್ಲಿ ಶಾಲೆ ಆರಂಭವಾಗದೇ ಇರುವುದರಿಂದ ಮನೆಯಲ್ಲೇ ಇರುವ ಮಕ್ಕಳನ್ನು ಇಲ್ಲೊಬ್ಬ ಶಿಕ್ಷಕರು ಹುಡುಕಿಕೊಂಡು ಹೋಗಿ ಪಾಠ, ಪ್ರವಚನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು, ಬಬಲೇಶ್ವರ ತಾಲ್ಲೂಕಿನ ಕೆಂಗಲಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಣಮಂತ ಕಾತರಕಿ ಈ ಕಾರ್ಯ ಮಾಡುತ್ತಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ಶಿಕ್ಷಕರು ಬೇಸಿಗೆ ರಜೆಯಲ್ಲೂ ಮಕ್ಕಳ ಮನೆ, ಮನೆಗೆ ಹೋಗಿ ಪಾಠ ಹೇಳಿಕೊಡುತ್ತಿದ್ದರು. ಈ ವರ್ಷ ಕೋವಿಡ್‌ನಿಂದ ಶಾಲೆ ಪ್ರಾರಂಭವಾಗದೇ ಇರುವುದರಿಂದ ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳಿಗೆ ಕಲಿಸುವ ಕಾರ್ಯ ಮಾಡುತ್ತಿದ್ದಾರೆ.

ADVERTISEMENT

ನಲಿಕಲಿ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿರುವ ಇವರು ತಂತ್ರಜ್ಞಾನ ಆಧಾರಿತವಾಗಿ ಮಕ್ಕಳ ಕಲಿಕೆಗೆ ಪೂರಕವಾಗುವ ಕೆಲವು ಕನ್ನಡ ಹಾಗೂ ಆಂಗ್ಲ ಭಾಷೆಯ ವಿಡಿಯೊ, ಅಕ್ಷರಗಳ ಚಿತ್ರ, ಕಥೆ, ಅಂಕಿಗಳ ಚಿತ್ರಗಳನ್ನು ಒಂದರಿಂದ ಮೂರನೇ ತರಗತಿ ಮಕ್ಕಳಿಗೆ ಮೊಬೈಲ್ ವಿಡಿಯೊಗಳ ಮೂಲಕ ತಿಳಿಹೇಳಿ ಅಕ್ಷರ ಜ್ಞಾನ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಕೆಲವು ಕಲಿಕಾ ವಿಡಿಯೊಗಳನ್ನು ಪಾಲಕರ ಮೊಬೈಲ್‌ಗೂ ಕಳಿಹಿಸುತ್ತಿದ್ದಾರೆ.

ಹಿರಿಯ ಪ್ರಾಥಮಿಕ ತರಗತಿ ಮಕ್ಕಳಿಗೆ ಓದು, ಬರಹ, ಸರಳ ಲೆಕ್ಕಗಳನ್ನು ಮಾಡಿಸಿ, ಪಠ್ಯದಲ್ಲಿಯ ಕಠಿಣ ಶಬ್ದಗಳ ಪಟ್ಟಿ ಹಾಗೂ ಗಣಿತ ಲೆಕ್ಕಗಳನ್ನು ಮನೆಗೆಲಸ ಮಾಡಲು ಸಲಹೆ ನೀಡಿ ಪ್ರತಿದಿನ ಪರಿಶೀಲನೆ ಮಾಡುತ್ತಾರೆ.

ಮಕ್ಕಳಿಗೆ ಕನ್ನಡ, ಹಿಂದಿ, ಇಂಗ್ಲಿಷ್ ಬರೆಸುವುದು, ಓದಿಸುವುದು ಹಾಗೂ ಪ್ರತಿ ದಿನ ಸಾಮಾನ್ಯವಾದ ಗಣಿತದ ಸಂಕಲನ, ವ್ಯವಕಲನ ಗುಣಾಕಾರ, ಭಾಗಾಕಾರ ಹಾಗೂ ಸಂಖ್ಯಾರೇಖೆಯ ಮೇಲೆ ಲೆಕ್ಕಗಳು, ದಿನಾಲು ಕನಿಷ್ಟ 15 ಲೆಕ್ಕಗಳನ್ನು ಮಾಡಿಸುವ ಕಾರ್ಯ ಮಾಡುತ್ತಿದ್ದಾರೆ. ಮಕ್ಕಳು ಇಷ್ಟು ದಿನ ಶಾಲೆಯಲ್ಲಿ ಕಲಿತ ಕಲಿಕೆಯೂ ಮರೆಯದಂತೆ ನೋಡಿಕೊಳ್ಳುತ್ತಿದ್ದಾರೆ.

ಪಾಲಕರ ಸಹಕಾರ:ಶಿಕ್ಷಕರ ಮಾತಿನಂತೆ ಪಾಲಕರು ಕೂಡಾ ಪ್ರತಿನಿತ್ಯ ಸಂಜೆ ಎರಡರಿಂದ ಮೂರು ಗಂಟೆ ಟಿವಿ ಬಂದ್ ಮಾಡಿ ಮಕ್ಕಳು ಅಭ್ಯಾಸದಲ್ಲಿ ತೊಡಗುವಂತೆ ನೋಡಿಕೊಳ್ಳುತ್ತಾರೆ. ಈ ಶಾಲೆಯಲ್ಲಿ 200 ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯ ಗ್ರಾಮದಲ್ಲಿರುವ 100ಕ್ಕೂ ಹೆಚ್ಚು ಮಕ್ಕಳಿಗೆ ಈ ಶಿಕ್ಷಕರಿಂದ ಕಲಿಕೆಗೆ ಸಹಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.