ADVERTISEMENT

25 ಅಡಿ ಎತ್ತರದ ಕಬ್ಬು‌ ಬೆಳೆದ ಸಹೋದರರು: ಉತ್ತರಪ್ರದೇಶಕ್ಕೆ ಮಾದರಿಯಾದ ಕರ್ನಾಟಕ

ಚಂದ್ರಶೇಖರ ಕೊಳೇಕರ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ನಾರಾಯಣ ಸಾಳುಂಕೆ ಸಹೋದರರು ಬೆಳೆದ 25 ಅಡಿ ಎತ್ತರದ ಕಬ್ಬಿನ ಬೆಳೆಯನ್ನು ಉತ್ತರ ಪ್ರದೇಶದ ರೈತರು ಮಂಗಳವಾರ ವೀಕ್ಷಿಸಿದರು
ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ನಾರಾಯಣ ಸಾಳುಂಕೆ ಸಹೋದರರು ಬೆಳೆದ 25 ಅಡಿ ಎತ್ತರದ ಕಬ್ಬಿನ ಬೆಳೆಯನ್ನು ಉತ್ತರ ಪ್ರದೇಶದ ರೈತರು ಮಂಗಳವಾರ ವೀಕ್ಷಿಸಿದರು   

ನಿಡಗುಂದಿ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಗೊಳಸಂಗಿ ಗ್ರಾಮದ ಸಾಳುಂಕೆ ಪರಿವಾರದ ನಿವೃತ್ತ ಸೈನಿಕ ನಾರಾಯಣ ಹಾಗೂ ಅವರ ಸಹೋದರ ಸಿದ್ದುಬಾ ಅವರು 23ರಿಂದ 25 ಅಡಿ ಎತ್ತರದ ಕಬ್ಬು ಬೆಳೆದಿದ್ದಾರೆ.

5 ಎಕರೆ ಗದ್ದೆಯಲ್ಲಿ 686 ಟನ್ ಕಬ್ಬು ಬೆಳೆದಿದ್ದಾರೆ. ಸಾಮಾನ್ಯವಾಗಿ ಒಂದು ಕಬ್ಬು 12 ಅಡಿ ಎತ್ತರ ಮತ್ತು 2 ಕೆಜಿ ತೂಕ ಇರುತ್ತದೆ. ಆದರೆ ಇಸ್ರೇಲ್ ತಂತ್ರಜ್ಞಾನ ಬಳಸಿ ಬೆಳೆಸಲಾದ ಕಬ್ಬು 3 ರಿಂದ 4.7 ಕೆಜಿ ತೂಗುತ್ತದೆ. 28 ರಿಂದ 32 ಗಣಿಕೆಯಿದ್ದು, 23 ರಿಂದ 25 ಅಡಿ ಎತ್ತರ ಬೆಳೆದಿದೆ.

ಈ ಕಬ್ಬು ನೋಡಲು ಮಂಗಳವಾರ ಉತ್ತರ ಪ್ರದೇಶದಿಂದ ರೈತರಾದ ರವಿಂದರ್‌ಸಿಂಗ್, ಮಹಾರಾಜಸಿಂಗ್, ಮುನೇಂದ್ರಸಿಂಗ್, ಮುಖೇಶಸಿಂಗ್, ಅಮ್ರೋಹಾ ಅವರು ಗ್ರಾಮಕ್ಕೆ ಭೇಟಿ ನೀಡಿದರು. ಈ ಕಬ್ಬು ಬೆಳೆಯ ಸಮಗ್ರ ಮಾಹಿತಿ ಕಲೆ ಹಾಕಿದ ಅವರು ಇಲ್ಲಿಯ ಮಾದರಿಯನ್ನು ತಮ್ಮ ಊರಿನಲ್ಲೂ ಅಳವಡಿಸಿಕೊಳ್ಳುವುದಾಗಿ ತಿಳಿಸಿದರು.

ADVERTISEMENT

ಕಬ್ಬಿನ ಬೆಳೆಯ ಬೀಜ ವಿತರಕ ಮಹಾರಾಷ್ಟ ಕಾಗವಾಡದ ಸುರೇಶ ಕಾಂಬಳೆ ಮಾತನಾಡಿ, ‘ಅಕ್ಕಪಕ್ಕದ ರಾಜ್ಯಗಳ ರೈತರು ನಮ್ಮ ಬಳಿ ಕಬ್ಬಿನ ಬೀಜ ಒಯ್ದು ನಾಟಿ ಮಾಡಿದ್ದಾರೆ. ಆದರೆ, ಗೊಳಸಂಗಿಯ ಸಾಳುಂಕೆ ಸಹೋದರರು ಬೆಳೆದಿರುವುದೇ ವಿಶಿಷ್ಟವಾದದ್ದು’ ಎಂದರು.

‘ಇಷ್ಟು ಹೆಚ್ಚಿನ ಪ್ರಮಾಣದ ಬೆಳೆ ಬೆಳೆಯಲು ವಿಜ್ಞಾನಿಗಳಾದ ಸಂಜಯ ಪಾಟೀಲ, ಎಸ್.ಎಂ. ಮರೆಗುದ್ದಿ ಮತ್ತು ರವೀಂದ್ರ ಗಡಾದ ಅವರ ಮಾರ್ಗದರ್ಶನ ಕಾರಣ. ಎಸ್‌ಎನ್‌ಕೆ 13374 ಬೀಜದ ನಾಟಿ ಮಾಡಿ ಆರಂಭದಲ್ಲಿ ಹನಿ ನೀರಾವರಿ ಪದ್ಧತಿ ಅನುಸರಿಸಿದೆವು. ತಿಪ್ಪೆ ಗೊಬ್ಬರ, ನೂಟ್ರಿಮೆಂಟ್ ರಸಗೊಬ್ಬರ ಬಳಸಿದ್ದೇವೆ. ಸಾಲಿನಿಂದ ಸಾಲಿಗೆ 7 ಅಡಿ ಮತ್ತು ಗಿಡದಿಂದ ಗಿಡಕ್ಕೆ 2 ಅಡಿ ಅಂತರದಲ್ಲಿ ಜಿಗ್‌ಜಾಗ್‌ ಮಾದರಿಯಲ್ಲಿ ಬೆಳೆಸಿದೆವು’ ಎಂದು ರೈತ ನಾರಾಯಣ ಅರ್ಜುನ ಸಾಳುಂಕೆ ತಿಳಿಸಿದರು.

ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ನಾರಾಯಣ ಸಾಳುಂಕೆ ಸಹೋದರರು ಬೆಳೆದ 25 ಅಡಿ ಎತ್ತರದ ಕಬ್ಬಿನ ಬೆಳೆಯನ್ನು ಉತ್ತರ ಪ್ರದೇಶದ ರೈತರು ಮಂಗಳವಾರ ವೀಕ್ಷಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.