
ಆಲಮಟ್ಟಿ: ಯಾವುದೇ ಮಳೆಯಾಗದಿದ್ದರೂ ಆಲಮಟ್ಟಿ ಜಲಾಶಯಕ್ಕೆ ಬುಧವಾರ ಏಕಾಏಕಿ ನೀರು ಬರುತ್ತಿದೆ. ಆಲಮಟ್ಟಿ ಜಲಾಶಯದ ಹಿಂಭಾಗದ 6 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಹಿಪ್ಪರಗಿ ಜಲಾಶಯದ 22ನೇ ಗೇಟ್‌ನಲ್ಲಿ ತಾಂತ್ರಿಕ ತೊಂದರೆಯ ಕಾರಣ ಜಲಾಶಯದಿಂದ ಮಂಗಳವಾರದಿಂದ ಕೃಷ್ಣಾ ನದಿಗೆ ನೀರು ಹರಿದು ಹೋಗುತ್ತಿದೆ.
ಅದಕ್ಕಾಗಿ ಆಲಮಟ್ಟಿ ಜಲಾಶಯದ ಒಳಹರಿವು ಬುಧವಾರ ಏಕಾಏಕಿ ಶೂನ್ಯ ಕ್ಯುಸೆಕ್‌ನಿಂದ 7671 ಕ್ಯುಸೆಕ್ ಗೆ ಏರಿಕೆಯಾಗಿದೆ. ಹೆಚ್ಚು ಕಡಿಮೆ ಆಲಮಟ್ಟಿ ಜಲಾಶಯಕ್ಕೆ 0.66 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಒಳಹರಿವು ಗುರುವಾರವೂ ಮುಂದುವರಿಯಲಿದೆ. ಈ ವರ್ಷ ಮೇ 19ಕ್ಕೆ ಆರಂಭಗೊಂಡ ಜಲಾಶಯದ ಒಳಹರಿವು ನ. 16 ರಂದು ನಿಂದ ಸ್ಥಗಿತಗೊಂಡಿತ್ತು. ಈಗ ಮತ್ತೆ ಒಳಹರಿವು ಆರಂಭಗೊಂಡಿದೆ.
ಆಲಮಟ್ಟಿ ಜಲಾಶಯದಿಂದ ನೀರಾವರಿಗಾಗಿ ಕಾಲುವೆಗೆ ನೀರು ಬಿಡುತ್ತಿರುವ ಕಾರಣ ಜಲಾಶಯದ ಸಂಗ್ರಹ ಸಾಮರ್ಥ್ಯ ಸುಮಾರು 2 ಟಿಎಂಸಿ ಅಡಿಯಷ್ಟು ಕಡಿಮೆಯಾಗಿದೆ. ಈ ನೀರು ಬಂದ ಕಾರಣ ಅಂದಾಜು 0.6 ಟಿಎಂಸಿ ಅಡಿ ನೀರು ಹರಿದು ಬಂದು ಜಲಾಶಯದ ಮಟ್ಟ ಏರಿಕೆಯಾಗಿದೆ.
ಆಲಮಟ್ಟಿ ಜಲಾಶಯದಿಂದ ನೀರಾವರಿ, ಮತ್ತಿತರ ಬಳಕೆಗಾಗಿ 10, 889 ಕ್ಯೂಸೆಕ್ ನೀರು ಜಲಾಶಯದಿಂದ ಹೊರಹೋಗುತ್ತಿದೆ. ಜಲಾಶಯದಲ್ಲಿ 95.89 ಟಿಎಂಸಿ ಅಡಿ ನೀರು ಇದೆ.
ಹಿಪ್ಪರಗಿ ಜಲಾಶಯದಿಂದ ನೀರು ಬರುತ್ತಿರುವ ಕಾರಣ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಬಂದಿದೆ. ಗುರುವಾರವೂ ಒಳಹರಿವು ಬರಲಿದೆ, ಆದರೆ ಜಲಾಶಯದ ಹಿಂಭಾಗದಲ್ಲಿ ಯಾವುದೇ ಆತಂಕದ ಸ್ಥಿತಿ ಇಲ್ಲ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ. ಬಸವರಾಜ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.