ADVERTISEMENT

ಆಲಮಟ್ಟಿ ಹಿನ್ನೀರು: ಹೂಳು ಅಧ್ಯಯನ ಆರಂಭ

ಚಂದ್ರಶೇಖರ ಕೊಳೇಕರ
Published 13 ಜನವರಿ 2023, 22:45 IST
Last Updated 13 ಜನವರಿ 2023, 22:45 IST
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿನ ಹೂಳು ಅಧ್ಯಯನಕ್ಕಾಗಿ ಆಲಮಟ್ಟಿಗೆ ಶುಕ್ರವಾರ ಆಗಮಿಸಿರುವ ಬೋಟ್ ಗಳನ್ನು ನದಿಗೆ ಇಳಿಸಲಾಗುತ್ತಿರುವುದು
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿನ ಹೂಳು ಅಧ್ಯಯನಕ್ಕಾಗಿ ಆಲಮಟ್ಟಿಗೆ ಶುಕ್ರವಾರ ಆಗಮಿಸಿರುವ ಬೋಟ್ ಗಳನ್ನು ನದಿಗೆ ಇಳಿಸಲಾಗುತ್ತಿರುವುದು   

ಆಲಮಟ್ಟಿ: ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯದ ಹಿನ್ನೀರಿನಲ್ಲಿ ಸಂಗ್ರಹವಾಗಿರುವ ಹೂಳು ಅಧ್ಯಯನಕ್ಕೆ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ (ಕೆಇಆರ್ ಎಸ್) ಮುಂದಾಗಿದೆ.

ಈಗಾಗಲೇ ಹೂಳು ಅಧ್ಯಯನಕ್ಕೆ ಎಲ್ಲಾ ಪೂರ್ವಭಾವಿ ಸಿದ್ಧತೆ ಪೂರ್ಣಗೊಂಡಿದ್ದು, ಇನ್ನೂ ನಾಲ್ಕೈದು ದಿನಗಳಲ್ಲಿ ವ್ಯವಸ್ಥಿತ ಅಧ್ಯಯನ ಆರಂಭಗೊಳ್ಳಲಿದೆ.

ಅಧ್ಯಯನಕ್ಕಾಗಿ ಆಲಮಟ್ಟಿಗೆ ಎರಡು ಬೋಟ್‌ಗಳು ಮಂಗಳೂರಿನಿಂದ ಬಂದಿದ್ದು, ಬೋಟ್ ನೊಳಗೆ ಅಧ್ಯಯನ ಪೂರಕ ಚಟುವಟಿಕೆ ನಡೆಸಲು ಅಗತ್ಯವಿರುವ ಸಾಮಗ್ರಿಗಳು ಕೂಡಾ ಬಂದಿವೆ.

ADVERTISEMENT

ಜಲಾಶಯದ ಹಿನ್ನೀರು ಆಲಮಟ್ಟಿಯಿಂದ ಹಿಪ್ಪರಗಿ ಜಲಾಶಯ ವರೆಗೆ 487 ಚದರ ಕಿ.ಮೀ.ವರೆಗೆ ವಿಸ್ತರಿಸಿದ್ದು, ಅಲ್ಲಿಯವರೆಗೂ ಹೂಳಿನ ಅಧ್ಯಯನ ನಡೆಯಲಿದೆ ಎಂದು ಕೆಇಆರ್ ಎಸ್ ಅಧಿಕಾರಿಗಳು ಮಾಹಿತಿ ನೀಡಿದರು.

ಹೇಗೆ ನಡೆಯಲಿದೆ ಅಧ್ಯಯನ?:

ಡ್ರೋಣ ಏರಿಯಲ್ ಸಮೀಕ್ಷೆಯ ಮೂಲಕ ಆಲಮಟ್ಟಿಯ ಹಿನ್ನೀರಿನ ವ್ಯಾಪ್ತಿಯನ್ನು ಪ್ರತಿ 100 ಮೀಟರ್‌ಗೆ ಒಂದರಂತೆ ವಿಭಾಗೀಕರಿಸಲಾಗುತ್ತದೆ. ಒಟ್ಟಾರೇ 4878 ಇಂಟರವಲ್ ಸರ್ವೆ ಸೆಕ್ಷನ್ ಆಗಿ ವಿಂಗಡಿಸಲಾಗಿದೆ.

ಬೋಟ್‌ನಲ್ಲಿ ಅಳವಡಿಸಿರುವ ಎಕೋ ಸೌಂಡಿಂಗ್ ಸಿಸ್ಟಂ ಮೂಲಕ ಹೊರಬರುವ ಧ್ವನಿ ತರಂಗಗಳನ್ನು ನೀರಿನ ಆಳದೊಳಗೆ ಬಿಡಲಾಗುವುದು. ಅದರಿಂದ ಬರುವ ಪ್ರತಿಧ್ವನಿಯ ಆಧಾರದ ಮೇಲೆ ಉಪಕರಣದಲ್ಲಿ ಅಳವಡಿಸಿರುವ ನೂತನ ಸಾಫ್ಟ್ ವೇರ್ ಮೂಲಕ ಎಷ್ಟು ಪ್ರಮಾಣದಲ್ಲಿ ನೀರಿದೆ, ಹೂಳಿನ ಅಂಶವಿದೆ ಎಂಬುದರ ಮಾಹಿತಿ ಲಭ್ಯವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನಂತರ ಎಲ್ಲಾ ವಿಭಾಗಿಸಲಾದ ಸ್ಥಳಗಳಿಂದ ಬಂದ ಮಾಹಿತಿಯನ್ನು ಅಧ್ಯಯನ ನಡೆಸಿ ಒಟ್ಟಾರೇ ಆಲಮಟ್ಟಿಯಲ್ಲಿ ನೀರಿನ ಸಂಗ್ರಹ ಎಷ್ಟಿದೆ? ಹೂಳಿನ ಪ್ರಮಾಣ ಎಷ್ಟು? ಹೂಳಿನಿಂದ ಜಲಾಶಯದಿಂದ ನೀರಿನ ಸಂಗ್ರಹದ ಕೊರತೆ ಎಷ್ಟು? ಹೂಳು ತಡೆಯಲು ಕೈಗೊಳ್ಳುವ ಕ್ರಮಗಳು, ಎಂಜಿನಿಯರಿಂಗ್ ತಂತ್ರಜ್ಞಾನದ ವಿವರವಾದ ವರದಿಯನ್ನು ನೀಡಲಾಗುತ್ತದೆ ಎಂದರು.

ಮೂರು ತಿಂಗಳಲ್ಲಿ ಪೂರ್ಣ:

ಇಡೀ ಹಿನ್ನೀರಿನ ಸಮೀಕ್ಷೆ ಕಾರ್ಯ ಬಹುತೇಕ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ, ಸಮೀಕ್ಷೆಯ ನಂತರ ಅಧ್ಯಯನ ಹಾಗೂ ಅಂಕಿ ಅಂಶಗಳ ವಿಶ್ಲೇಷಣಾ ಕಾರ್ಯ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸುಮಾರು ₹ 1.8 ಕೋಟಿ ವೆಚ್ಚದಲ್ಲಿ ಈ ಸಮೀಕ್ಷೆ ಕಾರ್ಯಕ್ಕೆ ಮಂಗಳೂರಿನ ಜಿಯೋಮರೈನ್ ಎಂಜಿನಿಯರಿಂಗ್ ಸಂಸ್ಥೆಯವರು ಗುತ್ತಿಗೆ ಪಡೆದಿದ್ದಾರೆ.

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ರಾಷ್ಟ್ರೀಯ ಜಲವಿಜ್ಞಾನ ಯೋಜನೆಯ (ರಾಷ್ಟ್ರೀಯ ಹೈಡ್ರೋಲಾಜಿಕಲ್ ಪ್ರೊಜೆಕ್ಟ್) ಅನುದಾನದಲ್ಲಿ, ರಾಜ್ಯ ಸರ್ಕಾರ ಈ ಅಧ್ಯಯನ ನಡೆಸುತ್ತದೆ ಎಂದರು.

2008 ರಲ್ಲಿಯೂ ನಡೆದಿತ್ತು:

ಸುಪ್ರಿಂಕೋರ್ಟ್ ಸೂಚನೆಯಂತೆ ಆಲಮಟ್ಟಿ ಜಲಾಶಯದ ಹಿನ್ನೀರಿನ ಸಂಗ್ರಹದ ಅಧ್ಯಯನ 2008 ರಲ್ಲಿ ನಡೆದಿತ್ತು. ದೆಹಲಿ ಮೂಲದ ತೇಜೋವಿಕಾಸ ಲಿಮಿಟೆಡ್ ಸಂಸ್ಥೆ ಹೂಳಿನ ಪ್ರಮಾಣದ ಅಧ್ಯಯನ ನಡೆಸಿತ್ತು. ಆಗ ಜಲಾಶಯದ ಹಿನ್ನೀರಿನಲ್ಲಿ 2.78 ಟಿಎಂಸಿ ಅಡಿ ಹೂಳು ಸಂಗ್ರಹವಾಗಿದೆ ಎಂದು ವರದಿ ನೀಡಿತ್ತು.

ಕೇಂದ್ರ ಸರ್ಕಾರದ ನ್ಯಾಷನಲ್ ಹೈಡ್ರಾಲಾಜಿ ಪ್ರೊಜೆಕ್ಟ್ ಅನುದಾನದಲ್ಲಿ ರಾಜ್ಯದ 7 ಜಲಾಶಯಗಳ ಹೂಳಿನ ವೈಜ್ಞಾನಿಕ ಅಧ್ಯಯನ ನಡೆದಿದೆ. ಆಲಮಟ್ಟಿಯ ಅಧ್ಯಯನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ

ಕೆ.ಜಿ. ಮಹೇಶ, ನಿರ್ದೇಶಕ,

ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ
ಕೃಷ್ಣರಾಜ ಸಾಗರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.