ADVERTISEMENT

ವಿಜಯಪುರ: ಅವಸಾನದ ಅಂಚಿನಲ್ಲಿ ವೀರರಾಜನ ಸಮಾಧಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 4:50 IST
Last Updated 30 ಅಕ್ಟೋಬರ್ 2025, 4:50 IST
ಅಲಿರೋಜಾ ಸುತ್ತಲು ಮಳೆ ನೀರು ಪಾಚಿಗಟ್ಟಿರುವುದು – ಪ್ರಜಾವಾಣಿ ಚಿತ್ರ
ಅಲಿರೋಜಾ ಸುತ್ತಲು ಮಳೆ ನೀರು ಪಾಚಿಗಟ್ಟಿರುವುದು – ಪ್ರಜಾವಾಣಿ ಚಿತ್ರ   

ವಿಜಯಪುರ: ಕೃಷ್ಣೆ - ಭೀಮಾತೀರದಲ್ಲಿದ್ದ ಆದಿಲ್‌ಷಾಹಿ ಸಾಮ್ರಾಜ್ಯವನ್ನು ಕೊಂಕಣ ಭಾಗಕ್ಕೆ ವಿಸ್ತರಿಸಿದ, ತಾಳಿಕೋಟೆ ಯುದ್ಧದಲ್ಲಿ ಜಯ ಸಾಧಿಸಲು ಮಹತ್ವದ ಪಾತ್ರ ವಹಿಸಿದ, ಐತಿಹಾಸಿಕ ಜಾಮೀಯಾ ಮಸೀದಿ ನಿರ್ಮಿಸಿ ಮಹೋನ್ನತ ಕೊಡುಗೆ ನೀಡಿದ ಅಲಿ ಆದಿಲ್‌ಷಾಹಿ-1 ಸಮಾಧಿ ಈಗ ಅವಸಾನದಂಚಿಗೆ ತಲುಪಿರುವುದು ದುರಂತ.

ಕಟ್ಟಡದ ಸುತ್ತಲೂ ಭಾರಿ ಪ್ರಮಾಣದ ನೀರು ಸುತ್ತುವರೆದು ಸ್ಮಾರಕ  ನಡುಗಡ್ಡೆಯಾಗಿ ಪರಿಗಣಿಸಿದೆ. ರಾಜನ ಪವಿತ್ರ ಸಮಾಧಿ ಎಂದೋ ಹಾಳಾಗಿ ಹೋದ ಸಂದರ್ಭದಲ್ಲಿ ಇಟ್ಟಿಗೆಗಳಿಂದ ಮರು ಸ್ಪರ್ಶ ನೀಡಲಾಗಿದ್ದರೂ  ಅದು ಸಂಪೂರ್ಣ ಕುಂದು ಹೋಗಿದೆ. ಇಲಾಖೆ ಅಳವಡಿಸಿದ್ದ ಬೋರ್ಡ್ ಸಹ ಕೆಲದಿನಗಳಿಂದ ಅನಾಥವಾಗಿ ಒಳಗೆ ಬಿದ್ದಿದೆ.

ಆದಿಲ್‌ಷಾಹಿ ಅರಸನ ಈ ಸಮಾಧಿಯ ಗೋಡೆಗಳು ಪ್ರೇಮ ನಿವೇದನೆಯ ಸ್ಥಳಗಳಾಗಿವೆ, ತಮ್ಮ ಸಂಗಾತಿಯ ಹೆಸರು ಬರೆದು `ದಿಲ್' ಆಕಾರ ರಚಿಸಿ ಗೋಡೆಗಳನ್ನು ವಿರೂಪಗೊಳಿಸಿಯಾಗಿದೆ. ಗಚ್ಚು ಸಂಪೂರ್ಣವಾಗಿ ಉದುರುತ್ತಿದೆ.

ADVERTISEMENT

ಆದರೆ ಈ ಎಲ್ಲವೂಗಳ ಜೊತೆಗೆ ಮಳೆ ನೀರು ವ್ಯಾಪಕವಾಗಿ ಸುತ್ತುವರೆದು ನೀರು ಪಾಚಿಗಟ್ಟಿ ದುರ್ನಾತ ಬೀರಿದೆ. ಮೂಗು ಮುಚ್ಚಿಕೊಂಡೇ ಸ್ಮಾರಕ ನೋಡಬೇಕಾಗಿದೆ, ಅದರ ಹಿಂಭಾಗದಲ್ಲಿಯೇ ಇರುವ ಅತ್ಯಂತ ಸುಂದರ ರಚನೆಯ ಕಪ್ಪು ಶಿಲಾಮಂಟಪದ ಸಮಾಧಿಯಂತೂ ಜಲಾವೃತವಾಗಿ ದರ್ಶನ ದುರ್ಲಭವಾಗಿದೆ.

ಆದಿಲ್‌ಷಾಹಿ ಅರಸರು ಸಮಾಧಿಗಾಗಿ ಕಟ್ಟಿಸಿದ ಪ್ರಥಮ ಕಟ್ಟಡ, ವಾಸ್ತುಶಿಲ್ಪದಲ್ಲಿ ಅತ್ಯಂತ ಸರಳವಾಗಿರುವ ಕಟ್ಟಡವಾಗಿರುವ ಈ ‘ಅಲಿರೋಜಾ’ ಈಗ ಅವಸನಾದ ಅಂಚಿಗೆ ತಲುಪಿದೆ.

ಗುಮ್ಮಟ ಪ್ರಧಾನವಲ್ಲದ ಈ ಕಟ್ಟಡ ಆದಿಲ್‌ಷಾಹಿ ಸಾಮ್ರಾಜ್ಯದಲ್ಲಿ ಕಟ್ಟಲ್ಪಟ್ಟ ಅತ್ಯಂತ ಸರಳ ರಚನೆಯ ಕಟ್ಟಡ. ಈ ಅಪೂರ್ವ ಸ್ಮಾರಕವನ್ನು ಪ್ರವಾಸಿಗರು ನೋಡದೇ ಹೋಗುತ್ತಿದ್ದಾರೆ.

ವೀರರಾಜ ಎಂದೇ ಖ್ಯಾತಿ

ಅಲಿ ಆದಿಲ್‌ಷಾಹಿ-1 ವೀರರಾಜ ಎಂದೇ ಖ್ಯಾತಿಯಾದ ರಾಜ. 1557-1580ರ ಅವಧಿಯಲ್ಲಿ ಆದಿಲ್‌ಷಾಹಿ ಸಾಮ್ರಾಜ್ಯವನ್ನು ಆಳ್ವಿಕೆ ನಡೆಸಿದ ಅಲಿ ಆದಿಲ್‌ಷಾಹಿ 1 ಅವಧಿಯಲ್ಲಿ ಸಾಮ್ರಾಜ್ಯ ವಿಸ್ತರಣೆಯ ಬಹುದೊಡ್ಡ ಯುದ್ಧವೇ ನಡೆಯಿತು. 1565 ರಲ್ಲಿ ತಾಳಿಕೋಟೆ ಯುದ್ಧ ಗೆಲ್ಲುವಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದ. ಈ ಯುದ್ಧ ಗೆದ್ದ ಉತ್ಸಾಹದಲ್ಲಿಯೇ ಗೋವಾ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದರೂ ಪೋರ್ಚುಗೀಸರು ಇತನ ದಾಳಿಯನ್ನು ಹಿಮ್ಮೆಟ್ಟಿಸಿದರು.

ನಂತರ ಅದವಾನಿ ಕೋಟೆ, 1573 ರಲ್ಲಿ ತುರ್ಕಲ ಕೋಟೆ ವಶಪಡಿಸಿಕೊಂಡಿದ್ದ. ಸ್ವತಂತ್ರ್ಯವಾಗಿದ್ದ ಬಂಕಾಪೂರದ ಮೇಲೆ ದಾಳಿ ನಡೆಸಿ 15 ತಿಂಗಳ ಸತತ ಹೋರಾಟ ನಡೆಸಿ ಬಂಕಾಪೂರ ವಶಡಿಸಿಕೊಂಡ. ಹೀಗೆ ಅನೇಕ ಯುದ್ಧದಲ್ಲಿ ಜಯಶಾಲಿಯಾಗಿ ಆದಿಲ್‌ಷಾಹಿ ಸಾಮ್ರಾಜ್ಯ ಕಟ್ಟಿದ್ದ ಅಲಿ ಆದಿಲ್ ಷಾಹಿ-1 ವಿಜಯಪುರದಲ್ಲಿ ಬೃಹತ್ ಜಾಮೀಯಾ ಮಸೀದಿ ನಿರ್ಮಾಣಕ್ಕೂ ಕಾರ್ಯಯೋಜನೆ ರೂಪಿಸಿ ಕೆಲಸ ಆರಂಭಿಸಿದ. ಈ ರೀತಿ ಯುದ್ಧ ಹಾಗೂ ವಾಸ್ತುಶಿಲ್ಪಕ್ಕೆ ಕೊಡುಗೆ ನೀಡಿದ ಅಲಿ ಆದಿಲ್‌ಷಾಹಿ-1 ಸ್ಮಾರಕ ಮಾತ್ರ ಈಗ ಅನಾಥವಾಗಿದೆ.

ಇಬ್ರಾಹಿಂ ರೋಜಾದಲ್ಲಿರುವ ರಾಜಕಾಲುವೆಗಳನ್ನು ಬಂದ್ ಮಾಡಿರುವುದರಿಂದ ಇಬ್ರಾಹಿಂ ರೋಜಾ ಹಾಗೂ ಅಲಿರೋಜಾದಲ್ಲಿ ಮಳೆ ನೀರು ಹೊರಹೋಗಲು ದಾರಿಯೇ ಇಲ್ಲ. ಹೀಗಾಗಿ ಮಳೆ ನೀರು ಸ್ಮಾರಕದ ಒಳಗಡೆಯೇ ನಿಲ್ಲುತ್ತಿದ್ದು ಇದರಿಂದ ಸ್ಮಾರಕಕ್ಕೆ ಹಾನಿಯಾಗುತ್ತಿದೆ. ಪುರಾತತ್ವ ಇಲಾಖೆ ಹಾಗೂ ಪಾಲಿಕೆಯವರು ಜಂಟಿಯಾಗಿ ಕಾರ್ಯ ನಿರ್ವಹಿಸಿ ಸ್ಮಾರಕವನ್ನು ಉಳಿಸಬೇಕು.
-ಅಬ್ದುಲ್ ರಜಾಕ್ ಹೊರ್ತಿ, ಮಾಜಿ ಪಾಲಿಕೆ ಸದಸ್ಯ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಲಿರೋಜಾದಂತಹ ಹಲವಾರು ಸ್ಮಾರಕಗಳು ಅವನತಿಯತ್ತ ಸಾಗುತ್ತಿವೆ. ಆದ್ದರಿಂದ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ತಕ್ಷಣವೇ ಇಂತಹ ಸ್ಮಾರಕ ಗುರುತಿಸಿ ಅವುಗಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು.
-ಸಿದ್ದಲಿಂಗ್ ಬಾಗೇವಾಡಿ, ಎಐಡಿವೈಓ ರಾಜ್ಯ ಕಾರ್ಯದರ್ಶಿ
ಇಟ್ಟಿಗೆಗಳಿಂದ ಮರು ಸ್ಪರ್ಶ ನೀಡಿದ್ದ ಸಮಾಧಿಗಳು ಕುಂದು ಹೋಗಿರುವುದು – ಪ್ರಜಾವಾಣಿ ಚಿತ್ರ
ಅನಾಥವಾಗಿ ಸ್ಮಾರಕದ ಒಳಗೆ ಬಿದ್ದರುವ ಬೋರ್ಡ್ – ಪ್ರಜಾವಾಣಿ ಚಿತ್ರ
ಅಲಿರೋಜಾ – ಪ್ರಜಾವಾಣಿ ಚಿತ್ರ
ಅಲಿರೋಜಾ ಆವರಣದಲ್ಲಿರುವ ಕಪ್ಪು ಶಿಲಾಮಂಟಪದ ಸಮಾಧಿ ಜಲಾವೃತವಾಗಿರುವುದು – ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.