
ಬಸವನಬಾಗೇವಾಡಿ: ಹನಿ ನೀರಾವರಿ ಪದ್ಧತಿಯಲ್ಲಿ ಸಂಶೋಧನಾ ಹಂತದಲ್ಲಿರುವ ಕಬ್ಬು ಬೆಳೆದು, ಅಧಿಕ ಇಳುವರಿಯ ಸಾಧನೆ ಮಾಡಿರುವ ಬಸವನಬಾಗೇವಾಡಿ ಮತಕ್ಷೇತ್ರ ವ್ಯಾಪ್ತಿಯ ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ಮಾಜಿ ಸೈನಿಕ, ರೈತ ನಾರಾಯಣ ಸಾಳುಂಕೆ ಅವರನ್ನು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಈಚೆಗೆ ಸನ್ಮಾನಿಸಿ ಪ್ರೋತ್ಸಾಹಿಸಿದರು.
ನಾರಾಯಣ ಸಾಳುಂಕೆ ಅವರು ಕಬ್ಬು ಬೆಳೆಯಲ್ಲಿ ಕೇವಲ ಮೂರು ವರ್ಷದಲ್ಲಿ ಅನುಕರಣೀಯ ಸಾಧನೆ ಮಾಡಿದ್ದಾರೆ. ಭಾರತೀಯ ಸೇನೆಯಲ್ಲಿ 17 ವರ್ಷ ದೇಶ ಸೇವೆ ಮಾಡಿ ನಿವೃತ್ತರಾದ ಬಳಿಕ ತವರಿಗೆ ಆಗಮಿಸಿದ ಸೇನಾನಿ ನಾರಾಯಣ ಅವರು ಭೂತಾಯಿ ಸೇವೆಗೆ ಅಣಿಯಾಗಿ ಪಿತ್ರಾರ್ಜಿತವಾಗಿ ಬಂದಿದ್ದ 11 ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿದ್ದರು.
ತಮ್ಮ ಸುತ್ತಲಿನ ರೈತರು ಕಬ್ಬು ಬೆಳೆಯುವುದನ್ನು ಕಂಡು ತಾವೂ ಕಬ್ಬು ಬೆಳೆಯಲು ಮುಂದಾರು. ಆದರೆ ಸಾಮಾನ್ಯವಾಗಿ ಕಬ್ಬು ಬೆಳೆಯುವಲ್ಲಿ ರೈತರು ಮಾಡುತ್ತಿರುವ ತಪ್ಪುಗಳನ್ನು ಅಧ್ಯಯನ ಮಾಡಿ ತಮ್ಮದೇ ವಿಶಿಷ್ಟ ಜ್ಞಾನ, ನೂತನ ತಾಂತ್ರಿಕತೆಯಿಂದ ಹನಿ ನೀರಾವರಿ ಪದ್ಧತಿ ಅಳವಡಿಕೊಂಡರು. ಸಂಶೋಧನಾ ಹಂತದಲ್ಲಿರುವ ಸಂಕೇಶ್ವರ ಮೂಲದ ಡಾ.ಸಂಜಯ ಪಾಟೀಲ ಅವರ ಬಳಿಯಿಂದ 25 ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದರು. ಸಾಲಿನಿಂದ ಸಾಲಿಗೆ 7 ಅಡಿ, ಸಸಿಯಿಂದ ಸಸಿಗೆ 1 ಅಡಿ ಅಂತರದಲ್ಲಿ ನಾಟಿ ಮಾಡಿದರು.
ನಿಯಮಿತವಾಗಿ ಪ್ರತಿದಿನ 30 ಸಾವಿರ ಲೀಟರ್ ನೀರು ಪೂರೈಸಿದರು. ಪ್ರತಿ 10 ದಿನಕ್ಕೆ ಎಕರೆಗೆ 5 ಕೆಜಿಯಂತೆ 20 ಕೆಜಿ ಗೊಬ್ಬರ ಹಾಗೂ ಪ್ರತಿ 3 ತಿಂಗಳಿಗೊಮ್ಮೆ ನಿಗದಿತ ಪ್ರಮಾಣದಲ್ಲಿ ಲಘು ಪೋಷಕಾಂಶಗಳನ್ನು ಡ್ರಿಪ್ ಮೂಲಕವೇ ಪೂರೈಸಿದರು. ಇದರಿಂದ ಇತರೆ ರೈತರಿಗಿಂತ ಕಡಿಮೆ ಶ್ರಮ, ಮಿತ ನೀರು, ಕನಿಷ್ಟ ಪ್ರಮಾಣದ ಗೊಬ್ಬರ ಬಳಸುವ ತಂತ್ರಜ್ಞಾನದ ನಾರಾಯಣ ಅವರ ಪರಿಶ್ರಮ ಫಲ ನೀಡಿತು. ಮೊದಲ ವರ್ಷ 107 ಟನ್, 2ನೇ ವರ್ಷ 112 ಟನ್ ಹಾಗೂ ಇದೀಗ 3 ನೇ ಬೆಳೆಯಾಗಿ 120 ಟನ್ ಇಳುವರಿ ಪಡೆದಿದ್ದಾರೆ.
ಇವರು ಬೆಳೆದಿರುವ ಕಬ್ಬಿನ ತಳಿ ಪ್ರತಿ ಜಿಲ್ಲೆಯಲ್ಲೂ 7ರಿಂದ10 ಮರಿಗಳು ಬರುತ್ತಿವೆ. ಪ್ರತಿ ಕಬ್ಬಿನ ಜಲ್ಲೆಯೂ ಸಾಮಾನ್ಯವಾಗಿ 20 ಅಡಿ ಎತ್ತರ ಬೆಳೆದಿದ್ದು, 28-35 ಗಣಿಕೆ ಹೊಂದಿವೆ. ಒಂದು ಕಬ್ಬಿನಲ್ಲಿ ಸರಾಸರಿ 3.5 ರಿಂದ 4 ಕೆಜಿ ತೂಕ ಬರುತ್ತಿದೆ. ಇತರೆ ರೈತರ ಜಮೀನಿನಲ್ಲಿ ಹಾಯಿ ನೀರಿನಲ್ಲಿ ಬೆಳೆದ ಕಬ್ಬಿಗಿಂತ ದುಪ್ಪಟ್ಟಿಗೂ ಹೆಚ್ಚಾಗಿ ತೂಕ ಬರುತ್ತಿದೆ. ಇವರ ಸಾಧನೆ ಕಂಡು ಶ್ರೀ ಶಾಂತೇಶ್ವರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಶ್ರೀಮಂತ ಇಂಡಿ ಅವರು ನಾರಾಯಣ ಅವರ ಮಾರ್ಗದರ್ಶನದಲ್ಲಿ 50 ಎಕರೆ ಕಬ್ಬು ಬೆಳೆದಿದ್ದಾರೆ. ಮೊದಲ ಕಟಾವಿನಲ್ಲೇ 140 ಟನ್ ಕಬ್ಬು ಇಳುವರಿ ಪಡೆದಿದ್ದಾರೆ. ಸುತ್ತಲಿನ ರೈತರು ಸೇರಿದಂತೆ ಸುಮಾರು 200 ಎಕರೆ ಜಮೀನಿನಲ್ಲಿ ನಾರಾಯಣ ಅವರ ತಾಂತ್ರಿಕತೆ ಅನುಸರಿಸುತ್ತಿದ್ದಾರೆ.
ತಮ್ಮದೇ ಕ್ಷೇತ್ರ ವ್ಯಾಪ್ತಿಯ ಮಾಜಿ ಸೈನಿಕ ನಾರಾಯಣ ಸಾಳುಂಕೆ ಅವರು ಸಾಮಾನ್ಯ ಕಬ್ಬು ಬೆಳೆಗಾರರಿಗಿಂತ ಕಡಿಮೆ ವೆಚ್ಚದಲ್ಲಿ ದುಪ್ಪಟ್ಟು ಇಳುವರಿ ಕಬ್ಬು ಬೆಳೆದ ವಿಷಯ ತಿಳಿದ ಕೂಡಲೇ ಸಚಿವ ಶಿವಾನಂದ ಪಾಟೀಲ ಅವರನ್ನು ಕರೆಸಿ ಸನ್ಮಾನಿಸಿ, ಬೆನ್ನುತಟ್ಟಿದರು. ಅಲ್ಲದೇ ಅವರು ಸಾಧಕ ರೈತನ ತಾಂತ್ರಿಕತೆ ಅರಿಯಲು ಕೃಷಿ ಇಲಾಖೆ ಹಾಗೂ ಎಸ್.ನಿಜಲಿಂಗಪ್ಪ ಕಬ್ಬು ಸಂಸ್ಥೆಯ ಸಂಶೋಧಕರನ್ನು ರೈತನ ಕಬ್ಬಿನ ಗದ್ದೆಗೆ ಕಳಿಸಿ ಅಧ್ಯಯನ ನಡೆಸಲು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.