ADVERTISEMENT

ಭೀಮಾ ನದಿ ನೀರಿನ ಯೋಜನೆ: ನಿರ್ಲಕ್ಷ್ಯ

ಅಕ್ರಮವಾಗಿ ನದಿ ನೀರಿಗೆ ಅಣೆಕಟ್ಟೆ ಕಟ್ಟಿದ ಮಹಾರಾಷ್ಟ್ರ

ಎ.ಸಿ.ಪಾಟೀಲ
Published 14 ಡಿಸೆಂಬರ್ 2025, 5:18 IST
Last Updated 14 ಡಿಸೆಂಬರ್ 2025, 5:18 IST
ಕರ್ನಾಟಕದಲ್ಲಿ ಹರಿದಿರುವ ಭೀಮಾ ನದಿ ಮಳೆಗಾಲದಲ್ಲಿ ನೀರಿನ ಹರಿವಿನಿಂದ ಕಂಗೊಳಿಸುತ್ತಿದೆ.  
ಕರ್ನಾಟಕದಲ್ಲಿ ಹರಿದಿರುವ ಭೀಮಾ ನದಿ ಮಳೆಗಾಲದಲ್ಲಿ ನೀರಿನ ಹರಿವಿನಿಂದ ಕಂಗೊಳಿಸುತ್ತಿದೆ.     

ಇಂಡಿ: ಕರ್ನಾಟಕದಲ್ಲಿ ಸುಮಾರು 300 ಕಿ.ಮೀ. ಉದ್ದ ಹರಿಯುವ ಭೀಮಾ ನದಿಯ ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಹಾರಾಷ್ಟರ ರಾಜ್ಯದ ಭೀಮಾಶಂಕರ ಎಂಬಲ್ಲಿ ಹುಟ್ಟಿ ಒಟ್ಟು 786 ಕಿ.ಮೀ. ಹರಿದು ಕೃಷ್ಣಾ ನದಿಯನ್ನು ಸೇರುವ ಈ ನದಿ ನೀರನ್ನು ಇಲ್ಲಿನ ಜನಪ್ರತಿನಿಧಿಗಳು ಮತ್ತು ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ.

ಈ ನದಿ ಕರ್ನಾಟಕದ ವಿಜಯಪುರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಜೀವನಾಡಿಯಾಗಿದೆ. 289 ಕಿ.ಮೀ.ಕರ್ನಾಟಕದಲ್ಲಿ ಹರಿಯುತ್ತದೆ. ಬಚಾವತ್ ಆಯೋಗದ 1976ರ ತೀರ್ಪಿನ ಪ್ರಕಾರ ಮಹಾರಾಷ್ಟ್ರ 95 ಟಿಎಂಸಿ ನೀರು, ಕರ್ನಾಟಕ 15 ಟಿಎಂಸಿ ನೀರು ಬಳಸಿಕೊಳ್ಳಬೇಕು. ಆದರೆ ಬಜಾವತ್ ಆಯೋಗ ತೀರ್ಪು ನೀಡಿ 50 ವರ್ಷ ಕಳೆದರೂ ಕೂಡಾ ಇಲ್ಲಿಯವರೆಗೆ ಭೀಮಾ ನದಿಯಲ್ಲಿ ಹರಿಯುತ್ತಿರುವ 15 ಟಿಎಂಸಿ ನೀರು ಕರ್ನಾಟಕ ಬಳಸಿಕೊಂಡಿಲ್ಲ.

ಈ ನದಿಯ ನೀರನ್ನೇ ನಂಬಿದ ಕರ್ನಾಟಕದ 3 ಜಿಲ್ಲೆಗಳ ಸುಮಾರು 164 ಗ್ರಾಮಗಳು ಜೀವನ ಸಾಗಿಸುತ್ತಿವೆ. ಆ ಗ್ರಾಮಗಳ ಜನ, ಜಾನುವಾರು, ಕೃಷಿ ಈ ನದಿಯನ್ನೇ ಅವಲಂಬಿಸಿವೆ. ಆದರೆ ಬೇಸಿಗೆಯಲ್ಲಿ ಈ ನದಿಯಲ್ಲಿ ನೀರೇ ಇರುವದಿಲ್ಲ. ಬತ್ತಿ ಹೋಗಿ ಆಟದ ಮೈದಾನದಂತೆ ಕಾಣುತ್ತಿದೆ. ಇದರಿಂದ ಈ ಎಲ್ಲಾ ಗ್ರಾಮಗಳ ಜನರಿಗೆ ಅತೀವ ತೊಂದರೆಯಾಗಿದೆ.

ADVERTISEMENT

ಕರ್ನಾಟಕ ಭೀಮಾ ನದಿಯ ನೀರನ್ನು ಬಳಸಿಕೊಳ್ಳದಿರುವದನ್ನು ತಿಳಿದ ಮಹಾರಾಷ್ಟ್ರ ಸರ್ಕಾರ ಭೀಮಾ ನದಿಗೆ ಸುಮಾರು 15 ಅನಧಿಕೃತ ಅಣೆಕಟ್ಟೆಗಳನ್ನು ನಿರ್ಮಿಸಿಕೊಂಡು ಭೀಮಾ ನದಿಯ ಕರ್ನಾಟಕದ ಪಾಲಿನ ಎಲ್ಲ ನೀರನ್ನೂ ಕೂಡಾ ಬಳಸಿಕೊಳ್ಳುತ್ತಿದೆ. ಮಹಾರಾಷ್ಟ್ರದ ಉಜನಿಯಲ್ಲಿ ನಿರ್ಮಿಸಿದ ಜಲಾಶಯದಲ್ಲಿಯ ಹಿನ್ನೀರನ್ನು ಅನಧಿಕೃತವಾಗಿ ಸೀನಾ ನದಿಗೆ ಜೋಡಿಸಿ, ಸೀನಾ ನದಿಗೆ ನೀರನ್ನು ಹರಿಸಿ, ಸೀನಾ ನದಿಯ ದಡದಲ್ಲಿರುವ ಮಹಾರಾಷ್ಟ್ರದ ಅನೇಕ ಗ್ರಾಮಗಳಿಗೆ ನೀರು ಕೊಡುತ್ತಿದೆ.

ಮಳೆಗಾಲದಲ್ಲಿ ಹೆಚ್ಚು ಮಳೆಯಾದಾಗ ಮಹಾರಾಷ್ಟ್ರದ ಉಜನಿ ಜಲಾಶಯ, ವೀರ ಭಟಕರ ಮತ್ತು ಸೀನಾ ನದಿಗಳ ನೀರನ್ನು ನೇರವಾಗಿ ಕರ್ನಾಟಕದ ಭೀಮಾ ನದಿ ಪಾತ್ರಕ್ಕೆ ಹರಿಬಿಡುತ್ತಾರೆ. ಇದರಿಂದ ಮಹಾಪುರ ಪರಿಸ್ಥಿತಿ ಉಂಟಾಗಿ ಇದ್ದ ಬಿದ್ದ ಬೆಳೆಗಳು, ಆಸ್ತಿ ಪಾಸ್ತಿ ಹಾಳಾಗುತ್ತಿವೆ. ಒಮ್ಮೊಮ್ಮೆ ನಮ್ಮಲ್ಲಿ ಮಳೆ ಇಲ್ಲದಿದ್ದರೂ ನಾವು ಭೀಮಾ ನದಿಯಲ್ಲಿ ಮಹಾಪೂರ ಎದುರಿಸುತ್ತಿದ್ದೇವೆ.

22 ವರ್ಷಗಳ ಹಿಂದೆ ಕರ್ನಾಟಕದ ಇಂಡಿ ಮತ್ತು ಚಡಚಣ ತಾಲ್ಲೂಕುಗಳಲ್ಲಿ ಎರಡೂ ರಾಜ್ಯಗಳು ತಲಾ ನಾಲ್ಕರಂತೆ ಒಟ್ಟು 8 ಬಾಂದಾರಗಳನ್ನು ನಿರ್ಮಿಸಿದ್ದಾರೆ. ಆದರೆ ಬಾಂದಾರಗಳ ಎತ್ತರ ಅತೀ ಕಡಿಮೆ ಇದ್ದು, ಸ್ವಲ್ಪೇ ನೀರು ನಿಲ್ಲುತ್ತವೆ. ಇತ್ತೀಚೆಗೆ ಆ ಎಲ್ಲ ಬಾಂದಾರಗಳಿಗೆ ಅಳವಡಿಸಿದ ಗೇಟ್ ಗಳು ಕೊಳೆತು ಹಾಳಾಗಿವೆ. ಅವುಗಳಲ್ಲಿ ನೀರೇ ನಿಲ್ಲುವದಿಲ್ಲ.

ಈಗಲಾದರೂ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಭೀಮಾ ನದಿಯ ನೀರಿನ ಬಳಕೆ ಬಗ್ಗೆ ಜನ ಪ್ರತಿನಿಧಿಗಳು ಪ್ರಶ್ನೆ ಎತ್ತುತ್ತಾರೆಯೇ ಎನ್ನುವದನ್ನು ಕಾದು ನೋಡಬೇಕಷ್ಟೇ.

ಭೀಮಾ ನದಿಯ ನೀರಿನ ಹಕ್ಕನ್ನು ಪಡೆದುಕೊಳ್ಳುವಲ್ಲಿ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುತ್ತೇವೆ
ಎಸ್.ಟಿ.ಪಾಟೀಲ (ನಾದ) ಪ್ರಗತಿಪರ ರೈತ
ಭೀಮಾ ನದಿ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದೆ. ಅದು ಬತ್ತದಂತೆ ಸರ್ಕಾರ ಕ್ರಮ ಜರುಗಿಸಬೇಕು.
ಸದಾಶಿವ ಪ್ಯಾಟಿ ಹಿಂಗಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ

ಭೀಮಾ ನದಿ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದೆ. ಅದು ಬತ್ತದಂತೆ ಸರ್ಕಾರ ಕ್ರಮ ಜರುಗಿಸಬೇಕು. ಸದಾಶಿವ ಪ್ಯಾಟಿ ಹಿಂಗಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ

ರಾಜ್ಯ ಸರ್ಕಾರದ ಇಚ್ಛಾಶಕ್ತಿ ಕೊರತೆ

ಕರ್ನಾಟಕದಲ್ಲಿ ಬೇಸಿಗೆ ಸಂದರ್ಭದಲ್ಲಿ ಭೀಮಾ ನದಿ ಬತ್ತುತ್ತದೆ. ಈ ಬಗ್ಗೆ ಬೇಸಿಗೆಯಲ್ಲಿ ನೀರು ಹರಿಸಿ ಎಂದು ಮನವಿ ಮಾಡಿಕೊಂಡರೂ ಕೂಡಾ ಮಹಾರಾಷ್ಟ್ರ ಸರ್ಕಾರ ನೀರು ಹರಿಸುವುದಿಲ್ಲ. ಈ ಬಗ್ಗೆ ನಮ್ಮ ನಾಯಕರು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸತ್ಯಾಗ್ರಹ ಮಾಡಿ ನಮ್ಮ ಹಕ್ಕು ಮಂಡನೆ ಮಾಡಿಲ್ಲ. ಭೀಮಾ ನದಿಯಲ್ಲಿ ನೀರು ಹರಿಯುತ್ತಿಲ್ಲ. ಭೀಮಾ ನದಿಗೆ ಮಳೆಗಾಲದಲ್ಲಿ ಬಂದ ನೀರಿನ್ನೇ ಮಾತ್ರ ಬಳಸಿಕೊಳ್ಳುತ್ತೇವೆ ವಿನಹ ಇದರಲ್ಲಿ ಹರಿಯುವ ನೀರನ್ನು ನಿಲ್ಲಿಸಿ ಬೇಸಿಗೆಯಲ್ಲಿ ಬಳಸಿಕೊಳ್ಳುವ ಯಾವುದೇ ಬೃಹತ್ ಯೋಜನೆ ನೀರ್ಮಿಸಿಲ್ಲ’ ಎಂಬುವುದು ರೈತರ ಆರೋಪವಾಗಿದೆ. ಬೇಸಿಗೆಯಲ್ಲಿ ಭೀಮಾ ನದಿ ಕರ್ನಾಟಕ ಭಾಗದಲ್ಲಿ ಸಂಪೂರ್ಣ ಒಣಗಿರುತ್ತದೆ. ಆಗ ನೀರಿಗಾಗಿ ಪ್ರತಿವರ್ಷವೂ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ನೀರಾವರಿ ಪ್ರಧಾನ ಕಾರ್ಯದರ್ಶಿಯವರಿಗೆ ಮನವರಿಕೆ ಮಾಡಿ ನೀರು ಪಡೆದುಕೊಳ್ಳುವ ಪರಿಸ್ಥಿತಿ ಇದೆ. ಅದು ಮಹಾರಾಷ್ಟ್ರದವರು ಬಿಡುವದು 2 ಟಿ.ಎಂ.ಸಿ ನೀರು ಮಾತ್ರ.

‘ಸಿದ್ಧೇಶ್ವರ ಶ್ರೀಗಳ ಮಾತಿಗೆ ಬೆಲೆ ನೀಡಲಿ’

ಈ ಹಿಂದೆ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರ ನೇತೃತ್ವದಲ್ಲಿ ಭೀಮೆಯಿಂದ ಕೃಷ್ಣೆಯವರೆಗೆ ಪಾದಯಾತ್ರೆ ಮಾಡಿ ಸರ್ಕಾರದ ಗಮನ ಸೆಳೆದಿದ್ದರು. ಈ ಕುರಿತು ನಡೆದ ಸಭೆಯಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ‘ಜಿಲ್ಲೆಯ ಶಾಸಕರಾದ ಬಸನಗೌಡ ಪಾಟೀಲ ಶಿವಾನಂದ ಪಾಟೀಲ ಎಂ.ಬಿ.ಪಾಟೀಲ ಒಂದಾಗಿ ಹೋರಾಡಿದರೆ ಈ ಭಾಗ ಅಮೆರಿಕಾದ ಕ್ಯಾಲಿಫೋರ್ನಿಯಾ ಆಗುತ್ತದೆ’ ಎಂದು ಹೇಳಿದ್ದರು. ಆದರೆ ಅವರಾರೂ ಒಂದಾಗಲಿಲ್ಲ. ಭೀಮಾ ನದಿಯ 15 ಟಿಎಂಸಿ ನೀರಿನ ಬಳಕೆಯಾಗಲಿಲ್ಲ. ಭೀಮಾ ನದಿಯ ನೀರಿನ ಬಳಕೆಯ ಬಗ್ಗೆ ರೈತರು ಹಲವಾರು ಬಾರಿ ಹೋರಾಟಗಳನ್ನು ಮಾಡಿದ್ದಾರೆ. ಆದರೆ ಸದನದಲ್ಲಿ ಈ ಕುರಿತು ಒಮ್ಮೆಯೂ ಚರ್ಚೆಯಾಗಿಲ್ಲ. ಭೀಮಾ ನದಿಯ ನೀರಿನ ಸದ್ಬಳಕೆಗೆ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಜನಸಾಮಾನ್ಯರು ದೂರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.