ಆಲಮಟ್ಟಿ (ವಿಜಯಪುರ ಜಿಲ್ಲೆ): ಆಲಮಟ್ಟಿಯಲ್ಲಿ ಕೃಷ್ಣಾ ನದಿಗೆ ಕಟ್ಟಲಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟೆಯ ಜಲಾಶಯದ ಹಿಂಭಾಗದ ನೀರಿನಾಳದಲ್ಲಿನ ಕಾಂಕ್ರೀಟ್ ಭಾಗವನ್ನು ವಿಶಿಷ್ಟ ರಾಸಾಯನಿಕಗಳ ಮಿಶ್ರಣ ಲೇಪಿಸಿ ಪುನಃಶ್ಚೇತನಗೊಳಿಸುವ ಕಾರ್ಯ ಆರಂಭಗೊಂಡಿದೆ.
ಕೇಂದ್ರ ಜಲ ಆಯೋಗ ರೂಪಿಸಿದ್ದ ‘ಅಣೆಕಟ್ಟೆಗಳ ನವೀಕರಣ ಮತ್ತು ಸುಧಾರಣೆ ಯೋಜನೆ-2’ ಅಡಿ ಕಾಮಗಾರಿ ನಡೆಯುತ್ತಿದ್ದು, ವಿಶ್ವಬ್ಯಾಂಕ್ ₹28 ಕೋಟಿ ನೆರವು ಒದಗಿಸಿದೆ. ‘ಡ್ರಿಪ್-1’ರ ಅಡಿ ಜಲಾಶಯದ ಡೆಡ್ ಸ್ಟೋರೇಜ್ ಮೇಲ್ಭಾಗದ ಕಾಂಕ್ರೀಟ್ ಭಾಗವನ್ನು ಈಗಾಗಲೇ ಪುನಃಶ್ಚೇತನಗೊಳಿಸಲಾಗಿತ್ತು.
ಡೆಡ್ ಸ್ಟೋರೇಜ್ ಮಟ್ಟಕ್ಕಿಂತ ಕೆಳಕ್ಕೆ ಕಾಮಗಾರಿ:
‘ಅಣೆಕಟ್ಟೆಯ ಡೆಡ್ ಸ್ಟೋರೇಜ್ ಮಟ್ಟ ಸಮುದ್ರ ಮಟ್ಟದಿಂದ 506.8 ಮೀಟರ್ ಎತ್ತರದಲ್ಲಿದ್ದು, ಅದರ ಕೆಳಗಡೆ ಅಂದಾಜು 17.6 ಟಿಎಂಸಿ ಅಡಿ ನೀರು ಯಾವಾಗಲೂ ಸಂಗ್ರಹ ಇರುತ್ತದೆ. ಹೀಗಾಗಿ ಅಣೆಕಟ್ಟೆಯ ಅಡಿಪಾಯ 488 ಮೀಟರ್‌ನಿಂದ ಡೆಡ್ ಸ್ಟೋರೇಜ್ ಮಟ್ಟ 506.87 ಮೀಟರ್ ಎತ್ತರದವರೆಗೆ ಅಂದರೆ ಅಂದಾಜು 15 ಮೀಟರ್ (50 ಅಡಿ) ಎತ್ತರದವರೆಗಿನ ಕಾಂಕ್ರೀಟ್ ಭಾಗವನ್ನು ವಿವಿಧ ತಂತ್ರಜ್ಞಾನ ಬಳಸಿ ಪುನಃಶ್ಚೇತನ ಮಾಡಲಾಗುವುದು. ನೀರಿನ ಸೋರುವಿಕೆ ಕಡಿಮೆ ಮಾಡುವುದು ಈ ಕಾಮಗಾರಿಯ ಮುಖ್ಯ ಉದ್ದೇಶ’ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜ ತಿಳಿಸಿದರು.
ನುರಿತ ಕಾರ್ಮಿಕರಿಂದ ದೇಶ ವಿದೇಶಗಳಿಂದ ತರಿಸಲಾದ ವಿಶಿಷ್ಟ ರಾಸಾಯನಿಕಗಳನ್ನು ಬಳಸಿ ರಭಸದ ಅಲೆಗಳು ಕಡಿಮೆಯಿದ್ದಾಗ ಕಾಮಗಾರಿ ನಿರ್ವಹಿಸಲಾಗುತ್ತದೆ. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆಡಿ.ಬಸವರಾಜ, ಮುಖ್ಯ ಎಂಜಿನಿಯರ್ ಅಣೆಕಟ್ಟು ವಲಯ
1964ರಲ್ಲಿ ಆಗಿನ ಕೇಂದ್ರದ ನೀರಾವರಿ ಸಚಿವ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಆಲಮಟ್ಟಿ ಅಣೆಕಟ್ಟೆ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಿದರು. ನಿರ್ಮಾಣ ಕಾರ್ಯವು 2000ದಲ್ಲಿ ಪೂರ್ಣಗೊಂಡಿತು. 2002ರಲ್ಲಿ ನೀರು ಶೇಖರಣೆಯಾಯಿತು. ಅಂದಿನಿಂದ ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ನಿತ್ಯ ಆಲಮಟ್ಟಿ ಅಣೆಕಟ್ಟೆಗೆ 4 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತದೆ. 123.081 ಟಿಎಂಸಿ ಅಡಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಈ ಅಣೆಕಟ್ಟೆಗೆ ಇದೆ.
ಕಾಮಗಾರಿ ನಿರ್ವಹಣೆ ಹೇಗೆ?
‘ನುರಿತ ಮುಳುಗು ತಜ್ಞರುಳ್ಳ 20 ಕಾರ್ಮಿಕರ ತಂಡವು ಜೋಕಾಲಿ ಮಾದರಿ ಪ್ಲಾಟ್‌ಫಾರ್ಮ್ ನಿರ್ಮಿಸಿಕೊಂಡು ಅಣೆಕಟ್ಟೆಯ ಹಿನ್ನೀರಿನಲ್ಲಿ ನದಿಗೆ ಇಳಿಯುತ್ತಾರೆ. ಅಲ್ಲಿಂದ ರಕ್ಷಣಾ ಕವಚ, ಸಾಮಗ್ರಿ, ಆಮ್ಲಜನಕ ಸಿಲಿಂಡರ್ ಜೊತೆ ಒಬ್ಬೊಬ್ಬರೇ ಜಲಾಶಯದ ಹಿನ್ನೀರಿಗೆ ಹತ್ತಿಕೊಂಡೇ ನೀರಿನಾಳದೊಳಗೆ ಪ್ರವೇಶಿಸುತ್ತಾರೆ. ಯಾವುದೇ ಜಲಚರ ಪ್ರಾಣಿಗಳಿಂದ (ಮೊಸಳೆ, ದೊಡ್ಡ ಗಾತ್ರ ಮೀನು) ಯಾವುದೇ ತೊಂದರೆಯಾಗದಂತೆ ಪಂಜರ ರೀತಿಯ ರಕ್ಷಣಾ ಕವಚ ಧರಿಸಿರುತ್ತಾರೆ. ಕೆಲಸ ನಿರ್ವಹಿಸುವ ಭಾಗದಲ್ಲಿ ಒಂದೆಡೆ ಮಾತ್ರ ರಕ್ಷಣಾ ಕವಚ ತೆಗೆದು ಜಲಾಶಯದ ಕಾಂಕ್ರೀಟ್ ಭಾಗಕ್ಕೆ ಆಗಿರುವ ಹಾನಿಯನ್ನು ಪರಿಶೀಲಿಸಿ, ಅದಕ್ಕೆ ತಕ್ಕ ಕಾಮಗಾರಿ ನಡೆಸುತ್ತಾರೆ. ಜಿಪ್ಸಂ, ಪಾಲಿಮರ್, ಅಪಾಕ್ಸಿ ಮತ್ತಿತರ ರಾಸಾಯನಿಕ ವಸ್ತುಗಳುಳ್ಳ ಮಿಶ್ರಣವನ್ನು ಲೇಪಿಸಲಾಗುತ್ತದೆ. ಅದು ಕೇವಲ 10ರಿಂದ 30 ಸೆಕೆಂಡ್ ನಲ್ಲಿ ಗಟ್ಟಿಯಾಗುತ್ತದೆ’ ಎಂದು ಸಹಾಯಕ ಎಂಜಿನಿಯರ್ ವಿಠ್ಠಲ ಜಾಧವ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.